ಕೊಪ್ಪಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಕೊಪ್ಪ ಪಟ್ಟಣದ ಪ್ರಮುಖ ರಸ್ತೆಗಳು ಹಳ್ಳ-ಗುಂಡಿಗಳಿಂದ ಕೂಡಿದ್ದು, ಸಾರ್ವ ಜನಿಕರು ಪ್ರತಿನಿತ್ಯ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ರಸ್ತೆ ದುಸ್ಥಿತಿಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ತೊಂದರೆ ಅನುಭವಿಸುತ್ತಿದ್ದರೂ ಸೂಕ್ತ ಕ್ರಮ ವಹಿಸದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ
ಕನ್ನಡಪ್ರಭ ವಾರ್ತೆ ಕೊಪ್ಪಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಕೊಪ್ಪ ಪಟ್ಟಣದ ಪ್ರಮುಖ ರಸ್ತೆಗಳು ಹಳ್ಳ-ಗುಂಡಿಗಳಿಂದ ಕೂಡಿದ್ದು, ಸಾರ್ವ ಜನಿಕರು ಪ್ರತಿನಿತ್ಯ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ರಸ್ತೆ ದುಸ್ಥಿತಿಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಪಟ್ಟಣದ ಮೇಲಿನ ಪೇಟೆಯಿಂದ ಕೆಳಗಿನ ಪೇಟೆ, ಪೊಲೀಸ್ ಠಾಣೆ ಎದುರು, ವೀರಭದ್ರ ದೇವಸ್ಥಾನ ಎದುರು, ಕಾಚ್ಗಲ್ ರಸ್ತೆ, ಮಸೀದಿ ಎದುರು ಹಾಗೂ ಬಸ್ ನಿಲ್ದಾಣದಿಂದ ಟೋಲ್‌ಗೇಟ್–ಮುಸರೆಹಳ್ಳಿ ರಸ್ತೆಯವರೆಗೆ ಹಲವು ಪ್ರಮುಖ ರಸ್ತೆಗಳಲ್ಲಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಪ್ರತಿದಿನ ಸಾವಿರಾರು ವಾಹನಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹಾಗೂ ವ್ಯಾಪಾರಿಗಳು ಇದೇ ರಸ್ತೆಗಳ ಮೂಲಕ ಸಂಚರಿಸುತ್ತಿದ್ದಾರೆ.ಮಳೆ ಬಂದರೆ ಮತ್ತಷ್ಟು ಅಪಾಯ: ಮಳೆ ಬಂದ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ನಿಂತುಕೊಳ್ಳುವುದರಿಂದ ರಸ್ತೆಯಲ್ಲಿರುವ ಗುಂಡಿಗಳ ಆಳ ತಿಳಿಯದೆ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ರಾತ್ರಿ ವೇಳೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ.ಗುಂಡಿಗಳಿಂದ ವಾಹನಗಳ ಟೈರ್, ಚಕ್ರ ಹಾಗೂ ಸಸ್ಪೆನ್ಷನ್‌ಗಳಿಗೆ ಹಾನಿಯಾಗುತ್ತಿದ್ದು, ವಾಹನ ದುರಸ್ತಿಗೆ ಹೆಚ್ಚುವರಿ ಹಣ ಖರ್ಚು ಮಾಡಬೇಕಾಗಿದೆ. ವಾಹನಗಳು ಗುಂಡಿಗಳಲ್ಲಿ ಸಂಚರಿಸುವಾಗ ರಸ್ತೆ ಬದಿಯ ಅಂಗಡಿಗಳ ಮುಂದೆ ಕೆಸರು ನೀರು ಚಿಮ್ಮುವುದರಿಂದ ವ್ಯಾಪಾರಿಗಳಿಗೂ ತೊಂದರೆಯಾಗುತ್ತಿದೆ.ತೇಪೆ ಬದಲು ಶಾಶ್ವತ ಪರಿಹಾರಕ್ಕೆ ಆಗ್ರಹ: ಹಲವು ವರ್ಷಗಳಿಂದ ಹಳೆ ಸಿಮೆಂಟ್ ರಸ್ತೆಗಳ ಮೇಲೆ ಆಗಾಗ ಟಾರ್ ಹಾಕಿ ತೇಪೆ ಹಾಕಲಾಗುತ್ತಿದೆ. ಆದರೆ ಮಳೆ ಬಂದ ಕೆಲವೇ ದಿನಗಳಲ್ಲಿ ಟಾರ್ ಕಿತ್ತುಹೋಗಿ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ ಎಂಬುದು ಸಾರ್ವಜನಿಕರ ಆರೋಪ.ತಾತ್ಕಾಲಿಕವಾಗಿ ಗುಂಡಿ ಮುಚ್ಚುವುದರಿಂದ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದಿಲ್ಲ. ಪ್ರತಿವರ್ಷ ಗುಂಡಿ ಮುಚ್ಚಲು ಅನುದಾನ ವ್ಯಯಿಸುವ ಬದಲು ಗುಣಮಟ್ಟದ ರಸ್ತೆ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಕಾಮಗಾರಿಗಳ ಗುಣಮಟ್ಟದ ಮೇಲೂ ನಿಗಾ ವಹಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.ದೊಡ್ಡ ಅಪಘಾತ ಸಂಭವಿಸಿದ ಬಳಿಕವೇ ಆಡಳಿತ ಎಚ್ಚೆತ್ತುಕೊಳ್ಳಬೇಕೇ? ಎಂದು ಪ್ರಶ್ನಿಸಿರುವ ಸಾರ್ವಜನಿಕರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಮಸ್ಯೆಯ ವಾಸ್ತವ ಸ್ಥಿತಿ ಅರಿತು ತಕ್ಷಣ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.