ಯಲ್ಲಾಲಿಂಗ ಶಿಕ್ಷಣ ಸಂಸ್ಥೆಗಳ ಸಮೂಹದ ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಘಟಿಕೋತ್ಸವ ಸಮಾರಂಭ ಜರುಗಿತು.
ಕನ್ನಡಪ್ರಭ ವಾರ್ತೆ ಬೀದರ್
ವೈದ್ಯ ವೃತ್ತಿಯು ಜನ ಸೇವೆಗಾಗಿ ನಮಗೆ ಸಿಗುತ್ತಿರುವ ಬಹುದೊಡ್ಡ ಅವಕಾಶ. ಹೀಗಾಗಿ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ ಧರಂಸಿಂಗ್ ತಿಳಿಸಿದರು.ಅವರು ನಗರದ ಪ್ರತಾಪನಗರದ ವಿಆರ್‍ಸಿ ವೆಡ್ಡಿಂಗ್ ಹಾಲ್‍ನಲ್ಲಿ ಬುಧವಾರ ಆಯೋಜಿಸಿದ್ದ ಯಲ್ಲಾಲಿಂಗ ಶಿಕ್ಷಣ ಸಂಸ್ಥೆಗಳ ಸಮೂಹದ ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗುರಿ ತಲುಪುವ ಧಾವಂತದಲ್ಲಿ ನಮ್ಮವರನ್ನು ಕಳೆದುಕೊಳ್ಳಬಾರದು :ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಆದರೆ, ಅದನ್ನು ಬೇಗ ತಲುಪುವ ಧಾವಂತದಲ್ಲಿ ನಮ್ಮವರನ್ನು ಕಳೆದುಕೊಳ್ಳಬಾರದು. ಸಂಬಂಧ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಜತೆಗೆ ಗುರಿಯೆಡೆಗೆ ಸಾಗಬೇಕು, ಆಯುರ್ವೇದಿಕ್ ವೈದ್ಯಕೀಯ ಪದವಿ ಪೂರೈಸಿದವರು ಭವಿಷ್ಯದಲ್ಲಿ ಶ್ರೇಷ್ಠ ವೈದ್ಯರಾಗಲು ಪ್ರಯತ್ನಿಸಿ ಎಂದು ಸಲಹೆ ಮಾಡಿದರು.
ಯಲ್ಲಾಲಿಂಗ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಮುರಳೀಧರ ಎಕಲಾರಕರ್ ಅವರು ಶ್ರೀ ಸಿದ್ಧರಾಮೇಶ್ವರ ಆಯುರ್ವೇದಿಕ್ ಕಾಲೇಜು ಸೇರಿದಂತೆ 11 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಬೀದರ್ ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಇದು ಅವರ ಬಹುದೊಡ್ಡ ಶ್ರಮ ಎಂದು ಡಾ.ಅಜಯ ಧರಂಸಿಂಗ್ ಶ್ಲಾಘಿಸಿದರು.ಸಾನಿಧ್ಯ ವಹಿಸಿದ್ದ ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ಧರಾಮೇಶ್ವರ ಆಯರ್ವೇದಿಕ್ ವೈದ್ಯಕೀಯ ಕಾಲೇಜು ಗುಣಮಟ್ಟದ ಶಿಕ್ಷಣದಿಂದಾಗಿ ಹೆಸರು ಮಾಡಿದೆ. ಕಾಲೇಜಿನಲ್ಲಿ ಓದಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯರಾಗಿ, ಉಜ್ವಲ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದರು.
200ಕ್ಕೂ ಹೆಚ್ಚು ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಯಲ್ಲಾಲಿಂಗ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಮುರಳಿಧರ ಎಕಲಾರಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಸಾಗರ್ ಖಂಡ್ರೆ, ಶಾಸಕ ರಹೀಮ್‌ಖಾನ್, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲ ಯದ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಡೀನ್ ಡಾ. ಸಂಜಯ್ ಕೆಎಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಯಲ್ಲಾಲಿಂಗ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷ ವೆಂಕಟೇಶ ಎಕಲಾರಕರ್, ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ರಾಜಕುಮಾರ ಡೊಂಗರೆ, ಉಪ ಪ್ರಾಚಾರ್ಯ ಡಾ.ಎಂ.ಡಿ.ಅಲ್ತಾಫ್ ಇದ್ದರು.ಡಾ. ಮಮತಾ ಎಕಲಾರಕರ್ ಕಾಲೇಜಿನ ಸಂಕ್ಷಿಪ್ತ ಪರಿಚಯ ನೀಡಿದರು. ಪ್ರಾಚಾರ್ಯ ಡಾ. ರೂಪೇಶ ಎಕಲಾರಕರ್ ಸ್ವಾಗತಿಸಿದರು.
ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವ ಮಟ್ಟಕ್ಕೆ ಬೆಳೆಯಲಿ: ಶ್ರೀಸಂಸ್ಥೆಯ ಅಧ್ಯಕ್ಷರಾದ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುರಳೀಧರ ಎಕಲಾರಕರ್ ಅವರು ಯಲ್ಲಾಲಿಂಗ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಮೂಹವು ಮುಂದಿನ ದಿನಗಳಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವ ಮಟ್ಟಕ್ಕೆ ಬೆಳೆಯಲಿ ಎಂದು ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಶುಭ ಹಾರೈಸಿದರು.