ನಗರಸಭೆ ವ್ಯಾಪ್ತಿ ಕಾಮಗಾರಿಗಳ ವಿಳಂಬಕ್ಕೆ ಸದಸ್ಯರ ಆಕ್ರೋಶ

| Published : Feb 16 2024, 01:51 AM IST

ಸಾರಾಂಶ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲತಾ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿಗಳ ವಿಳಂಬಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಲತಾ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯ ಸುದೀಪ್ ಕುಮಾರ್ ಸೇರಿ ಹಲವರು ಮಾತನಾಡಿ, ಕಾಮಗಾರಿಗಳ ವಿಳಂಬದಿಂದ ಶಾಸಕರಿಗೆ ಕೆಟ್ಟಹೆಸರು ಬರುತ್ತಿದೆ ಎಂದು ದೂರಿದರು.

ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಅಧಿಕಾರಿಗಳು ಕೇವಲ ನಿಯಮಗಳನ್ನು ಹೇಳಲು ಸಭೆಗೆ ಬರಬೇಡಿ. ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಭೆಗೆ ತಿಳಿಸಿ. ಸಾಮಾನ್ಯ ಸಭೆ ಕರೆಯುವುದು ಕಥೆಹೇಳುವುದಕ್ಕಲ್ಲ. ಅಭಿವೃದ್ಧಿ ಅನುಷ್ಠಾನಕ್ಕಾಗಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಇತರ ಸದಸ್ಯರು, ಕಾಮಗಾರಿಗಳ ವಿಳಂಬಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಲತಾ ಚಂದ್ರಶೇಖರ್, ನಗರೋತ್ಥಾನ ಯೋಜನೆ ಕಾಮಗಾರಿಗಳ ವಿಳಂಬದ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರಬರೆದು ಗುತ್ತಿಗೆದಾರರ ವಿರುದ್ಧ ಕ್ರಮಜರುಗಿಸಿ, ರಿಟೆಂಡರ್ ಕರೆಯಲು ಎಲ್ಲರೂ ಸೇರಿ ಒತ್ತಾಯಿಸೋಣ ಎಂದರು.

ಸದಸ್ಯ ವಿ.ಕದಿರೇಶ್ ಮಾತನಾಡಿ, ಕಾಮಗಾರಿ ವಿಳಂಬಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವದರ ಜೊತೆಗೆ ಹಣ ತಡೆಹಿಡಿಯಿರಿ. ಮಳೆಗಾಲ ಮತ್ತು ಲೋಕಸಭೆ ಚುನಾವಣೆ ನೀತಿಸಂಹಿತೆ ಹಿನ್ನೆಲೆ ಕಾಮಗಾರಿಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಆದ್ದರಿಂದ ಗುತ್ತಿಗೆದಾರರು ಗಮನಹರಿಸಬೇಕು ಎಂದರು.

ಸದಸ್ಯ ಸುದೀಪ್ ಕುಮಾರ್ ಮಾತನಾಡಿ, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ದೂರಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಭೆಯಲ್ಲಿ ಪಾಲ್ಗೊಳ್ಳದ ವಿವಿಧ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಪತ್ರಬರೆಯಲು ಸದಸ್ಯರು ಒಮ್ಮತ ಸೂಚಿಸಿದರು.

ಸದಸ್ಯೆ ಅನುಸುಧಾ ಮೋಹನ್ ಪಳನಿ ಮಾತನಾಡಿ, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನೆಪದಲ್ಲಿ ಬಹಳಷ್ಟು ಹಣ ವೆಚ್ಚವಾಗುತ್ತಿದೆ. ಆದರೆ ಸಮಸ್ಯೆ ಪೂರ್ಣಪ್ರಮಾಣದಲ್ಲಿ ಬಗೆಹರಿಯುತ್ತಿಲ್ಲ. ಆದ್ದರಿಂದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಹಣ ಪೋಲುಮಾಡುವುದು ಬೇಡ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಮೋಹನ್ ಕುಮಾರ್ ನಾಯಿಗಳ ಸಂತಾನಹರಣದ ಟೆಂಡರ್ ನಿಲ್ಲಿಸಿಹಣ ಉಳಿಸಿ ಎಂದು ಒತ್ತಾಯಿಸಿದರು.

ಸದಸ್ಯರಾದ ಆನೇಕೊಪ್ಪ ಬಸವರಾಜ್ ಮತ್ತು ವಿಜಯಮ್ಮ ಮಾತನಾಡಿ, ಪತ್ನಿಯರ ಆಡಳಿತವನ್ನು ನಗರಸಭೆ ಸದಸ್ಯೆಯರ ಗಂಡಂದಿರು ಚಲಾಯಿಸುವುದು ತಪ್ಪು. ವಾರ್ಡ್‌ನ ಅಭಿವೃದ್ಧಿ ವಿಚಾರದಲ್ಲಿ ಬೇರೆ ವಾರ್ಡ್‌ನ ಸದಸ್ಯರಾಗಲಿ, ಸದಸ್ಯೆಯರ ಪತಿಗಳಾಗಲಿ ಮಧ್ಯಪ್ರವೇಶಿಸುವುದು ಸರಿಯಲ್ಲ. ಇಂಥ ಬೆಳವಣಿಗೆಗೆ ನಗರಸಭೆಯಿಂದ ಕ್ರಮಜರುಗಿಸಬೇಕೆಂದು ಆಗ್ರಹಿಸಿದರು.

ಸದಸ್ಯ ಚೆನ್ನಪ್ಪ ಮಾತನಾಡಿ, ಭದ್ರಾಕಾಲೋನಿ-ಕಡದಕಟ್ಟೆ ಭಾಗದಲ್ಲಿ ಇತ್ತೀಚೆಗೆ ಅಪಘಾತದಿಂದ ಮೂವರು ಮೃತಪಟ್ಟಿದ್ದಾರೆ. ಆದ್ದರಿಂದ ಈ ಭಾಗದ ರಸ್ತೆಯಲ್ಲಿ ಹಂಪ್ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿಮಾಡಿದರು.

ಸದಸ್ಯ ಮೋಹನ್ ಕುಮಾರ್ ಮಾತನಾಡಿ, ನಗರದಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಮಾರಾಟ ಮಳಿಗೆಗಳು ನಿಯಮ ಮಿರಿ ವರ್ತಿಸುತ್ತಿವೆ. ಆದ್ದರಿಂದ ಅಬಕಾರಿ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂತು ಆಡಳಿತ ನಡೆಸದೆ, ಜನಸಾಮಾನ್ಯರ ಸಮಸ್ಯೆ ಆಲಿಸಿ ಕ್ರಮಜರುಗಿಸಬೇಕು ಎಂದು ಕೋರಿದರು.

ಸದಸ್ಯೆ ಎಸ್.ಜಯಶೀಲ ಮಾತನಾಡಿ, ಉಜ್ಜನೀಪುರ ಸಾರ್ವಜನಿಕ ಆಸ್ಪತ್ರೆ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು. ಇದಕ್ಕೆ ದನಿಗೂಡಿಸಿದ ಸದಸ್ಯರಾದ ವಿಜಯಮ್ಮ ಹಾಗು ಆನೇಕೊಪ್ಪ ಬಸವರಾಜ್, ಉಜ್ಜಿನಿಪುರ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ನಿವಾರಣೆಗಾಗಿ ಈ ಭಾಗದ ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಭದ್ರಾಕಾಲೋನಿ ಸಾರ್ವಜನಿಕ ಆಸ್ಪತ್ರೆ ಉದ್ಘಾಟನೆ ವಿಳಂಬವಾಗುತ್ತಿದೆ. ಆರು ವರ್ಷಕಳೆದರೂ ಉದ್ಘಾಟನೆಯಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಕರೆಸಿ ಕ್ರಮ ಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಬಿ.ಪಿ.ಸರ್ವಮಂಗಳಾ ಬೈರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್ ಉಪಸ್ಥಿತರಿದ್ದರು. ಸದಸ್ಯರಾದ ಗೀತಾ ರಾಜ್ ಕುಮಾರ್, ಪ್ರೇಮ ಬದರಿನಾರಾಯಣ್, ಶಶಿಕಲಾ ನಾರಾಯಣಪ್ಪ, ಉದಯಕುಮಾರ್, ರಿಯಾಜ್ ಬಾಷಾ, ಕೆ.ಆರ್ ಸವಿತಾ, ಮಂಜುನಾಥ್, ಬಿ.ಟಿ ನಾಗರಾಜ್, ಟಿ.ರೇಖಾ ಪ್ರಕಾಶ್, ಜಾರ್ಜ್, ಪಲ್ಲವಿ, ಅನಿತ ಮಲ್ಲೇಶ್, ನಾಗರತ್ನ ಹಾಗು ನಗರಸಭೆ ಅಧಿಕಾರಿಗಳು ಪಾಲ್ಗೊಂಡಿದ್ದರು.