ಸೈನಿಕರ ಶೌರ್ಯ, ಪರಾಕ್ರಮದ ನೆನಪು ಅಜರಾಮರ

| Published : Jul 27 2024, 12:52 AM IST

ಸಾರಾಂಶ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ನೆರೆಯ ಶತ್ರುರಾಷ್ಟ್ರಗಳು ಕಾಲು ಕೆರೆದು ಬಂದಾಗ ದೇಶದ ಯೋಧರು ಸಿಂಹಗಳಂತೆ ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡುತ್ತಾ ಬಂದಿದ್ದಾರೆ

ಗಜೇಂದ್ರಗಡ: ಕಾರ್ಗಿಲ್ ಯುದ್ಧದಲ್ಲಿ ಶತ್ರು ರಾಷ್ಟ್ರದ ಸೈನ್ಯವನ್ನು ಸೆದೆಬಡೆದು ಯುದ್ಧದಲ್ಲಿ ವಿಜಯ ಸಾಧಿಸಿದ ದೇಶದ ಸೈನಿಕರ ಶೌರ್ಯ, ಪರಾಕ್ರಮದ ನೆನಪು ಅಜರಾಮರ ಎಂದು ಮುಖಂಡ ಬಸವರಾಜ ಶೀಲವಂತರ ಹೇಳಿದರು.

ಸಮೀಪದ ಪುರ್ತಗೇರಿ ಗ್ರಾಮದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಮರ ಜವಾನ್ ಸ್ತೂಪಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ನೆರೆಯ ಶತ್ರುರಾಷ್ಟ್ರಗಳು ಕಾಲು ಕೆರೆದು ಬಂದಾಗ ದೇಶದ ಯೋಧರು ಸಿಂಹಗಳಂತೆ ಶತ್ರು ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡುತ್ತಾ ಬಂದಿದ್ದಾರೆ. ಪರಿಣಾಮ ೧೯೬೨ರ ಚೈನಾ ವಾರ್ ಇರಬಹುದು. ೧೯೯೯ರಲ್ಲಿ ಪಾಕ್ ಕುತಂತ್ರ ಬುದ್ಧಿಯ ಮೂಲಕ ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ೨ ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಲೇಹ್ ಹೆದ್ದಾರಿವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟಿಸಿದ್ದರು. ಈ ದಿನವು ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದೆ. ದೇಶದ ರಕ್ಷಣೆಗಾಗಿ ಅಂದಿನ ಯುದ್ಧದಲ್ಲಿ ನಮ್ಮ ೫೩೦ ಭಾರತೀಯ ಯೋಧರು ಹಾಗೂ ಅಧಿಕಾರಿಗಳ ತ್ಯಾಗ ಬಲಿದಾನ ಸದಾ ಸ್ಮರಣಾರ್ಹ. ದೇಶದ ಕಾವಲಿಗೆ ನಿಂತಿರುವ ಸೈನಿಕರ ಸ್ಮರಣೆ ನಮ್ಮ ಕರ್ತವ್ಯವಾಗಿದ್ದು, ಯುವ ಸಮೂಹ ದೇಶಪ್ರೇಮ ಹಾಗೂ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದರು.

ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಚ್.ಆರ್. ಮುಜಾಬರ ಮಾತನಾಡಿ, ದೇಶದ ಸೈನಿಕರ ಶೌರ್ಯ,ಪರಾಕ್ರಮ ನಮ್ಮೆಲ್ಲರಿಗೂ ಸಹ ಸ್ಪೂರ್ತಿಧಾಯಕ. ಭವ್ಯ ಇತಿಹಾಸ ಹೊಂದಿರುವ ಭಾರತದಲ್ಲಿ ಜನಸಿರುವ ನಾವುಗಳು ಪುಣ್ಯವಂತರು. ದೇಶದ ಗಡಿ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸೈನಿಕರ ಸೇವೆ ಅವಿಸ್ಮರಣೀಯ ಎಂದರು.

ಮಾಜಿ ಸೈನಿಕ ಎಸ್.ಆರ್. ರಾಮಜಿ ಮಾತನಾಡಿ, ಕಾರ್ಗಿಲ್ ಸಂಘರ್ಷ ಕೇಳಿದರೆ ಮತ್ತೆ ನಾವು ಸೈನ್ಯದಲ್ಲಿ ಸೇರಬೇಕು ಎನ್ನುವ ಉತ್ಸಾಹ ಮೂಡುತ್ತದೆ. ದೇಶ ಸೇವೆ ಅನ್ಯನವಾದದ್ದು, ವರ್ಣಿಸಲು ಅಸಾಧ್ಯ ಎಂದರು.

ಮಾಜಿ ಸೈನಿಕರಾದ ಕಳಕಪ್ಪ ಡೊಂಬರದ, ಶೇಖಪ್ಪ ರಾಮಜಿ, ಇಮಾಮಸಾಬ್‌ ಕೋಲಕಾರ, ಶೇಖರಪ್ಪ ಅಂಗಡಿ, ಅಶೋಕ ದಡ್ಡಿ, ಎ.ಸಿ. ಮುಳ್ಳೂರ, ಶರಣಪ್ಪ ಮಾರನಬಸರಿ, ಕೆ.ಪಿ. ರಾಮಜಿ, ಎಂ.ಎನ್, ವೈದ್ಯ, ಕುಮಾರೇಶ ಗಡಾದ, ಎಸ್.ಎಸ್. ಇಂಡಿ, ಹನುಂತಪ್ಪ ಉಪ್ಪಾರ ಸೇರಿ ಇತರರು ಇದ್ದರು.

ಪಟ್ಟಣದ ವೀರಾಪೂರ ರಸ್ತೆಯಲ್ಲಿನ ಓಂ ಶ್ರೀ ಸಾಯಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಹಾಗೂ ಶಾಲಾ ಸಂಸತ್ ರಚನೆಗೆ ವಿದ್ಯಾರ್ಥಿಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಆನಂದ ಮಂತ್ರಿ ಕಾರ್ಗಿಲ್ ಯುದ್ಧ ಹಾಗೂ ಸೈನಿಕರ ಹೋರಾಟ ಮತ್ತು ತ್ಯಾಗದ ಕುರಿತು ಮಾತನಾಡಿದರು. ಕಾರ್ಯದರ್ಶೀ ಕೃಷ್ಣಾ ಮಂತ್ರಿ, ಮುಖ್ಯೋಪಾಧ್ಯಾಯ ಸತೀಶ ಡಿ ಸೇರಿ ಸಹ ಶಿಕ್ಷಕರು ಇದ್ದರು.