ವಿಶ್ವದ ಬಹುತೇಕ ದೇಶಗಳು ಯುದ್ಧದ ಭೀತಿಯಲ್ಲಿವೆ, ಪರಸ್ಪರರಲ್ಲಿ ದ್ವೇಷ ಅಸೂಯೆ ತಾಂಡವಾಡುತ್ತಿದೆ. ಎಲ್ಲರ ಬಳಿಯೂ ಪ್ರೀತಿಯಿಂದ ಬದುಕಿದರೆ ನಿನ್ನ ಜೀವನ ಇನ್ನಿತರರಿಗೆ ಸಂಜೀವಿನಿಯಾಗಲಿದೆ ಎಂಬ ಜೀಸಸ್ ಕ್ರೈಸ್ತರ ಸಂದೇಶ ಪ್ರಸ್ತುತ ಅತ್ಯಂತ ಸೂಕ್ತವೆಂದು ಸೇಂಟ್ ಜಾನ್‌ ವಿಯಾನ್ನಿ ಚರ್ಚನ ಫಾದರ್ ಜೋಸೆಫ್ ಅಲೆಕ್ಸಾಂಡರ್ ಅಭಿಪ್ರಾಯಪಟ್ಟರು.

ಬ್ಯಾಡಗಿ: ವಿಶ್ವದ ಬಹುತೇಕ ದೇಶಗಳು ಯುದ್ಧದ ಭೀತಿಯಲ್ಲಿವೆ, ಪರಸ್ಪರರಲ್ಲಿ ದ್ವೇಷ ಅಸೂಯೆ ತಾಂಡವಾಡುತ್ತಿದೆ. ಎಲ್ಲರ ಬಳಿಯೂ ಪ್ರೀತಿಯಿಂದ ಬದುಕಿದರೆ ನಿನ್ನ ಜೀವನ ಇನ್ನಿತರರಿಗೆ ಸಂಜೀವಿನಿಯಾಗಲಿದೆ ಎಂಬ ಜೀಸಸ್ ಕ್ರೈಸ್ತರ ಸಂದೇಶ ಪ್ರಸ್ತುತ ಅತ್ಯಂತ ಸೂಕ್ತವೆಂದು ಸೇಂಟ್ ಜಾನ್‌ ವಿಯಾನ್ನಿ ಚರ್ಚನ ಫಾದರ್ ಜೋಸೆಫ್ ಅಲೆಕ್ಸಾಂಡರ್ ಅಭಿಪ್ರಾಯಪಟ್ಟರು. ಯೇಸುಕ್ರಿಸ್ತನ ಜನ್ಮ ದಿನವಾದ ಗುರುವಾರ ಪಟ್ಟಣದ ಸೇಂಟ್ ಜಾನ್ ವಿಯಾನ್ನಿ ಚರ್ಚನಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಕೇಕ್ ಕತ್ತರಿಸುವ ಮೂಲಕ ಯೇಸುಕ್ರಿಸ್ತರ ಜನ್ಮ ದಿನಾಚರಣೆ ನೆರವೇರಿಸಿ ಅವರು ಮಾತನಾಡಿದರು.

ಸೇವೆಯ ಮುಖಾಂತರ ಬದುಕಿನ ಸಾರ್ಥಕತೆ ಕಾಣುವ ಒಂದು ಅಪೂರ್ವ ಚಿಂತನೆಯನ್ನು ಪ್ರತಿಪಾದಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರೀತಿ, ಕರುಣೆ, ನಮ್ರತೆ ಮತ್ತು ಕ್ಷಮೆ ಜೀಸಸ್ ಕ್ರೈಸ್ತರ ಮೂಲತತ್ವವಾಗಿದೆ. ನಿಮ್ಮ ನೆರೆಹೊರೆಯವರನ್ನು ಪ್ರೀತಿಸುವುದು, ಬಡವರನ್ನು ನೋಡಿಕೊಳ್ಳುವುದು ಮತ್ತು ದ್ವೇಷಕ್ಕೆ ಕರುಣೆಯಿಂದ ಪ್ರತಿಕ್ರಿಯಿಸುವ ಕುರಿತು ಮಾತುಗಳನ್ನಾಡಿದ್ದಾರೆ. ಹೀಗಾಗಿ ಏಸುಕ್ರಿಸ್ತರನ್ನು ದೈವೀಶಕ್ತಿಯೆಂದು ನೋಡದಿದ್ದರೂ ನೈತಿಕ ಮಾರ್ಗದರ್ಶಕ ಹಾಗೂ ಸಮಾಜ ಸುಧಾರಕರೆಂದು ಮೆಚ್ಚಿಕೊಳ್ಳಬೇಕಾಗುತ್ತದೆ ಎಂದರು.ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಪ್ರಾರ್ಥಿಸಿದವರು: ಜೀಸಸ್ ಕ್ರೈಸ್ತರು ಸ್ವತಃ ತನ್ನನ್ನು ಚಿತ್ರ ಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಪ್ರಾರ್ಥಿಸಿದವರು, ಅದೇ ಕಾರಣಕ್ಕೆ ಇಂದು ವಿಶ್ವದಲ್ಲಿಯೇ ಹೆಚ್ಚು ಜನರು ಅವರನ್ನು ಆರಾಧಿಸುತ್ತಿದ್ದಾರೆ, ಶತ್ರುಗಳನ್ನು ಸೇರಿದಂತೆ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದುವ ಮೂಲಕ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ವಿಶ್ವದ ಮಹಾನ್ ದಾರ್ಶನಿಕ ಏಸು ಕ್ರಿಸ್ತರು ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತ ಎಂದರು.ವಿಶ್ವದೆಲ್ಲೆಡೆ ಪ್ರಕ್ಷುಬ್ಧ ವಾತಾವರಣ: ರಾಜಪ್ರಭುತ್ವದ ಕಾಲದಲ್ಲಿ ಯುದ್ಧಗಳ ಮುಗಿದು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಸಹ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಕೆಲ ಜನರು ಪ್ರತಿಪಾದಿಸಲು ಹೊರಟಿದ್ದಾರೆ, ಧರ್ಮ ಜೊತೆಗೆ ಆಚರಣೆಯಲ್ಲಿ ಮೂಢನಂಬಿಕೆಗಳು ಸೇರಿಕೊಂಡು ಅಮಾಯಕರನ್ನು ಕೊಲ್ಲಲಾಗುತ್ತಿದೆ. ವ್ಯಕ್ತಿ ಸ್ವಾತಂತ್ರ‍್ಯ, ವಿಶಾಲ ಮನೋಭಾವ, ಮಹತ್ವಾ ಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಹೆಚ್ಚು ಜನಪ್ರಿಯವಾಗಿದೆ ಎಂದರು. ಈ ವೇಳೆ ಸಿಸ್ಟರ್ ರೂಪಾ, ವಿನ್ಸೆಂಟ್ ಫೆರಿರಾ ಇನ್ನಿತರರಿದ್ದರು.

ಮೋಟೆಬೆನ್ನೂರಿನಲ್ಲಿ ಕ್ರಿಸಮಸ್ ಸಂಭ್ರಮ: ಶಾಂತಿ ದೇವಾಲಯ ಮೋಟೆಬೆನ್ನೂರಿನಲ್ಲಿಯೂ ಜೀಸಸ್ ಕ್ರಿಸ್ತ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ರೇವೆರೆಂಡ್ ಅಶೋಕ ಬಂಡಿ ಮಾತನಾಡಿ, ಜೀಸಸ್ ಕ್ರೈಸ್ತರು ಸಂಪತ್ತಿಗಿಂತ ಸರಳತೆಗೆ ಆದ್ಯತೆ ನೀಡಿದರು. ಕ್ಷಮೆಯಲ್ಲಿ ನಿಜವಾದ ಶಕ್ತಿ ಅಡಗಿದೆ ಎಂಬುದನ್ನು ಸಾಬೀತು ಪಡಿಸಿದವರು, ದುರ್ಬಲರ ಪರನಿಂತು ಅನ್ಯಾಯ ಪ್ರಶ್ನಿಸಿದರು, ವಿಶ್ವಾದ್ಯಂತ ಶಾಂತಿ, ಸೇವೆ ಮತ್ತು ಸಾಮಾಜಿಕ ಸುಧಾರಣೆಗಾಗಿ ಅವರು ಚಳವಳಿಗಳಿಗೆ ಪ್ರೇರಣೆ ನೀಡಿದ್ದಾಗಿ ತಿಳಿಸಿದರು.ಹೆಚ್ಚು ಜನರು ಕ್ರೈಸ್ತ ಧರ್ಮ ಪರಿಧಿಗೆ: ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮವು ಸೇವಾ ಮನೋಭಾವವನ್ನು, ಸರಳತೆ, ನಾಗರಿಕ ಪ್ರಜ್ಞೆ, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗುತ್ತಿದೆ, ವಿಶ್ವದ ಜನಸಂಖ್ಯೆಯಲ್ಲಿ ಅತೀ ಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮವು ಬೈಬಲ್ ಹುಟ್ಟಿಗೆ ಕಾರಣವಾದ ಯೇಸುಕ್ರಿಸ್ತನನ್ನು ನಾವೆಲ್ಲರೂ ನೆನೆಯುತ್ತಿದ್ದೇವೆ, ಶೋಷಿತರು ಯಾರೇ ಆಗಲಿ ಅಸಹಾಯಕರ ಸೇವೆ ಮಾತ್ರ ಧರ್ಮದ ಉದ್ದೇಶವಾಗಿದೆ, ಸಮಾನತೆ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯ ಎನ್ನುವ ಔದಾರ್ಯ ಯೇಸುಕ್ರಿಸ್ತನ ಅನುಯಾಯಿಗಳ ಕೊಡುಗೆ ಎಂದರು. ಈ ವೇಳೆ ಹೆನ್ರಿಕ್ ಗುಡುಗೂರ, ಎಲಿಜಬೆತ್ ಅಗಡಿ, ಜಾನ್ ಪುನೀತ್, ಗುರುಪುತ್ರ ಕಾಲ್ಪಲ್, ಮೋಹನಪ್ಪ ಮಾಳಗಿ, ಡಿಸೋಜಾ ಬಲ್ಮಿ, ಪ್ರಭಾಕರ ಗುಡಗೂರ, ರತ್ನಾಕರ ಪುನೀತ, ಪ್ರಕಾಶ ಮಾಳೇಕರ, ನವರಾಜ ಶಿಗ್ಗಾವಿ, ಜಾನ್ ಆಗಡಿ, ಮಾಲಾ ಗುಡಗೂರ, ಚಂದ್ರಕಾಂತ ಪುನೀತ, ಸಲೋಮವ್ವ ಕಾಲ್ಪಲ್, ಪ್ರೇಮಾ ಕಾಲ್ಪಲ್, ಪ್ರೇಮಾ ಗುಡಗೂರ, ಪ್ರಿಸ್ಕಲ್ಲ ಅರಳೀಕಟ್ಟಿ, ಲೂಸಿ ಮಾಳಗಿ ಹಾಗೂ ಇನ್ನಿತರರಿದ್ದರು.