ಸಾರಾಂಶ
ಬೆಂಗಳೂರು : ಪ್ರೀತಿಯ ವಿಷಯವನ್ನು ಸಹೋದರ ಮತ್ತು ತಾಯಿಗೆ ಹೇಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಪರಿಚಿತ ವಿದ್ಯಾರ್ಥಿನಿಯಿಂದ 75 ಗ್ರಾಂ ಚಿನ್ನಾಭರಣ ಹಾಗೂ ₹1.25 ಲಕ್ಷ ನಗದು ಸುಲಿಗೆ ಮಾಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಲಸಂದ್ರದ ಕಾಕತೀಯನಗರ ನಿವಾಸಿ ತೇಜಸ್(19) ಬಂಧಿತ. ಆರೋಪಿಯಿಂದ ₹3.40 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ನಾಯ್ಡುಲೇಔಟ್ ನಿವಾಸಿ ಹೇಮಾ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ನಾಯ್ಡು ನಗರ ನಿವಾಸಿಯಾದ 19 ವರ್ಷದ ವಿದ್ಯಾರ್ಥಿನಿಗೆ ಎರಡು ವರ್ಷದ ಹಿಂದೆ ಕಾಲೇಜಿನ ಸಹಪಾಠಿ ಪ್ರೀತಂ ಎಂಬಾತನ ಮುಖಾಂತರ ತೇಜಸ್ ಪರಿಚಿತನಾಗಿದ್ದ. ಬಳಿಕ ತೇಜಸ್, ವಿದ್ಯಾರ್ಥಿನಿಯ ಮೊಬೈಲ್ ಸಂಖ್ಯೆ ಪಡೆದು ಆಗಾಗ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ. ಅಂತೆಯೇ ಆಕೆಯ ಮನೆಯವರು ಹಾಗೂ ಪ್ರಿಯಕರನ ಬಗ್ಗೆ ತಿಳಿದುಕೊಂಡಿದ್ದಾನೆ.
ಕಳೆದ ಜೂನ್‌ನಲ್ಲಿ ವಿದ್ಯಾರ್ಥಿನಿಗೆ ಕರೆ ಮಾಡಿದ್ದ ತೇಜಸ್, ನಿನ್ನ ಪ್ರೀತಿ ವಿಚಾರವನ್ನು ನಿನ್ನ ಸಹೋದರ ಮತ್ತು ತಾಯಿಗೆ ತಿಳಿಸುತ್ತೇನೆ. ಈ ವಿಚಾರ ತಿಳಿಸಬಾರದು ಎಂದರೆ, ಮನೆಯಲ್ಲಿರುವ ಚಿನ್ನಾಭರಣ ಹಾಗೂ ಹಣವನ್ನು ನನಗೆ ಕೊಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಅಂತೆಯೇ ಎರಡ್ಮೂರು ಬಾರಿ ಮನೆ ಹಾಗೂ ಕಾಲೇಜಿನ ಬಳಿ ತೆರಳಿ ವಿದ್ಯಾರ್ಥಿನಿಗೆ ಹೆದರಿಸಿದ್ದಾನೆ.
ಹೆದರಿ ಚಿನ್ನಾಭರಣ-ನಗದು ಕೊಟ್ಟಳು:
ಪ್ರೀತಿ ವಿಚಾರ ಸಹೋದರ ಮತ್ತು ತಾಯಿಗೆ ಗೊತ್ತಾದರೆ, ಮುಂದಿನ ವ್ಯಾಸಂಗಕ್ಕೆ ತೊಂದರೆಯಾಗುವ ಭಯದಲ್ಲಿ ವಿದ್ಯಾರ್ಥಿನಿ, ಮನೆಯಲ್ಲಿದ್ದ 75 ಗ್ರಾಂ ಚಿನ್ನಾಭರಣ ಮತ್ತು ₹1.25 ಲಕ್ಷ ನಗದು ಹಣವನ್ನು ಆರೋಪಿ ತೇಜಸ್‌ಗೆ ನೀಡಿದ್ದಾಳೆ. ಇತ್ತೀಚೆಗೆ ವಿದ್ಯಾರ್ಥಿನಿಯ ತಾಯಿ ಹೇಮಾ ಅವರು ಸಂಬಂಧಿಕರ ಕಾರ್ಯಕ್ರಮಕ್ಕೆತೆರಳಲು ಬೀರು ತೆರೆದು ನೋಡಿದಾಗ ಚಿನ್ನಾಭರಣ ಹಾಗೂ ನಗದು ಇಲ್ಲದಿರುವುದು ಕಂಡು ಬಂದಿದೆ.
ಈ ಬಗ್ಗೆ ಪುತ್ರಿಯನ್ನು ಪ್ರಶ್ನೆ ಮಾಡಿದಾಗ, ಸ್ನೇಹಿತ ತೇಜಸ್ ಬ್ಲ್ಯಾಕ್ ಮೇಲ್ ವಿಚಾರ ತಿಳಿಸಿದ್ದಾಳೆ. ಬಳಿಕ ಹೇಮಾ ಅವರು ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಡೆಲಿವರಿ ಬಾಯ್
ಬಂಧಿತ ಆರೋಪಿ ತೇಜಸ್ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದಾನೆ. ಸ್ನೇಹಿತನ ಮುಖಾಂತರ ಪರಿಚಿತಳಾದ ವಿದ್ಯಾರ್ಥಿನಿಯ ಪ್ರೀತಿ ವಿಚಾರ ಹಾಗೂ ಮನೆಯವರ ಬಗ್ಗೆ ತಿಳಿದುಕೊಂಡಿದ್ದಾನೆ. ಬಳಿಕ ಸುಲಭವಾಗಿ ಹಣ ಗಳಿಸುವ ಸುಲುವಾಗಿ ಪರಿಚಿತ ವಿದ್ಯಾರ್ಥಿನಿಯ ಪ್ರೀತಿ ವಿಚಾರ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಚಿನ್ನಾಭರಣ ಮತ್ತು ನಗದು ಸಲಿಗೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.