ಸಾರಾಂಶ
ಮಂಜುನಾಥ ಕೆ.ಎಂ
ಕನ್ನಡಪ್ರಭ ವಾರ್ತೆ ಬಳ್ಳಾರಿಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ 2025-26ನೇ ಸಾಲಿನ ಬಜೆಟ್ ಮೇಲೆ ಗಣಿಜಿಲ್ಲೆ ಬಳ್ಳಾರಿ ಹಲವು ನಿರೀಕ್ಷೆಗಳನ್ನೊತ್ತಿದೆ.
ಹಲವು ವರ್ಷಗಳ ಬೇಡಿಕೆಯಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಈ ಬಾರಿಯ ಬಜೆಟ್‌ನಲ್ಲಾದರೂ ಮುಕ್ತಿ ಸಿಗಬಹುದೇ? ಎಂಬ ಕುತೂಲಹವಿದ್ದು, ಶೈಕ್ಷಣಿಕವಾಗಿ ಅಭಿವೃದ್ಧಿ ಹಾದಿ ತುಳಿದಿರುವ ಬಳ್ಳಾರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಬೇಡಿಕೆಗೆ ಈ ವರ್ಷದ ಬಜೆಟ್‌ನಲ್ಲಾದರೂ ಸರ್ಕಾರ ಸ್ಪಂದಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ.ಅಪರೆಲ್ ಪಾರ್ಕ್‌ಗೆ ಹಣ ಕೊಡಿ:
ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಿಯಾದರೂ ತೋಟಗಾರಿಕೆ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ಸಹ ಬಹುದಿನದ ಬೇಡಿಕೆಯಾಗಿದೆ. ತೋಟಗಾರಿಕೆ ಕುರಿತು ಅಧ್ಯಯನಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಜಿಲ್ಲೆಯಲ್ಲಿಯೇ ಕಾಲೇಜು ಸ್ಥಾಪನೆಯಾದಲ್ಲಿ ಹೆಚ್ಚು ಅನುಕೂಲವಾಗಲಿದೆ.ಜೀನ್ಸ್ ಅಪರೆಲ್ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಈ ಬಾರಿ ಬಜೆಟ್‌ನಲ್ಲಿ ಯಾವ ನಿಲುವು ತೆಗೆದುಕೊಳ್ಳಲಾಗುತ್ತಿದೆ ಎಂಬ ಕುತೂಹಲವಿದೆ. ಕಳೆದ ಬಜೆಟ್‌ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ಅಭಿವೃದ್ಧಿ ಎಂದಷ್ಟೇ ಹೇಳಿ ಸರ್ಕಾರ ಕೈ ತೊಳೆದುಕೊಂಡಿತ್ತು. ಅನುದಾನ ನಿಗದಿ, ಬಿಡುಗಡೆ ಸಂಬಂಧ ಯಾವ ಕ್ರಮವನ್ನೂ ವಹಿಸಲಿಲ್ಲ. ಹೀಗಾಗಿ ಈ ಬಾರಿಯಾದರೂ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿವರ ಒತ್ತಾಸೆಯನ್ನು ಈ ಸರ್ಕಾರ ಈಡೇರಿಸುತ್ತದೆಯೇ ಅಥವಾ ಮತ್ತೆ ಘೋಷಣೆಗೆ ಸೀಮಿತಗೊಳಿಸುತ್ತದೆಯೇ ಕಾದು ನೋಡಬೇಕಿದೆ.
ಬಳ್ಳಾರಿಯಲ್ಲಿ ವಿಮಾನ ಹಾರಾಡಬೇಕು:ಬಳ್ಳಾರಿ ವಿಮಾನ ನಿಲ್ದಾಣದ ಬಗ್ಗೆ ಸರ್ಕಾರ ಎಲ್ಲೂ ಕಾಳಜಿಯ ಕ್ರಮ ಈವರೆಗೆ ತೆಗೆದುಕೊಂಡಿಲ್ಲ. ಈ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬಹುದೇ ಎಂಬ ನಿರೀಕ್ಷೆಯಿದೆ.
ಮಹಿಳಾ ಡಿಪ್ಲೊಮಾ ಕಾಲೇಜು ನಿಮಾರ್ಣಕ್ಕೆ ಅನುದಾನ, ಕಂಪ್ಲಿ ತಾಲೂಕು ಮತ್ತು ಕೊಪ್ಪಳ ಜಿಲ್ಲೆ ಗಂಗಾವತಿ ನಡುವಿನ ಸೇತುವೆ ನಿರ್ಮಾಣ, ಹಗರಿ ನದಿಗೆ ಸೇತುವೆ ನಿರ್ಮಾಣ, ಸಿರುಗುಪ್ಪದಲ್ಲಿ ಮಿನಿ ವಿಧಾನಸೌಧ, ಬಳ್ಳಾರಿ ನಗರಕ್ಕೆ ತುಂಗಭದ್ರಾ ಜಲಾಶಯದಿಂದ ನೇರವಾಗಿ ನೀರು ಪೂರೈಸುವ ಯೋಜನೆ, ಜಿಲ್ಲೆಯಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪನೆ, ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಬಳ್ಳಾರಿಯಲ್ಲಿ ಎಲ್‌ಎಲ್‌ಎಂ ಕಾಲೇಜು ಸ್ಥಾಪನೆ, ಐತಿಹಾಸಿಕ ಬಳ್ಳಾರಿ ಕೋಟೆಗೆ ರೋಪ್‌ವೇ ನಿರ್ಮಾಣ, ಮಿಂಚೇರಿ ಗುಡ್ಡ, ಸಂಡೂರು ಪರಿಸರ ತಾಣಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಸಂಬಂಧ ಈ ಬಾರಿಯ ಬಜೆಟ್‌ನಲ್ಲಿ ಕ್ರಮ ವಹಿಸಬಹುದೇ ? ಎಂಬ ನಿರೀಕ್ಷೆಗಳಿವೆ.ಸಚಿವ, ಶಾಸಕರುಗಳಿಗೆ ಇಚ್ಛಾಶಕ್ತಿಯಿರಲಿ: ಈ ಹಿಂದೆ ಘೋಷಣೆಗೈದ ಅನೇಕ ಯೋಜನೆಗಳು ಅಭಿವೃದ್ಧಿಗೆ ತೆರೆದುಕೊಳ್ಳುವ ಮುನ್ನವೇ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಎಷ್ಟರ ಮಟ್ಟಿಗೆ ಆದ್ಯತೆ ಸಿಗಲಿದೆ ಎಂಬ ಕುತೂಹಲವೂ ಇದೆ. ಕಳೆದ ಆರು ತಿಂಗಳಿನಿಂದ ಬಳ್ಳಾರಿಯಿಂದ ದೂರವೇ ಉಳಿದಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹ್ಮದ್ ಜಿಲ್ಲೆಯ ಪ್ರಗತಿಯ ಕಡೆ ಎಷ್ಟರ ಮಟ್ಟಿಗೆ ಗಮನ ನೀಡುತ್ತಾರೆ. ಮುಖ್ಯಮಂತ್ರಿಗೆ ಹೆಚ್ಚು ಆಪ್ತವಾಗಿರುವ ಈ ಜಿಲ್ಲೆಯ ಶಾಸಕರು ಬಜೆಟ್‌ನಲ್ಲಿ ಏನೇನು ಹೊತ್ತು ತರುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲವೂ ಹೌದು.
ಜಿಲ್ಲೆಯ ಜನರ ಪ್ರಮುಖ ಬೇಡಿಕೆಗಳಿಗೆ ಅನುದಾನ ತಂದು ಅಭಿವೃದ್ಧಿಗೊಳಿಸುವುದು ಜಿಲ್ಲೆಯ ಜನಪ್ರತಿನಿಧಿಗಳ ಒತ್ತಾಸೆ ಹಾಗೂ ಇಚ್ಛಾಶಕ್ತಿ ಮೇಲೆಯೇ ನಿಂತಿದ್ದು, ಈ ಬಾರಿ ಜಿಲ್ಲೆಯ ಶಾಸಕರು ಹಾಗೂ ಸಚಿವರು ಎಷ್ಟರ ಮಟ್ಟಿಗೆ ಬಳ್ಳಾರಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗುವಂತೆ ನೋಡಿಕೊಳ್ಳುತ್ತಾರೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.