ಕುವೆಂಪು ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ: ಆರಗ ಜ್ಞಾನೇಂದ್ರ

| Published : Sep 06 2024, 01:12 AM IST

ಸಾರಾಂಶ

ಶಾಸಕ ಆರಗ ಜ್ಞಾನೇಂದ್ರ ಗುರುವಾರ ಕುಪ್ಪಳಿಯ ಕವಿಮನೆ ನಿರ್ಮಿಸಲಾದ ವಿಶ್ವಮಾನವ ಸಂದೇಶ ಫಲಕ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಕುವೆಂಪುರವರ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಅದನ್ನು ಜೀವಂತವಾಗಿರಿಸಿ ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಕರ್ತವ್ಯ ನಮ್ಮೆಲ್ಲರದ್ದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕುಪ್ಪಳಿಯ ಕವಿಮನೆ ಆವರಣದಲ್ಲಿ ನಿರ್ಮಿಸಲಾದ ವಿಶ್ವಮಾನವ ಸಂದೇಶ ಫಲಕವನ್ನು ಗುರುವಾರ ಅನಾವರಣಗೊಳಿಸಿ ಅವರು ಮಾತನಾಡಿ, ಕುಪ್ಪಳಿಗೆ ಭೇಟಿ ನೀಡುವ ವಿದೇಶಿಯರಿಗೂ ಕವಿ ಪರಿಚಯ ಸುಲಭವಾಗುವಂತೆ ಬಹಳ ಅಚ್ಚುಕಟ್ಟಾಗಿ ಫಲಕ ನಿರ್ಮಿಸಲಾಗಿದೆ. ಅನೇಕರಿಗೆ ಇದು ಸ್ಪೂರ್ತಿ, ಪ್ರೇರಣೆ ನೀಡಲಿದೆ ಎಂದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್‌, ಕುವೆಂಪು ಸೈದ್ಧಾಂತಿಕವಾಗಿ ರಾಜೀ ಮಾಡಿಕೊಳ್ಳದ ಅತ್ಯುತ್ತಮ ಶಿಕ್ಷಕ. ಸಮಸ್ಯೆ, ಸವಾಲುಗಳನ್ನು ಗಟ್ಟಿಯಾದ ನಿರ್ಧಾರ ದಿಂದ ಪ್ರಕಟಿಸಿ ತಮ್ಮ ವೈಕ್ತಿತ್ವದ ಅನಾವರಣ ಮಾಡಿದ್ದಾರೆ. ಕರ್ನಾಟಕ ಏಕೀಕರಣ, ಆಡಳಿತ ಭಾಷೆಗೆ ಒತ್ತಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಶರತ್ ಅನಂತಮೂರ್ತಿ, ವಿಶ್ವಮಾನವ ಸಂದೇಶ ಮಾನವೀಯತೆಯ ಮುಂದಿನ ಹೆಜ್ಜೆಗೆ ದಾರಿದೀಪವಾಗಿದೆ. ಸಮಾನತೆ ಮಾರ್ಗವನ್ನು ವಿಶ್ವಕ್ಕೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಎಂದು ಹೇಳಿದರು.

‘ಗ್ರಾಮೀಣ ಬದುಕು ಆಧರಿಸಿ ಕಾವ್ಯ ಸೃಷ್ಟಿಸಿದ್ದ ಕುವೆಂಪು ಪರಸ್ಪರ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಕೃತಿಗಳ ಎಲ್ಲಾ ಸಾಂಕೇತಿಕ ಪಾತ್ರಗಳು ಮನುಷ್ಯತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಅಗಾಧ ಕೊಡುಗೆ ನೀಡಿದೆ’ ಎಂದು ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಪ್ರಮುಖರಾದ ಎಂ.ಸಿ.ನರೇಂದ್ರ, ಸಸಿತೋಟ ದಯಾನಂದ, ಡಿ.ಎಂ.ಮನುದೇವ್, ಕೊಳವಾರ ನಾರಾಯಣಮೂರ್ತಿ ಇದ್ದರು.