ಅಭಿವೃದ್ಧಿ ಯೋಜನೆ ಚರ್ಚೆ ಇಲ್ಲದೇ ಮುಗಿದ ಸಭೆ

| Published : Oct 08 2024, 01:11 AM IST / Updated: Oct 08 2024, 01:12 AM IST

ಸಾರಾಂಶ

ಮೂರು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆ ನಡೆಯಿತು. ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಇಲ್ಲದೇ ಬರೀ ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿದ್ದ ₹5 ಕೋಟಿ ಅನುದಾನ ಹಂಚಿಕೆ, ಕಾಮಗಾರಿಗಳ ಮರುಟೆಂಡರ್ ಪ್ರಕ್ರಿಯೆ ಸುತ್ತಲೇ ಗಿರಕಿ ಹೊಡೆಯಿತು.

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ಮೂರು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆ ನಡೆಯಿತು. ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಇಲ್ಲದೇ ಬರೀ ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿದ್ದ ₹5 ಕೋಟಿ ಅನುದಾನ ಹಂಚಿಕೆ, ಕಾಮಗಾರಿಗಳ ಮರುಟೆಂಡರ್ ಪ್ರಕ್ರಿಯೆ ಸುತ್ತಲೇ ಗಿರಕಿ ಹೊಡೆಯಿತು.

ಬೆಳಿಗ್ಗೆ 11ಕ್ಕೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಆಗಮನದ ನಿರೀಕ್ಷೆಯಲ್ಲಿ ಒಂದು ಗಂಟೆ ತಡವಾಗಿ ಸಾಮಾನ್ಯ ಸಭೆ ಆರಂಭವಾಯಿತು.ಸದಸ್ಯರಾದ ಜೆ.ಆರ್. ರವಿಕುಮಾರ್, ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮುಖ್ಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನಗರೋತ್ಥಾನ ಯೋಜನೆಯಡಿ ಅನುದಾನ ಹಂಚಿಕೆ ಹಾಗೂ ಕ್ರಿಯಾಯೋಜನೆ ರೂಪಿಸುವಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿದರು.

ಅವರ ಮಾತಿಗೆ ಸದಸ್ಯರಾದ ಅಬಕಾರಿ ತಿಪ್ಪೇಸ್ವಾಮಿ, ಸೈಯದ್ ಅನ್ವರ್ ಧ್ವನಿಗೂಡಿಸಿದರು. ಮೂರು ವರ್ಷಗಳಿಂದ ಆಡಳಿತಾಧಿಕಾರಿಗಳ ಆಡಳಿತ ವ್ಯವಸ್ಥೆಯಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಚುನಾಯಿತ ಸದಸ್ಯರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಕಡೆಗಣಿಸಿದ್ದಾರೆ. ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿವರ್ಗ ಆಡಳಿತ ವ್ಯವಸ್ಥೆಯಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗಿದೆ ಎಂದರು.

ಹಳೆಯ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದ ಶಾಸಕರು, ಮುಖ್ಯಾಧಿಕಾರಿಗಳಿಂದ ಸಮರ್ಪಕ ಮಾಹಿತಿ ಸಿಗದೇ ಹೋದಾಗ ತಾಲೂಕುಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿ, ಕಾಮಗಾರಿಗಳ ಅನುದಾನ, ಪ್ರಗತಿ ಬಗ್ಗೆ ಮಾಹಿತಿ ಪಡೆಯಲು ಮುಂದಾದರು. ಸಭೆಯ ಉದ್ದಕ್ಕೂ ಇದೇ ನಡೆಯಿತು. ಕೊನೆಗೆ ಅಲ್ಲೂ ಸಮಾಧಾನಕರ ಮಾಹಿತಿ ಸಿಗದೇ ಇದ್ದಾಗ ಮಾಜಿ ಸದಸ್ಯರಾದ ಎಸ್. ಉಮಾಪತಿಯವರನ್ನು ಸಭೆಗೆ ಕರೆದು ಮಾಹಿತಿ ಸಂಗ್ರಹಿಸುವ ಕೆಲಸ ಕೂಡ ಮಾಡಿದರು.

15 ನೇ ಹಣಕಾಸು ಯೋಜನೆ, ಎಸ್‌ಸಿಎಫ್‌ಸಿ ಘಟಕ ಯೋಜನೆ, ವಿಕಲಾಂಗರಿಗೆ ಪ್ರೋತ್ಸಾಹಧನ, ಆಯ್ಕೆ, ಅಲ್ಲದೇ ಬಹುವರ್ಷಗಳಿಂದ ಸ.ನಂ 191, 193 ರ ಪ್ರದೇಶಗಳಲ್ಲಿ 94 ಸಿಸಿ ಅಡಿ ಮನೆಗಳ ಹಕ್ಕುಪತ್ರ ವಿತರಣೆ ಕುರಿತು ಫಲಾನುಭವಿಗಳ ಸ್ಥಳ ಮಹಜರ್ ಮಾಡಿ ಕಟ್ಟಡಗಳಿಗೆ ಇ-ಸ್ವತ್ತು ನೀಡುವ ವಿಚಾರವಾಗಿ ಏನಾದರೂ ಒಂದು ನಿರ್ಣಯ ಸಾಮಾನ್ಯಸಭೆ ತೆಗೆದುಕೊಳ್ಳಲಿದೆ ಎಂದು ನಿರೀಕ್ಷೆ ಇತ್ತು.

ಆದರೆ ಒಟ್ಟು 16 ವಾರ್ಡುಗಳಲ್ಲಿ ಹಮ್ಮಿಕೊಳ್ಳಬೇಕಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕನಿಷ್ಟ ಔಪಚಾರಿಕ ಚರ್ಚೆ ಕೂಡ ನಡೆಸದೇ ಯಾವ ನಿರ್ಣಯವನ್ನೂ ಮಂಡಿಸದೇ ಸಾಮಾನ್ಯ ಸಭೆ ಅಂತ್ಯಗೊಂಡಿತು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ, ಉಪಾಧ್ಯಕ್ಷೆ ಸರ್ವಮಂಗಳಾ, ಸದಸ್ಯರಾದ ಸೈಯದ್ ಅನ್ವರ್, ಜೆ.ಆರ್. ರವಿಕುಮಾರ್, ಎನ್.ಮಹಾಂತೇಶ್, ಕೆ.ಪಿ.ತಿಪ್ಪೇಸ್ವಾಮಿ,. ಟಿ.ಮಹೇಶ್ವರಿ, ಗುರುಶಾಂತಮ್ಮ, ಸುನಿತಾ ಮುದಿಯಪ್ಪ, ಈರಮ್ಮ, ಬಿ.ವಿನುತಾ, ಬೋಸಮ್ಮ, ಪಿ.ಓಬಯ್ಯ ಮುಂತಾದವರಿದ್ದರು.

ಇದು ಆಫ್ ದಿ ರೆಕಾರ್ಡ್!

ಹೊಸ ಅನುದಾನ ಒಂದೂ ಬಂದಿಲ್ಲ ಎಂದು ಸದಸ್ಯರು ಶಾಸಕರ ಗಮನ ಸೆಳೆದಾಗ, "ಹೌದು ಬಂದಿಲ್ಲ. ಏನ್ ಮಾಡೋದು. ಇಲ್ಲಿ ಅನುದಾನ ಇಲ್ಲದೇ ನಿಮ್ಮ ಪರಿಸ್ಥಿತಿ ಹೇಗಿದೆಯೋ ಹಾಗೇ ಸಚಿವಾಲಯಗಳಲ್ಲೂ ಇದೆ. ಸರ್ಕಾರದ ಬಳಿ ಹಣ ಇಲ್ಲ. ಹಣದ ಕೊರತೆ ಇದೆ. ಮುಂದೆ ಸರಿಹೋಗುತ್ತದೆ " ಎಂದು ಹೇಳಿದ ಶಾಸಕರು ಇದು ಆಫ್ ದಿ ರೆಕಾರ್ಡ್ ಎಂದು ಪತ್ರಕರ್ತರ ಕಡೆ ಕಣ್ಣರಳಿಸಿದರು.