ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರ ಮುಖವಾಡ ಚುನಾವಣಾ ಫಲಿತಾಂಶದಿಂದ ಕಳಚಿಬಿದ್ದಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಭ್ರಷ್ಟ ಕಾಂಗ್ರೆಸ್‌ನ ಮುಖವಾಡ ಸಹಾ ಕಳಚಿ ಬೀಳಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮುರಳಿ ಭವಿಷ್ಯ ನುಡಿದರು.ದೆಹಲಿಯಲ್ಲಿ 27 ವರ್ಷಗಳ ನಂತರ ಪೂರ್ಣ ಬಹುಮತದೊಂದಿಗೆ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಹಿನ್ನೆಲೆಯಲ್ಲಿ ನಗರ ಬಲಮುರಿ ಗಣಪತಿ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿಕೆಯೊಂದಿಗೆ ವಿಜಯೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಗ್ಯಾರಂಟಿಗಳು ತಾತ್ಕಾಲಿಕಗ್ಯಾರಂಟಿಗಳೆಲ್ಲ ತಾತ್ಕಾಲಿಕ, ಆ ತಾತ್ಕಾಲಿಕ ಗ್ಯಾರಂಟಿಗಿಂತ ದೃಢ ನಾಯಕತ್ವ ಕೊಡುವ ನರೇಂದ್ರ ಮೋದಿಜೀ ನೇತೃತ್ವದ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ದೆಹಲಿ ಮತದಾರರಿಂದ ಮತ್ತೊಮ್ಮೆ ರುಜುವಾತಾಗಿದೆ ಎಂದು ಹೇಳಿದರು
ದೆಹಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಪ್ರಬುದ್ಧ ಮತದಾರರು ದೆಹಲಿ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಘಟಕದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಕಾಂಗ್ರೆಸ್ ಶೂನ್ಯ ಸಂಪಾದನೆ
ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರೂ ಸೋತಿದ್ದಾರೆ. ಲಿಕ್ಕರ್, ಶೀಶ್ ಮಹಲ್ ಹಗರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಪ್ ಬಣ್ಣ ಬಯಲಾಗಿದೆ. ಇನ್ನೂ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಲೋಕಸಭಾ ಚುನಾವಣೆಯಲ್ಲೂ ಅದು ಶೂನ್ಯ ಸಂಪಾದನೆ ಮಾಡಿತ್ತು. ಹರಿಯಾಣ, ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ಸಿಗೆ ಮುಖಭಂಗ ಆಗಿತ್ತು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿಪತಿ, ಜಿಲ್ಲಾ ಕಾರ್ಯದರ್ಶಿ ಅಶೋಕ್, ರಾಷ್ಟ್ರೀಯ ಪರಿಷತ್ ಸದಸ್ಯ ಲಕ್ಷ್ಮೀನಾರಾಯಣ ಗುಪ್ತ, ಮಾಧ್ಯಮ ಸಂಚಾಲಕ ವಿ. ಮಧುಚಂದ್ರ, ರಾಜ್ಯ ಪರಿಷತ್ ಸದಸ್ಯರಾದ ನಾಯನಹಳ್ಳಿ ಶ್ರೀನಿವಾಸ್, ನರಸಪ್ಪ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಬಾಲ ಕೃಷ್ಣ, ಮುಖಂಡರಾದ ಕೊಂಡಪ್ಪ, ವೆಂಕಟೇಶ್, ನಂಜಪ್ಪ, ಲೋಕೇಶ್, ದೇವರಾಜ್, ಶಿವಕುಮಾರ್,ರಾಜೇಶ್ ಜೈನ್, ಹರೀಶ್, ಕಾರ್ಯಕರ್ತರು ಇದ್ದರು.