ಸಾರಾಂಶ
ದ.ಕ.ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಕೇಂದ್ರದಿಂದ ಮಂಜೂರುಗೊಂಡ ಬಗ್ಗೆ ಪ್ರಸ್ತಾಪಿಸಿದ ನಳಿನ್ ಕುಮಾರ್, ಮುಂದಿನ ವರ್ಷ ಮಂಗಳೂರಿನಲ್ಲಿ ಇನ್ನೊಂದು ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಚುನಾವಣೆಯಲ್ಲಿ ಪ್ರತಿ ಬೂತ್ ಗೆಲುವು ನಮ್ಮದಾಗಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ 2.74 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದು, ಈ ಬಾರಿ ಬೂತ್‌ಗಳ ಸಂಖ್ಯೆಯೂ ಜಾಸ್ತಿಯಾಗಿದ್ದು, ಗೆಲವಿನ ಅಂತರ 3 ಲಕ್ಷ ಗುರಿ ಇರಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳವಾರ ದ.ಕ. ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಮಂಗಳೂರಿಗೆ ಇನ್ನೊಂದು ವಿಮಾನ ನಿಲ್ದಾಣ: ದ.ಕ.ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಕೇಂದ್ರದಿಂದ ಮಂಜೂರುಗೊಂಡ ಬಗ್ಗೆ ಪ್ರಸ್ತಾಪಿಸಿದ ನಳಿನ್ ಕುಮಾರ್, ಮುಂದಿನ ವರ್ಷ ಮಂಗಳೂರಿನಲ್ಲಿ ಇನ್ನೊಂದು ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ ಎಂದರು. ಕಳೆದ 15 ವರ್ಷದಲ್ಲಿ ಗೂಂಡಾಗಿರಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಸದೆ ರಾಜಕಾರಣ ಮಾಡಿದ್ದೇನೆ. 2024ರಲ್ಲಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡಲು ಒಂದಾಗಿ ಕೆಲಸ ಮಾಡಬೇಕು ಎಂದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 7 ಕೋಟಿ ಕನ್ನಡಿಗರ ಆತ್ಮವಾದ ವಿಧಾನಸೌಧ ಪ್ರಜಾತಂತ್ರದ ದೇಗುಲ. ಅಲ್ಲಿಯೇ ಪಾಕ್ ಪರ ಘೋಷಣೆ ಕೂಗಿದಾಗ ಸರ್ಕಾರ ಅದನ್ನು ಹಗುರವಾಗಿ ಪರಿಗಣಿಸಿದ್ದು ನೋವು ತಂದಿದೆ. ಪ್ರಸಕ್ತ ಉಗ್ರವಾದಿಗಳು, ರಾಷ್ಟ್ರ ವಿರೋಧಿಗಳು ರಾಜಾರೋಷವಾಗಿ ಬೀದಿಗಿಳಿದು ಕೆಲಸ ಮಾಡುತ್ತಿದ್ದಾರೆ. ಅಪಪ್ರಚಾರಗಳಿಗೆ ಕಿವಿಗೊಡದೆ ಗಟ್ಟಿಯಾಗಿ ನಿಂತು ಮೋದಿ ಕೈಬಲಡಿಸುವಲ್ಲಿ ಶ್ರಮಿಸಬೇಕು ಎಂದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿ, ಜಿಲ್ಲೆಯಲ್ಲಿ 1,875 ಬೂತ್‌ಗಳಿದ್ದು, 61 ಮಹಾಶಕ್ತಿ ಕೇಂದ್ರಗಳಿವೆ, 8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರಮುಖರ ನೇಮಕ ಮಾಡಲಾಗಿದೆ ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ, ತಾವರೆ ಚಿನ್ನೆ ನಮ್ಮ ಅಭ್ಯರ್ಥಿಯಾಗಿದ್ದು, ಮೂರನೇ ಬಾರಿ ಮೋದಿ ಪ್ರಧಾನಿ ಮಾಡಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು. ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಿದ್ದು, ಮೋದಿ ನಾಯಕತ್ವ ಪ್ರಪಂಚಕ್ಕೆ ಅಗತ್ಯವಿದೆ ಎಂದರು.ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಗೀರಥಿ ಮುರುಳ್ಯ, ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಸಹ ಉಸ್ತುವಾರಿ ನಿತಿನ್ ಕುಮಾರ್, ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾ ಕಾರ್ಯದರ್ಶಿ ಯತೀಶ್ ಅರುವಾರ್, ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಮತ್ತಿತರರಿದ್ದರು.