ಸಾರಾಂಶ
ಕ್ವಿಟ್ ಇಂಡಿಯಾ ಹೋರಾಟದ ಸ್ಮರಣಾರ್ಥ ಆ. ೮ ಮತ್ತು ೯ರಂದು ಕೆಆರ್‌ಎಸ್ ಪಕ್ಷದಿಂದ ಭ್ರಷ್ಟರನ್ನು ರಾಜಕೀಯದಿಂದ ತೊಲಗಿಸಿ ಜಾಥಾ ಹಮ್ಮಿಕೊಂಡಿದ್ದು, ಆ. ೮ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಮೈಲಾರ ಮಹದೇವಪ್ಪ ಸ್ಮಾರಕದಿಂದ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದು ಕೆಆರ್‌ಎಸ್ ಪಕ್ಷ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಹೇಳಿದರು.
ಹಾವೇರಿ:ಕ್ವಿಟ್ ಇಂಡಿಯಾ ಹೋರಾಟದ ಸ್ಮರಣಾರ್ಥ ಆ. ೮ ಮತ್ತು ೯ರಂದು ಕೆಆರ್‌ಎಸ್ ಪಕ್ಷದಿಂದ ಭ್ರಷ್ಟರನ್ನು ರಾಜಕೀಯದಿಂದ ತೊಲಗಿಸಿ ಜಾಥಾ ಹಮ್ಮಿಕೊಂಡಿದ್ದು, ಆ. ೮ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಮೈಲಾರ ಮಹದೇವಪ್ಪ ಸ್ಮಾರಕದಿಂದ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದು ಕೆಆರ್‌ಎಸ್ ಪಕ್ಷ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತ, ವಂಶಪಾರಂಪರ್ಯ ಕುಟುಂಬ ರಾಜಕಾರಣ ಮುಂತಾದ ಜನದ್ರೋಹಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿ ವಿರುದ್ಧ ಕಳೆದ ಐದು ವರ್ಷಗಳಿಂದ ಕೆಆರ್‌ಎಸ್ ಪಕ್ಷ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಅದರ ಭಾಗವಾಗಿ ಈ ಜಾಥಾ ಎಂದರು.
ರಾಜ್ಯಾದ್ಯಂತ ಲಂಚಮುಕ್ತ ಕರ್ನಾಟಕ ಅಭಿಯಾನಗಳ ಮೂಲಕ ಜನಸಾಮಾನ್ಯರಿಗೆ ಚೈತನ್ಯ ಮತ್ತು ಸ್ಫೂರ್ತಿ ತುಂಬಿದ್ದೇವೆ. ಆ.೮ ಮತ್ತು ೯ರಂದು ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಾದ್ಯಂತ ಭ್ರಷ್ಟರನ್ನು ರಾಜಕೀಯದಿಂದ ತೊಲಗಿಸಿ ಮತ್ತು ಯುವಜನರೇ, ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನಿಸುವ ಜಾಥಾ ಹಮ್ಮಿಕೊಂಡಿದ್ದು, ಆ. ೮ರಂದು ಬೆಳಗ್ಗೆ ೧೦ ಗಂಟೆಗೆ ಹಾವೇರಿಯಲ್ಲಿರುವ ಮೈಲಾರ ಮಹದೇವಪ್ಪ ಸ್ಮಾರಕದ ಬಳಿ ಮಾಜಿ ಶಾಸಕ ಮಹಿಮಾ ಪಟೇಲ್ ಸೇರಿದಂತೆ ಹಲವು ಗಣ್ಯರು ಜಾಥಾಗೆ ಚಾಲನೆ ನೀಡಲಿದ್ದಾರೆ ಎಂದರು. ನಂತರ ಈ ಜಾಥಾವು ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಸುಮಾರು ೬೦ ಹಳ್ಳಿ-ಪಟ್ಟಣಗಳಲ್ಲಿ ೨೦೦ ಕಿಲೋ ಮೀಟರ್‌ಗೂ ಹೆಚ್ಚು ಸಂಚರಿಸಲಿದ್ದು ಜನರಿಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಜೊತೆಗೆ, ಇಂದಿನ ಭ್ರಷ್ಟ ಮತ್ತು ಜನವಿರೋಧಿ ರಾಜಕಾರಣವು ನಮ್ಮ ಪೂರ್ವಿಕರ ತ್ಯಾಗ, ಬಲಿದಾನಗಳನ್ನು ಹೇಗೆ ವ್ಯರ್ಥ ಮಾಡುತ್ತಿದೆ ಮತ್ತು ಅವಮಾನಿಸುತ್ತಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಲಿದೆ. ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಜನಸಾಮಾನ್ಯರೂ ಈ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜನಜಾಗೃತಿ ಹೋರಾಟವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮರಾಜು ಬಿಂದಲಗಿ, ಚರಣರಾಜ್ ರೊಡ್ಡನವರ, ಗಂಗಾ ಕೋರಿ, ಶ್ರೀನಿವಾಸ ಬೇಂದ್ರೆ, ವೆಂಕಟೇಶ್ ಇತರರು ಇದ್ದರು. ಆ. ೧೦ರಂದು ಬೃಹತ್ ಜನಸಮಾವೇಶ: ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ಆ.೧೦ರಂದು ಜಾಥಾದ ಸಮಾರೋಪ ಮತ್ತು ಕೆಆರ್‌ಎಸ್ ಪಕ್ಷದ ೫ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೃಹತ್ ಜನಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ರಾಜ್ಯದ ವಿವಿಧೆಡೆಗಳಿಂದ ಕೆಆರ್‌ಎಸ್ ಪಕ್ಷದ ಸದಸ್ಯರು ಮತ್ತು ಬೆಂಬಲಿಗರು ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಚ್ಛ, ಪ್ರಾಮಾಣಿಕ, ಜನಪರ, ಪಾರದರ್ಶಕ, ಪ್ರಾದೇಶಿಕ, ಪರ್ಯಾಯ ರಾಜಕಾರಣವನ್ನು ಬೆಂಬಲಿಸುವ ಹಾವೇರಿ ಜಿಲ್ಲೆಯ ಜನರೂ ಈ ಜನಸಮಾವೇಶದಲ್ಲಿ ಭಾಗವಹಿಸುವಂತೆ ರವಿ ಕೃಷ್ಣರೆಡ್ಡಿ ಮನವಿ ಮಾಡಿದರು.