ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ‘ಕ್ರಿಸ್ಮಸ್ ಸಂಭ್ರಮ’ ಕಾರ್ಯಕ್ರಮ ಸಂಪನ್ನಗೊಂಡಿತು.

ಕಾಪು: ಸಂಭ್ರಮದಿಂದಲೇ ಆರಂಭವಾಗಿ ಸಂಭ್ರಮದಿಂದಲೇ ಅಂತ್ಯಗೊಳ್ಳುವ ಹಬ್ಬವೇ ಕ್ರಿಸ್ಮಸ್. ಕ್ರಿಸ್ಮಸ್ ಎಂಬುದು ಒಂದು ರಹಸ್ಯ. ದೇವರು ಮನುಷ್ಯರಾಗಿ ಭೂಮಿಗೆ ಬಂದ ಒಂದು ಘಟನೆ. ಕ್ರಿಸ್ತ ದೇವಮಾನವರಲ್ಲ. ಮನುಷ್ಯರಾಗಿ ಬಂದು ಮನುಷ್ಯರಂತೇ ಜೀವನ ನಡೆಸಿದರು. ಯಾವುದೇ ಪಾಪ ಮಾಡಲಿಲ್ಲ. ಮನುಷ್ಯರಾಗಿ ಮನುಷ್ಯರಂತೆಯೇ ಜೀವಿಸಿ ಎನ್ನುವುದೇ ಕ್ರಿಸ್ತನ ಸಂದೇಶವಾಗಿದೆ ಎಂದು ಶಿರ್ವ ಆರೋಗ್ಯಮಾತೆ ದೇವಾಲಯದ ಸಹಾಯಕ ಧರ್ಮಗುರು ರೆ.ಫಾ.ಅನಿಲ್ ರೊಡ್ರಿಗಸ್ ಹೇಳಿದ್ದಾರೆ.

ಇಲ್ಲಿನ ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ಏರ್ಪಡಿಸಿದ ‘ಕ್ರಿಸ್ಮಸ್ ಸಂಭ್ರಮ’ ಕಾರ್ಯಕ್ರಮವನ್ನು ಕ್ರಿಸ್ಮಸ್ ಟ್ರೀಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಕ್ರಿಸ್ಮಸ್ ಸಂದೇಶ ನೀಡಿದ ಅವರು, ನಾವು ಪರರಿಂದ ಏನನ್ನು ಬಯಸುತ್ತೇವೆಯೋ ಅದನ್ನೇ ಪರರಿಗೆ ಮಾಡು ಎನ್ನುವುದೇ ದೇವರ ವಾಕ್ಯ ಎಂದರು.

ಶಿರ್ವ ರೋಟರಿ ಅಧ್ಯಕ್ಷ ವಿಲಿಯಮ್ ಮಚಾದೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಅ.ಜಿ.೩೧೮೨ ಇದರ ವಲಯ 5ರ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ವಲಯ ಸೇನಾನಿ ಸಂದೀಪ್ ಬಂಗೇರ, ವಲಯ ಕಾರ್ಯದರ್ಶಿ ಆಲ್ವಿನ್ ನೇರಿ ಪಿಂಟೊ ಭಾಗವಹಿಸಿದರು.

ಕಾರ್ಯಕ್ರಮ ಸಂಯೋಜಕ ಪ್ರಾನ್ಸಿಸ್ ಕಸ್ತಲಿನೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ ಸೇವಾ ನಿರ್ದೇಶಕ ಹೆರಾಲ್ಡ್ ಕುಟಿನ್ಹೋ, ದಂಡಪಾಣಿ ರಫಾಯಲ್ ಮತಾಯಸ್, ಕಾರ್ಯಕ್ರಮದ ಸಮಗ್ರ ಸಂಯೋಜಕ ಆಲ್ವಿನ್ ಅಮಿತ್ ಅರಾನ್ಹಾ ಸಹಕರಿಸಿದರು. ವಿವಿಯನ್ ಮಚಾದೊ ಪರಿಚಯಿಸಿದರು. ಪೂರ್ವಾಧ್ಯಕ್ಷ ಮೆಲ್ವಿನ್ ಡಿಸೋಜ ನಿರೂಪಿಸಿದರು. ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್ ಧನ್ಯವಾದವಿತ್ತರು. ಕ್ರಿಸ್ಮಸ್ ಗೀತಾಗಾಯನ, ಸಾಂತಾಕ್ಲೋಸ್, ಕುಸ್ವಾರ್, ಸೌಹಾರ್ದಕೂಟ ಜರುಗಿದವು.