ಸಾರಾಂಶ
ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರಸಾಹಿತ್ಯ, ಸಂಶೋಧನೆ ಕೃಷಿಯಲ್ಲಿ ಅಗಾಧ ಹೆಸರು ಮಾಡಿದ, ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ದೇವಿಂದ್ರಪ್ಪ ನಾಭಿರಾಜ ಅಕ್ಕಿ ಅವರು ಇಂದು (ಮಾ.2) ನಡೆಯಲಿರುವ 4ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕನ್ನಡಪ್ರಭ ಸಂದರ್ಶನ ಮೂಲಕ ಅವರ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಯ್ಕೆ ನಿಮ್ಮ ಅನಿಸಿಕೆ?ಜವಳ, ಮುಂಜಿ, ಅಯ್ಯಾಚಾರ, ಮದುವೆ, ಉದ್ಯೋಗಕ್ಕೆ ಇಂತಿಷ್ಟು ವಯಸ್ಸು ಅನ್ನುವುದು ಇರುತ್ತದೆ. ಆದರೆ, ನನ್ನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಲು ಇಷ್ಟು ವರ್ಷ ಬೇಕಾಯಿತಾ? ಪ್ರತಿಭೆ ಹಾಗೂ ಸಾಹಿತಿಯನ್ನು ಜಾತಿ, ಮತ, ಧರ್ಮದಿಂದ ನೋಡಬಾರದು. ಸಾಹಿತ್ಯ ಕ್ಷೇತ್ರದ ಸೇವೆ ಪರಿಗಣಿಸಿ ಸಕಾಲದಲ್ಲಿ ಸಮ್ಮೇಳನದ ಅಧ್ಯಕ್ಷರು ಆಯ್ಕೆ ಮಾಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಇಳಿವಯಸಿನಲ್ಲಿ ಅದನ್ನು ಹೆಚ್ಚು ಸಂಭ್ರಮಿಸಲು ಸಾಧ್ಯವೇ? ಈಗಿರುವ ಪರಿಷತ್ತಿನಲ್ಲಿ ಬಹುತೇಕರು ಸಮಾನ ಮನಸ್ಕರು ಸೇರಿ ನನ್ನನ್ನು ಆಯ್ಕೆ ಮಾಡಿರುವುದು ಅತ್ಯಂತ ಖುಷಿ ತಂದಿದೆ. ಇದಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರೋತ್ಸಾಹಿಸಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ ಯಾವ ದಿಕ್ಕಿನತ್ತ ಸಾಗುತ್ತಿದೆ?ಕನ್ನಡ ಸಾಹಿತ್ಯ ಪರಿಷತ್ ವಿವಾದಗಳಿಂದ ಇಂದಿಗೂ ಮುಕ್ತವಾಗಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ದಶಕಗಳಿಂದ ತನ್ನ ಮೂಲ ಉದ್ದೇಶದಿಂದ ಕಳಚಿಕೊಂಡು ಸ್ವಾರ್ಥಿಗಳ ಮತ್ತು ಅಧಿಕಾರ ಲಾಲಸೆಯ ಕೇಂದ್ರವಾಗಿ ರೂಪಾಂತರಗೊಂಡಿದೆ. ಸಾಹಿತ್ಯ ವಲಯ ಇಂದು ವಿವಿಧ ಗುಂಪುಗಳಾಗಿ ಒಡೆದು ಹೋಳಾಗಿದೆ. ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದೆ. ಡೆಮಾಕ್ರೆಟಿಕ್ ವಾತಾವರಣ ಇವತ್ತಿನ ಕನ್ನಡ ಸಾಹಿತ್ಯ ವಲಯದಲ್ಲಿಲ್ಲ. ಅಸಹನೆ, ವರ್ಗ ತಾರತಮ್ಯ, ಅಸೂಯೆ, ಗುಂಪುಗಾರಿಕೆ, ಅಧಿಕಾರದ ಓಲೈಸುವಿಕೆ, ರಾಜಕಾರಣ, ಪ್ರಶಸ್ತಿ ಪುರಸ್ಕಾರದ ಲಾಭಿ ಇವತ್ತಿನ ಸಾಹಿತ್ಯ ವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ.
ಯುವ ಸಾಹಿತಿಗಳಿಗೆ ಕಿವಿಮಾತು ಏನು?ಇಂದಿನ ಯುವ ಸಾಹಿತಿಗಳು ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ವಸ್ತುನಿಷ್ಠೆ ಬರವಣಿಗೆ ಕಡೆ ಹೆಚ್ಚಿನ ಗಮನ ಹರಿಸಬೇಕು. ಸಜ್ಜನ ಸೋಗಿನ ಸಾಂಸ್ಕೃತಿಕ ಲೋಕದ ಭಯೋತ್ಪಾದಕರಿಂದ ಯುವ ಸಾಹಿತಿಗಳು ಎಚ್ಚರ ವಹಿಸಬೇಕು ಎಂದು ಯುವ ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಯುವಕರಿಗೆ ನಿಮ್ಮ ಸಲಹೆ?ಇಂದಿನ ಯುವಶಕ್ತಿ ಮೊಬೈಲ್, ವಾಟ್ಸಪ್, ಫೇಸ್‌ಬುಕ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಅನೇಕ ಪಚೋಧಾತ್ಮಕ ಸಂದೇಶಗಳು ಚಿತ್ರಗಳಿಗೆ ಆಕರ್ಷಣೆಯಾಗಿ ತಮ್ಮ ಅಮೂಲ್ಯ ವಾದ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು, ಒಳ್ಳೊಳ್ಳೆ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿಗಳು ಸಾಹಿತ್ಯ ಆಸಕ್ತರು ಈ ಯುವ ಸಮುದಾಯಕ್ಕೆ ಓದಿನ ಹವ್ಯಾಸ ಬೆಳೆಸಲು ತರುಣರಿಗಾಗಿ ಕೆಲವು ಕಮ್ಮಟಗಳನ್ನು ನಡೆಸಬಹುದು. ಕೆಲವು ಪುಸ್ತಕಗಳನ್ನು ಓದಲು ಸೂಚಿಸಿ ಅವುಗಳ ಮೇಲೆ ಕ್ವಿಜ್ ರೀತಿಯ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಸಲಹೆ ನೀಡಿದರು.
ಮೌಲ್ಯಯುತ ಸಾಹಿತ್ಯ ಹೀಗಿರಬೇಕು?ಕೃತಿಯಿಂದ ಮನಸ್ಸು ಅರಳ ಬೇಕು. ಮನಸ್ಸು ಕೆರಳಬಾರದು. ಸಾಹಿತ್ಯ ಹೃದಯವನ್ನು ಬೆಸೆಯುತ್ತದೆ, ಮಾನವೀಯತೆಯನ್ನು ಬೆಳೆಸುತ್ತದೆ. ಮನಸ್ಸು ಮತ್ತು ಸಮಾಜವನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಇಂದಿನ ಸಮಾಜದ ಪರಸ್ಥಿತಿಗೆ ಇಂಥ ಸಾಹಿತ್ಯ ರಚನೆಯ ಅವಶ್ಯಕತೆ ಇದೆ ಎಂದರು.
ಕನ್ನಡ ಭಾಷೆ ಅಸ್ತಿತ್ವಕ್ಕಾಗಿ ನಿಮ್ಮ ಅನಿಸಿಕೆ ಏನು?ಇವತ್ತು ಕನ್ನಡ ಭಾಷೆ ತನ್ನದೇ ನೆಲದಲ್ಲಿ ತನ್ನ ಅಸ್ತಿತ್ವಕ್ಕಾಗಿ ಅನೇಕ ಭಾಷೆಗಳೊಡನೆ ಸೇಣಿಸಬೇಕಿದೆ. ಕನ್ನಡ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಆದರೆ, ಕನ್ನಡದ ಪುಸ್ತಕಗಳು, ಸಾಹಿತ್ಯದ ಭಾಷೆ ನಮ್ಮ ಮನೆಗಳಿಗೆ ತಲುಪುತ್ತಿಲ್ಲ. ಸಾಹಿತ್ಯ ನಮ್ಮ ಮನೆ ಮಾತು ಆಗುತ್ತಿಲ್ಲ. ನಾವು ನಮ್ಮ ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಮತ್ತೊಮ್ಮೆ ಗೋಕಾಕ್ ಚಳವಳಿಯಂತಹ ಹೋರಾಟ ಮಾಡುವುದು ಅನಿವಾರ್ಯತೆ ಇದೆ.
ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ನಿಮ್ಮ ಅಭಿಪ್ರಾಯ?ನಮ್ಮಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅದ್ಧೂರಿಯಾಗಿ, ಕಣ್ಣು ಕುಕ್ಕುತ್ತ ವಿಜೃಂಭಿಸುತ್ತಿವೆ. ಅವುಗಳ ಮುಂದೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಮಂಕಾಗಿ ತಲೆತಗ್ಗಿಸಿ ನಿಂತಿವೆ. ಸದ್ಯದಲ್ಲಿ ಕನ್ನಡಕ್ಕೆ ಬಂದಿರುವ ದೊಡ್ಡ ಕುತ್ತು ಮತ್ತು ವಿಪತ್ತು ಎಂದರೆ, ರಾಜ್ಯದಲ್ಲಿ ಸುಮಾರು ಮೂರು ಸಾವಿರ ಕನ್ನಡ ಶಾಲೆಗಳನ್ನು, ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ ಎಂಬ ಕಾರಣದಿಂದ ಮುಚ್ಚಲು ಹೊರಟಿರುವುದು. ವಿಷಾದನೀಯ. ಕಲಿಯುವ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುತ್ತಾರೆ. ಅಷ್ಟೆ ಅಲ್ಲ, ಒಂದು ಬಗೆಯ ನವ ಅಸ್ಪೃಶ್ಯತೆಯನ್ನು ಆಂಗ್ಲ ಮಾಧ್ಯಮ ಹುಟ್ಟುಹಾಕಿದೆ. ಈ ತಾರತಮ್ಯವನ್ನು ಹೋಗಲಾಡಿಸುವ ಸಮಾನ ಶಿಕ್ಷಣ ಅಥವಾ ಶಿಕ್ಷಣದಲ್ಲಿ ಸಮಾನತೆ ಬೇಕಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಯಾರು ಎಳೆಯಬೇಕು?ಸಾಹಿತ್ಯ ಸಮ್ಮೇಳನ ಎಂದರೆ ಅದು ಭಾಷೆ ಮತ್ತು ಸಂಸ್ಕೃತಿಗಳ ಕುರಿತ ಅಭಿಮಾನದ ತೇರೆಳೆವ ಕ್ರಿಯೆ. ಪೂರ್ವಾಗ್ರಹ, ವಶೀಲಿ, ಜಾತಿ, ಮತ, ಹಣ, ಲಿಂಗ ತಾರತಮ್ಯ, ಧಾರ್ಮಿಕ ಅಸಹಿಷ್ಣುತೆ ಯಾವುದೂ ಅಲ್ಲಿ ಅಡ್ಡಿಯಾಗಬಾರದು. ಕನ್ನಡ ನಾಡಿನ ಪ್ರತಿ ಪ್ರಜೆಯು ಕನ್ನಡದ ತೇರು ಎಳೆಯಬೇಕು. ನಿಮ್ಮ ಸಾಹಿತ್ಯ ಕೃಷಿ ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯವಶ್ಯವಾಗಿದೆ. ನಿಮ್ಮ ಸಾಹಿತ್ಯ ಕೃಷಿ ಹೀಗೇ ಸಾಗಲಿ.