ಸಾರಾಂಶ
ಮಹಿಳೆಯರು ಮುಖ್ಯವಾಗಿ ತಮ್ಮ ಮಕ್ಕಳಿಗೆ ಜ್ಞಾನದ ಮಾರ್ಗ, ಉತ್ತಮ ನಡೆತೆ ಆಚಾರ-ವಿಚಾರ ಸಂಸ್ಕಾರಯುತರನ್ನಾಗಿ ಮಾಡಿದರೆ ಸಮಾಜಕ್ಕೆ ನೀಡುವ ಕೊಡುಗೆ
ಗಜೇಂದ್ರಗಡ: ದಾಸ ಸಾಹಿತ್ಯ ಭಜನೆ ಭಾರತದ ಒಂದು ವೈವಿಧ್ಯತೆ, ಕರ್ನಾಟಕ ಎಲ್ಲ ಗ್ರಾಮದವರೆಗೂ ಭಜನೆಯ ಪ್ರಭಾವವಿದ್ದು, ಭಜನೆಯ ನಾದ ಮಾಧುರ್ಯ ಕೇಳಿದರೆ ಆನಂದ ಕಿವಿಗಳಿಗೆ ಹಬ್ಬ. ಭಜನೆ ಕೇಳುವುದರಿಂದ, ಹಾಡುವದರಿಂದ ಮನಸ್ಸಿಗೆ ಆನಂದ ಸಿಗುತ್ತದೆ ಎಂದು ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಗಳು ಹೇಳಿದರು.
ಪಟ್ಟಣದ ಗಂಜಿಪೇಟೆಯ ಉಡುಪಿಯ ಪಲಿಮಾರುಮಠ ಶಾಖಾಮಠ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುವಾರ ಭಾಗವತ ಭವನ ಹಾಗೂ ನೂತನ ರಥ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಜನೆಯ ನಾದ ಮಾಧುರ್ಯವು ಮನಸ್ಸಿಗೆ ಆನಂದ ನೀಡುವುದರ ಜತೆಗೆ ನಮ್ಮ ಜೀವನದಲ್ಲಿ ಎಲ್ಲ ರೀತಿಯ ಜಂಜಾಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.ಮಹಿಳೆಯರು ಮುಖ್ಯವಾಗಿ ತಮ್ಮ ಮಕ್ಕಳಿಗೆ ಜ್ಞಾನದ ಮಾರ್ಗ, ಉತ್ತಮ ನಡೆತೆ ಆಚಾರ-ವಿಚಾರ ಸಂಸ್ಕಾರಯುತರನ್ನಾಗಿ ಮಾಡಿದರೆ ಸಮಾಜಕ್ಕೆ ನೀಡುವ ಕೊಡುಗೆಯಾಗುತ್ತದೆ. ಧರ್ಮ ಮಾರ್ಗದಿಂದ ನಡೆಯುವ ಮನುಷ್ಯನ ವ್ಯಕ್ತಿತ್ವವು ವೃದ್ದಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಲಭಿಸುತ್ತದೆ ಎಂದರು.
ಧಾರ್ಮಿಕ ಸಭೆಯಲ್ಲಿ ಭೀಷ್ಮಾಸಾ ಬಾಕಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗ್ಗೆ ರಥ ಸಮರ್ಪಣೆ ಬಳಿಕೆ ಉಡುಪಿ ಮೂಲ ದೇವರಿಗೆ ಶ್ರೀಗಳವರಿಂದ ವಿಶೇಷ ಪೂಜೆ ನಡೆಯಿತು. ಈ ವೇಳೆ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ, ಮಠದ ಪ್ರಧಾನ ಅರ್ಚಕ ವೆಂಕಟೇಶ ಆಚಾರ್ಯ ಹಾಗೂ ವ್ಯವಸ್ಥಾಪಕ ಅಡಿವಿ ಆಚಾರ್ಯ, ವೆಂಕಣ್ಣ ಶೆಟ್ಟರ್, ಗೋಪಾಲ ಶೆಟ್ಟರ್, ಶ್ರೀನಿವಾಸ ಬಾಕಳೆ, ರಾಜು ಹೊರಪೇಟಿ, ಈರಣ್ಣ ಉರಕೊಂಡ, ದತ್ತು ಬಾಕಳೆ ಸೇರಿದಂತೆ ಗುರು ಜಗನ್ನಾಥ ದಾಸರ ಸೇವಾ ಸಮಿತಿ ಹಾಗೂ ಗುರು ರಾಘವೇಂದ್ರ ಪಾದಯಾತ್ರ ಸೇವಾ ಸಮಿತಿ ಮತ್ತು ಸದ್ಭಕ್ತ ಮಂಡಳಿ ಸದಸ್ಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.