ಮಲೆನಾಡ ಹೆಬ್ಬಾಗಿಲಿನಲ್ಲಿ ಮಾಯವಾಗುತ್ತಿರುವ ಮಾವಿನ ಬೆಳೆ

| Published : Sep 17 2025, 01:05 AM IST

ಸಾರಾಂಶ

ತರೀಕೆರೆ, ಎವರ್ ಗ್ರೀನ್ ಪ್ರದೇಶವೆಂದೆ ಕರೆಸಿಕೊಳ್ಳುತ್ತಿದ್ದ ಮಲೆನಾಡ ಹೆಬ್ಬಾಗಿಲಾದ ತರೀಕೆರೆ ಎಲ್ಲ ಬೆಳೆಗಳಿಗೂ ಪೂರಕವಾಗುವ ಹವಾಗುಣ ಹೊಂದಿದ್ದರಿಂದ ರೈತಾಪಿ ಜನರ ಅಚ್ಚುಮೆಚ್ಚಿನ ಪ್ರದೇಶವಾಗಿತ್ತು.ಇಂತಹ ಪ್ರದೇಶ ಇಂದು ಹಲವು ಕೃಷಿ ಬೆಳೆಗಳಿಂದಲೇ ವಿಮುಖವಾಗುವಂತಹ ಮಟ್ಟದಲ್ಲಿ ತಾಲೂಕಿನ ವಾತಾವರಣ ಬದಲಾಗಿರುವುದು ಹಲವಾರು ಬೆಳೆ ಹಾಗೂ ಬೆಳೆಗಾರರಿಗೂ ಮಾರಕವಾಗಿರುವುದು ಖೇದಕರ.

- 2008-09 ರಲ್ಲಿ ಸುಮಾರು 2232 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಮಾವು । 2021-22ರಲ್ಲಿ 1614 ಹೆಕ್ಟರ್ ಪ್ರದೇಶಕ್ಕೆ ಇಳಿಕೆ

ಅನಂತ ನಾಡಿಗ್ ಕನ್ನಡಪ್ರಭ ವಾರ್ತೆ, ತರೀಕೆರೆ

ಎವರ್ ಗ್ರೀನ್ ಪ್ರದೇಶವೆಂದೆ ಕರೆಸಿಕೊಳ್ಳುತ್ತಿದ್ದ ಮಲೆನಾಡ ಹೆಬ್ಬಾಗಿಲಾದ ತರೀಕೆರೆ ಎಲ್ಲ ಬೆಳೆಗಳಿಗೂ ಪೂರಕವಾಗುವ ಹವಾಗುಣ ಹೊಂದಿದ್ದರಿಂದ ರೈತಾಪಿ ಜನರ ಅಚ್ಚುಮೆಚ್ಚಿನ ಪ್ರದೇಶವಾಗಿತ್ತು.ಇಂತಹ ಪ್ರದೇಶ ಇಂದು ಹಲವು ಕೃಷಿ ಬೆಳೆಗಳಿಂದಲೇ ವಿಮುಖವಾಗುವಂತಹ ಮಟ್ಟದಲ್ಲಿ ತಾಲೂಕಿನ ವಾತಾವರಣ ಬದಲಾಗಿರುವುದು ಹಲವಾರು ಬೆಳೆ ಹಾಗೂ ಬೆಳೆಗಾರರಿಗೂ ಮಾರಕವಾಗಿರುವುದು ಖೇದಕರ.

ಭತ್ತ, ರಾಗಿ, ತೆಂಗು ಅಡಕೆ, ಬಾಳೆ, ಕಬ್ಬು ಜೋಳ ಇತ್ಯಾದಿ ಬಹು ವಾರ್ಷಿಕ, ವಾರ್ಷಿಕ ಮತ್ತು ಅರ್ಧ ವಾರ್ಷಿಕ ಬೆಳೆಗಳು, ಕೊತ್ತಂಬರಿ, ಶೇಂಗಾ, ಹುರುಳಿಯಂತಹ ದ್ವಿದಳ ಧಾನ್ಯಗಳು, ಈರುಳ್ಳಿ, ಅಲೂಗೆಡ್ಡೆ ವೀಳ್ಳೆದೆಲೆಯಂತಹ ವಾಣಿಜ್ಯ ಬೆಳೆಗಳು, ಆಯಾ ಕಾಲದ ಹಣ್ಣುಗಳು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲೂ ಬಹುಹಿಂದಿನಿಂದಲೂ ಹೆಸರಾಗಿದ್ದ ತರೀಕೆರೆ ತಾಲೂಕು ರೈತರ ಕೈಹಿಡಿದು ನಡೆಸಿದೆ. ಆದರೆ ಇತ್ತೀಚಿನ ಹಾವಾಮಾನ ವೈಪರೀತ್ಯದಿಂದ ಉತ್ತಮ ಫಸಲು ಹಾಗೂ ಆಯಾ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ದರ ಸಿಗದೆ ರೈತರು ಕೈಸುಟ್ಟುಕೊಳ್ಳುವಂತಾಗಿದೆ. ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನಲ್ಲಿ 2008-09 ರಲ್ಲಿ ಸುಮಾರು 2232 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಹಣ್ಣುಗಳ ರಾಜ ಎಂದೇ ಹೆಸರಾದ ಮಾವು ಕ್ರಮೇಣ 2021-22 ನೇ ಸಾಲಿನಲ್ಲಿ 1614 ಹೆಕ್ಟರ್ ಪ್ರದೇಶಕ್ಕೆ ಇಳಿಕೆಯಾಗಿ 2024-25 ನೇ ಸಾಲಿನಲ್ಲಿ ಕೇವಲ 655 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಂತ ತಲುಪಿದೆ ಎಂಬುದು ಮಾವಿನ ಕೃಷಿಯ ಮೇಲೆ ಎಂತಹ ಪರಿಣಾಮ ಬೀರಿದೆ ಎಂಬುದಕ್ಕೆ ನಿದರ್ಶನವಾಗಿದೆ.

ತಾಲೂಕಿನಲ್ಲಿ ಬಾದಾಮಿ (ಆಪೂಸ್), ರಸಪುರಿ, ತೋತಾಪುರಿ, ನೀಲಂ , ಮಲಗೋಬ, ಮಲ್ಲಿಕಾ ಹಾಗೂ ಇತರೆ ತಳಿಗಳು ಬೆಳೆಯಲಾಗುತ್ತಿತ್ತು. ಪ್ರಪಂಚದ ಅತಿ ದುಬಾರಿ ಮಾವಿನ ಹಣ್ಣಾದ ರುಬಿ ಕಲರ್ ಮಾವು (ನೇರಳೆ ಬಣ್ಣದ್ದು) ಇತ್ತೀಚಿನ ದಿನದಲ್ಲಿ ಒಂದು-ಎರಡು ಗಿಡಗಳು ಅಲ್ಲಲ್ಲಿ ಕಂಡು ಬರುತ್ತಿತ್ತು. ಹಲವಾರು ವಿಧದ ಹಣ್ಣುಗಳನ್ನು ಅಪಾರ ಪ್ರಮಾಣದಲ್ಲಿ ಬೆಳೆ ಯುತ್ತಿದ್ದ ಪ್ರದೇಶದಲ್ಲಿನ ಈ ಭಾರೀ ವ್ಯತ್ಯಾಸಕ್ಕೆ ಈ ಬೆಳೆಯಿಂದ ಬರುವ ಆದಾಯ ಕ್ಷೀಣಿಸಿರುವುದೇ ಕಾರಣ ಎನ್ನಲು ಅಡ್ಡಿಯಿಲ್ಲ.ಅಕಾಲದಲ್ಲಿ ಚಿಗುರು ಹೀಚುಃ ಬೆಳೆಗಳು ಕೈಕೊಡಲು ಕಳೆದ 4-6 ವರ್ಷಗಳಿಂದ ಮಾವಿನ ಬೆಳೆಗೆ ಪೂರಕ ವಾತಾವರಣವಿಲ್ಲ. ಅಕಾಲಿಕ ಮಳೆಯಿಂದ ಮಾವಿನ ಮರಗಳಲ್ಲಿ ಅಕಾಲದಲ್ಲಿ ಚಿಗುರು ಹೂವು ಬಂದು, ಹೂವುಗಳು ಹೀಚಾಗುವಷ್ಟರಲ್ಲಿ ವಿವಿಧ ರೋಗಗಳು ಮಾವಿಗೆ ಬಾಧಿಸುತ್ತಿವೆ. ಕೆಲ ದಿನಗಳು ವಿಪರೀತ ಮಂಜು ಇದ್ದರೆ, ಕೆಲ ದಿನಗಳು ವಿಪರೀತ ಬಿಸಿಲು, ಮತ್ತೆ ಇನ್ನಷ್ಟು ದಿನ ದಟ್ಟ ಮೋಡ ಕವಿದ ವಾತಾವರಣದಿಂದ ಮಾವಿನ ಮರಗಳಿಗೆ ಮೇಲಿಂದ ಮೇಲೆ ಹದಗೆಟ್ಟ ವಾತಾವರಣದ ಪೆಟ್ಟು ಬಿದ್ದ ಪರಿಣಾಮ ಗುಣಮಟ್ಟದ ಮಾವು ಸಿಗದಾಗಿದೆ. ಮಾವಿನ ಮರಗಳಲ್ಲಿ ಉತ್ತಮ ಫಸಲು ಬಂದು, ಇಳುವರಿ ಹೆಚ್ಚಲು ಪ್ರಕೃತಿಯೂ ಪೂರಕವಾಗಿರುವುದು ಅತ್ಯಂತ ಮುಖ್ಯ ಎಂಬುದು ಅಷ್ಟೇ ಸತ್ಯ ಸಂಗತಿ.

ಈ ಎಲ್ಲ ಬೆಳೆಗಳೂ ವರ್ಷದ ಆಯಾ ಋತುಮಾನ, ನಿರ್ಧಿಷ್ಟ ಹವಾಗುಣ, ವಾರ್ಷಿಕ ಮಳೆ, ಪ್ರಕೃತಿ ಸಹಜವಾದ ಬದಲಾವಣೆ ಯನ್ನು ಆಧರಿಸಿ ಫಸಲು ನೀಡುತ್ತವೆ. ಯಾವುದೇ ಬೆಳೆ ಉತ್ತಮ ಫಸಲು ನೀಡಲು ರೈತನು ಬೆಳೆ ನಿರ್ವಹಣೆ ಮಾಡುವ ಜತೆಗೆ ವಾತಾವರಣವೂ ಪೂರಕವಾಗಿರಬೇಕು.ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಹೆಚ್ಚು ಉಷ್ಣಾಂಶದಿಂದ ಕೂಡಿದ ಬಾರಿ ಪ್ರಮಾಣದ ಬೇಸಿಗೆ, ಅವೇಳೆಯಲ್ಲಿ ಮೋಡಕವಿದು, ಗುಡುಗು, ಮಿಂಚು ಮತ್ತು ವಾಡಿಕೆ ಮೀರಿ ಸುರಿದ ಮಳೆ, ಕ್ಷೀಣಿಸಿದ ಚಳಿಗಾಲ, ವಿಪರೀತ ಮಂಜನ್ನು ತಾಳಿಕೊಳ್ಳದ ಮಾವಿನ ಮರಗಳಿಂದ ಭಾರೀ ನಷ್ಟ ವಾಗುತ್ತಿದೆ. ಔಷಧ ಸಿಂಪಡಣೆ, ಗೊಬ್ಬರಕ್ಕೆ ಖರ್ಚು ಮಾಡಿದ ಹಣವೂ ವಾಪಸು ಬಾರದ ಸ್ಥಿತಿಯಿಂದ ಅತ್ತ ಬೆಳೆ ಗಾರರಿಗೂ ಕಷ್ಟ ಇತ್ತ ವರ್ತಕರಿಗೂ ನಷ್ಟ ಎಂಬಂತಾಗಿರುವುದು ಮಾವಿನ ಬೆಳೆ ಬೆಳೆಯುವ ಪ್ರದೇಶ ಕುಂಠಿತವಾಗಲು ಪ್ರಮುಖ ಕಾರಣ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಲೋಡ್ ಮತ್ತು ಅನ್ ಲೋಡ್ ದುಡ್ಡು ಕೂಡ ಗಿಟ್ಟದೆ ಅಪಾರ ಪ್ರಮಾಣದಲ್ಲಿ ಸಮಯ, ಹಣ, ಶ್ರಮ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿರುವುದರಿಂದ ಕ್ರಮೇಣ ಮಾವು ಬೆಳೆಯುವ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದೆ. ಯಾವುದೋ ಒಂದು ವರ್ಷ ಇಂತಹ ನಷ್ಟವನ್ನು ಬೆಳೆಗಾರರು ತಡೆದುಕೊಳ್ಳಬಹುದು. ಆದರೆ ನಿರಂತರವಾಗಿ ವರ್ಷಂಪ್ರತಿ ಒಂದಲ್ಲಾ ಒಂದು ಕಾರಣ ದಿಂದ ಮಾವಿನ ಬೆಳೆಗೆ ಮೇಲಿಂದ ಮೇಲೆ ಪೆಟ್ಟು ಬಿದ್ದರೆ, ಮರಗಳು ತಾನೇ ಹೇಗೆ ಉಳಿದೀತು, ಫಲ ಹೇಗೆ ಬಿಟ್ಟೀತು.

ನಿರಾಶರಾದ ಬೆಳೆಗಾರರುಃ ತರೀಕೆರೆ ಮತ್ತು ತರೀಕೆರೆ ಸುತ್ತಮುತ್ತ ನೂರಾರು ಎಕರೆಯಲ್ಲಿ ಸಾವಿರಾರು ಮಾವಿನ ಮರ ಗಳನ್ನು ವರ್ಷಾನುಗಟ್ಟಲೇ ಶ್ರಮ ಪಟ್ಟು ಬೆಳೆಸಿ, ಪೋಷಿಸಿದರೂ ವಾತಾವರಣ ವೈಪರೀತ್ಯದಿಂದ ಇತ್ತ ಇಳುವರಿಯೂ ಇಲ್ಲದೆ, ಅತ್ತ ಮಾವಿಗೆ ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲದೆ ಬೆಳೆಗಾರರು ನಿರಾಶರಾಗಿದ್ದಾರೆ.ಈ ಪರಿಸ್ಥಿತಿ ಪದೇ ಪದೇ ಎದುರಾದಾಗುತ್ತಿದೆ. ಹಾಗಾಗಿ ಒಂದು ಕಾಲದಲ್ಲಿ ಗುಣಮಟ್ಟದ ಆರೋಗ್ಯಕರ, ರುಚಿಕರ ಮಾವಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆ ಪಡೆದಿದ್ದ ತರೀಕೆರೆಯ ವಿವಿಧ ಬಗೆಯ ಮಾವುಗಳು ಇತ್ತೀಚಿನ ವರ್ಷಗಳಲ್ಲಿ ಮಾಯ ವಾಗುತ್ತಿದೆ ಎಂಬುದು ನೋವಿನ ಸಂಗತಿ ಎನ್ನುತ್ತಾರೆ ಅನೇಕ ಹಿರಿಯರು.

--ಕೋಟ್ಃ--

ತರೀಕೆರೆ ತಾಲೂಕಿನಲ್ಲಿ ತೆಂಗು, ಅಡಕೆಯಂತೆ ಮಾವು ಸಹ ಪ್ರಮುಖ ಅರ್ಥಿಕ ಬೆಳೆ. ಆದರೆ ಇತ್ತೀಚೆಗೆ ಮಳೆ ಹೆಚ್ಚಾಗಿ ಭೂಮಿ ಒಣಗದೆ ಮಾವಿಗೆ ಸೂಕ್ತವಾದ ವಾತಾವರಣ ನಿರ್ಮಾಣವಾಗುತ್ತಿಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ಮಳೆಯಿಂದ ಮರ ಮತ್ತು ಮಾವು ಕಪ್ಪಾಗುತ್ತದೆ. ತರೀಕೆರೆ ಭಾಗದಲ್ಲಿ ಅತ್ಯುತ್ತಮ ಬೆಳೆಯಾಗಿದ್ದ ಮಾವು ಕಳೆದ ವರ್ಷ ಮತ್ತು ಈ ವರ್ಷಗಳಲ್ಲಿ ಕೆಜಿಗೆ ಮಾವು ಕೇವಲ ಎಂಟು ರೂ.ಗೆ ಮಾರಾಟ ಮಾಡಿದ್ದೇವೆ. ಈಗ ವ್ಯಾಪಾರಕ್ಕಾಗಿ ಅಲದಲೆ ಮನೆ, ಮಕ್ಕಳು, ಸ್ನೇಹಿತರಿಗೆ ಹಣ್ಣು ಕೊಡಲು ಮಾತ್ರ ಮರಗಳನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- ದೋಳನಾಳು ಅಸ್ಲಾಂಖಾನ್‌ ,

ಮಾವು ಬೆಳೆಗಾರ, ತಾಪಂ ಮಾಜಿ ಸದಸ್ಯ

-- ಬಾಕ್ಸ್--

ಸೂಕ್ತ ನಿರ್ವಹಣೆಗೆ ಒತ್ತು ನೀಡಿದರೆ ಉತ್ತಮ ಆದಾಯ

ಸೂಕ್ತ ಸಮಯದಲ್ಲಿ ಮಾವಿನ ಗಿಡಗಳನ್ನು ಸರಿಯಾದ ಪ್ರಮಾಣದಲ್ಲಿ ಸವರುವಿಕೆ, ಸೂಕ್ತ ಔಷಧ ಗೊಬ್ಬರ ಹಾಕುವುದರಿಂದ ಉತ್ತಮ ಗುಣಮಟ್ಟದ ಮಾವಿನ ಕಾಯಿಗಳನ್ನು ಪಡೆಯಬಹುದು. ಸಂಸ್ಕರಣೆಗೆ ಒತ್ತು ನೀಡಿದರೆ ಉತ್ತಮ ಆದಾಯ ಗಳಿಸಬಹುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್ ಹೇಳುತ್ತಾರೆ.

--

16ಕೆಟಿಆರ್.ಕೆ.1. ನಾಶವಾಗುತ್ತಿರುವ ಮಾವಿನ ಮರಗಳು16ಕೆಟಿಆರ್.ಕೆ.2ಃ ನಾಶವಾಗುತ್ತಿರುವ ಮಾವಿನ ಮರಗಳು16ಕೆಟಿಆರ್.ಕೆ.3ಃ ತಾಪಂ ಮಾಜಿ ಸದಸ್ಯರು, ಮಾವು ಬೆಳೆಗಾರರಾದ ದೋಳನಾಳು ಅಸ್ಲಾಂಖಾನ್ 16ಕೆಟಿಆರ್.ಕೆ.4ಃ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಯತಿರಾಜ್