ಪಾಲಿಕೆ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು: ಡಾ.ಪ್ರಭಾ

| Published : Oct 13 2024, 01:10 AM IST

ಸಾರಾಂಶ

ಇ-ಸ್ವತ್ತು ಸೇರಿದಂತೆ ಪಾಲಿಕೆಯಲ್ಲಿ ಸಾರ್ವಜನಿಕರ ವಿವಿಧ ಕೆಲಸ, ಕಾರ್ಯ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆ ಮೇಯರ್‌ ಹಾಗೂ ಆಯುಕ್ತರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

- ಇ-ಸ್ವತ್ತು ಇನ್ನಿತರೆ ಜನಸೇವೆಗಳಲ್ಲಿ ವಿಳಂಬ ಮಾಡಿದರೆ ಸಹಿಸೋದಿಲ್ಲ ಎಂದು ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇ-ಸ್ವತ್ತು ಸೇರಿದಂತೆ ಪಾಲಿಕೆಯಲ್ಲಿ ಸಾರ್ವಜನಿಕರ ವಿವಿಧ ಕೆಲಸ, ಕಾರ್ಯ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆ ಮೇಯರ್‌ ಹಾಗೂ ಆಯುಕ್ತರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಪಾಲಿಕೆಯಲ್ಲಿ ನೂತನ ಮೇಯರ್ ಕೆ.ಚಮನ್ ಸಾಬ್‌ ಅವರ ಕಚೇರಿ ಉದ್ಘಾಟಿಸಲು ತೆರಳಿದ್ದ ವೇಳೆ ಸಾರ್ವಜನಿಕರು ಪಾಲಿಕೆಯಲ್ಲಿ ಇ-ಸ್ವತ್ತು ಸೇರಿದಂತೆ ವಿವಿಧ ಕೆಲಸ, ಕಾರ್ಯ ಮಾಡಿಕೊಡಲು ಅಧಿಕಾರಿ, ಸಿಬ್ಬಂದಿ ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಎಂದು ದೂರುಗಳ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸಂಸದೆ ಡಾ.ಪ್ರಭಾ ಪಾಲಿಕೆ ಆಡಳಿತಕ್ಕೆ ಚುರುಕು ಮುಟ್ಟಿಸಿದರು.

ಸಾರ್ವಜನಿಕರ ಕೆಲಸ, ಕಾರ್ಯ ಮಾಡಿಕೊಡಲು ವಿಳಂಬ ಧೋರಣೆ ತೋರಿದರೆ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮೇಯರ್, ಆಯುಕ್ತರು ಗಮನ ಹರಿಸಬೇಕು. ಪಾಲಿಕೆಯಲ್ಲಿ ಒಂದೇ ವಿಭಾಗದಲ್ಲಿ, ಒಂದೇ ಕಡೆ ಬಹಳ ದಿನಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಯನ್ನು ತಕ್ಷಣ ಬದಲಾವಣೆ ಮಾಡಬೇಕು ಎಂದು ಆದೇಶಿಸಿದರು.

ಯಾವುದೇ ಅಧಿಕಾರಿ, ಸಿಬ್ಬಂದಿ ಬಗ್ಗೆ ಪಾಲಿಕೆಯಲ್ಲಿ ಭ್ರಷ್ಟಾಚಾರದ ಬಗ್ಗೆ ದೂರು ಬಂದರೆ ಅಂತಹವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಬೇಕು. ಸಣ್ಣಪುಟ್ಟ ಕೆಲಸಕ್ಕೂ ವಿನಾಕಾರಣ ಅಲೆದಾಡಿಸುವುದು ಇನ್ನು ನಿಲ್ಲಬೇಕು. ತ್ವರಿತವಾಗಿ ಜನರ ಕೆಲಸ, ಕಾರ್ಯಗಳು ಪಾಲಿಕೆಯಲ್ಲಿ ಆಗಬೇಕು ಎಂದು ಸಂಸದೆ ಸೂಚಿಸಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮೇಯರ್ ಕೆ.ಚಮನ್ ಸಾಬ್‌, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಉಪ ಮೇಯರ್ ಶಾಂತಕುಮಾರ ಸೋಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಮಾಜಿ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ನಾಗರಾಜ, ಸವಿತಾ ಹುಲ್ಮನಿ ಗಣೇಶ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್, ಭೋವಿ ಸಮಾಜದ ಜಯಣ್ಣ, ಪಾಲಿಕೆ ಅಧಿಕಾರಿ, ಸಿಬ್ಬಂದಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

- - - -12ಕೆಡಿವಿಜಿ3, 4:

ದಾವಣಗೆರೆ ಪಾಲಿಕೆಯಲ್ಲಿ ಮೇಯರ್ ಕೆ.ಚಮನ್ ಸಾಬ್‌ ಕಚೇರಿ ಉದ್ಘಾಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭಾಗವಹಿಸಿದರು.

-12ಕೆಡಿವಿಜಿ5: ದಾವಣಗೆರೆ ಪಾಲಿಕೆಯಲ್ಲಿ ಮೇಯರ್ ಕೆ.ಚಮನ್ ಸಾಬ್‌ ಕಚೇರಿ ಉದ್ಘಾಟನೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಇನ್ನಿತರ ಗಣ್ಯರು ಪಾಲ್ಗೊಂಡರು.