ಮಂಜುಗುಣಿ ಕ್ಷೇತ್ರದ ಹಿನ್ನೆಲೆಯು ಅತ್ಯಂತ ಪ್ರಾಚೀನವಾಗಿದ್ದು, ಮಂಜುಗುಣಿ ದೇವಸ್ಥಾನಕ್ಕೂ ಮಠದ ಇತಿಹಾಸಕ್ಕೂ ಅವಿನಾಭಾವ ಸಂಬಂಧವಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಮಂಜುಗುಣಿ ಕ್ಷೇತ್ರದ ಹಿನ್ನೆಲೆಯು ಅತ್ಯಂತ ಪ್ರಾಚೀನವಾಗಿದ್ದು, ಮಂಜುಗುಣಿ ದೇವಸ್ಥಾನಕ್ಕೂ ಮಠದ ಇತಿಹಾಸಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪೂಜಾ ಸಂಪ್ರದಾಯಗಳನ್ನು ಇಂದಿಗೂ ಶ್ರದ್ಧಾಭಕ್ತಿಯಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಹೇಳಿದರು.ಚಾತುರ್ಮಾಸ್ಯದಲ್ಲಿ ಮಂಜುಗುಣಿ ಸೀಮಾ ಭಕ್ತರು ಸಲ್ಲಿಸಿದ ಪಾದಪೂಜೆ ಹಾಗೂ ಭಿಕ್ಷಾ ಸೇವೆ ಸ್ವೀಕರಿಸಿ ಮಂಗಳವಾರ ಆಶೀರ್ವಚನ ನೀಡಿದ ಅವರು, ಪ್ರಾಚೀನ ಕಾಲದಲ್ಲಿ ದೇವಸ್ಥಾನ ನಿರ್ಮಾಣದ ಹಿಂದೆ ಅಪಾರವಾದ ಶ್ರಮ ಮತ್ತು ಪರಿಶ್ರಮವಿತ್ತು. ಆಧುನಿಕ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ದೇವಸ್ಥಾನಗಳ ನಿರ್ಮಾಣ ಸುಲಭವಾಗಿದ್ದರೂ, ಹಿಂದಿನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ ಜನರು ಹಾಕುತ್ತಿದ್ದ ದೈಹಿಕ ಶ್ರಮ ಅನನ್ಯವಾದುದು ಎಂದರು.
ಒಬ್ಬ ಯೋಗಿ ತನ್ನ ಸಾಧನೆಯ ಮೂಲಕ ತನ್ನೊಳಗೆ ದೇವರ ಸನ್ನಿಧಿಯನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೂ, ದೇವಸ್ಥಾನ ನಿರ್ಮಿಸಿ ಅಲ್ಲಿ ದೇವರನ್ನು ನೆಲೆಗೊಳಿಸುವುದಕ್ಕೂ ‘ಬಿಂಬ–ಪ್ರತಿಬಿಂಬ’ ಭಾವದ ನಿಕಟ ಸಂಬಂಧವಿದೆ. ದೇವಸ್ಥಾನದ ಆಕಾರಕ್ಕೂ ಮಾನವ ಶರೀರದ ಆಕಾರಕ್ಕೂ ಸಾಮ್ಯವಿದ್ದು, ಧ್ವಜಸ್ತಂಭ ಹಾಗೂ ಗರ್ಭಗುಡಿಯ ವಿನ್ಯಾಸಗಳು ನಮ್ಮ ಶರೀರದ ವಾಸ್ತು ಮತ್ತು ಅಧ್ಯಾತ್ಮ ಯೋಗಶಾಸ್ತ್ರದೊಂದಿಗೆ ತಾಳೆ ಹೊಂದುತ್ತವೆ ಎಂದು ವಿವರಿಸಿದರು.ದೇವಸ್ಥಾನದ ತಳಪಾಯ ನಂಬಿಕೆ, ವಿಶ್ವಾಸ ಮತ್ತು ಶ್ರದ್ಧೆಯ ಮೇಲೆ ನಿಂತಿರುವಂತೆ, ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ ಮತ್ತು ಜ್ಞಾನಯೋಗಗಳು ಸಾಧನೆಯ ನಾಲ್ಕು ಗೋಡೆಗಳಂತಿವೆ. ದೇವಸ್ಥಾನದ ಮುಖ ಸಾಮಾನ್ಯವಾಗಿ ಪೂರ್ವ ದಿಕ್ಕಿಗೆ ಇರುವಂತೆ, ಸೂರ್ಯನ ಬೆಳಕು ಮತ್ತು ಗಾಳಿ ಒಳಬರಲು ಹಗಲಿನಲ್ಲಿ ಹೆಬ್ಬಾಗಿಲುಗಳನ್ನು ತೆರೆದಿಡಲಾಗುತ್ತದೆ. ಅದೇ ರೀತಿ ಯೋಗಿಯ ಸಾಧನೆಗೂ ಮನಸ್ಸು ಮುಕ್ತವಾಗಿರಬೇಕು ಎಂದರು.
ಪೂಜೆಯ ಆರಂಭದಲ್ಲಿ ಭೂತೋತ್ಸಾರಣೆ ಮಾಡುವಂತೆ, ಸಾಧಕನು ತನ್ನ ಸಾಧನೆಯ ಹಾದಿಯಲ್ಲಿ ಎದುರಾಗುವ ವ್ಯಾಧಿ, ಸಂಶಯ, ಆಲಸ್ಯ ಸೇರಿದಂತೆ ವಿವಿಧ ವಿಘ್ನಗಳನ್ನು ದಾಟಿ ಸಾಗಬೇಕು. ದೇವಸ್ಥಾನದ ಕಾವಲುಗಾರನಂತೆ ಅಪಮಾದವಿಲ್ಲದೆ ಎಚ್ಚರಿಕೆಯಿಂದಿರುವುದು ಸನ್ನಿಧಿಯ ಅನುಭವಕ್ಕೆ ಮುಖ್ಯ ಕಾರಣವಾಗಿದೆ. ಈ ವಿಘ್ನಗಳನ್ನು ಗೆಲ್ಲಲು ದೀರ್ಘಕಾಲ ನಿರಂತರವಾಗಿ ಏಕತತ್ತ್ವಾಭ್ಯಾಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.ಇಂದಿನ ಸುಸಂಸ್ಕೃತ ಸಮಾಜ ಹಾದಿ ತಪ್ಪುತ್ತಿರುವ ಪರಿಣಾಮ ಪೊಲೀಸ್ ಇಲಾಖೆಯಂತಹ ವ್ಯವಸ್ಥೆಗಳ ನೆರವು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಕಳವಳಕಾರಿ ಸಂಗತಿ. ಹಿಂದಿನ ಕಾಲದಲ್ಲಿ ಶ್ರಮದಲ್ಲಿಯೇ ಆನಂದವನ್ನು ಕಾಣುವ ಪ್ರವೃತ್ತಿಯಿತ್ತು. ಆದರೆ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಮನುಷ್ಯ ಶ್ರಮಹೀನನಾಗುತ್ತಾ ಮಾನಸಿಕ ಆಲಸ್ಯಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಪ್ರತಿಫಲದ ಅಪೇಕ್ಷೆಯಿಲ್ಲದೆ ಸೇವೆಯನ್ನು ಮುಂದುವರಿಸುವುದೇ ಕರ್ಮಯೋಗ. ತಾಳ್ಮೆ, ನಿರಂತರ ಪ್ರಯತ್ನ, ಶ್ರದ್ಧೆ ಮತ್ತು ಭಕ್ತಿಯಿಂದ ಮಾತ್ರ ಜೀವನದಲ್ಲಿ ಸಾರ್ಥಕತೆ ಸಾಧಿಸಲು ಸಾಧ್ಯ. ಸಾಧನೆಯ ಮೂಲಕ ದೇವಸ್ಥಾನದ ಸನ್ನಿಧಿಯನ್ನು ನಮ್ಮೊಳಗೇ ಕಾಣಲು ನಿರಂತರ ಶ್ರದ್ಧೆ ಮತ್ತು ಭಕ್ತಿಯೇ ಮುಖ್ಯ ಮಾರ್ಗವಾಗಿದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು.ಆನಂದಬೋಧೇಂದ್ರ ಸರಸ್ವತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಗಾಯತ್ರಿ ಜಪ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿವಿಧ ಕಾರ್ಯ ಮಂಜಗುಣಿ ಸೀಮೆಯ ಭಕ್ತರಿಂದ ನಡೆದವು. ರತ್ನಾಕರ ಭಟ್, ಕೃಷ್ಣಮೂರ್ತಿ ಭಟ್, ರಾಮಚಂದ್ರ ಇತರರು ಇದ್ದರು.