ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪಾಳಗಾರಿಕೆ ಮನಸ್ಥಿತಿಯಲ್ಲಿ ಮಾತನಾಡಿರುವ ಸಚಿವ ಎಂ.ಬಿ. ಪಾಟೀಲ್ ಕೂಡಲೇ ಕ್ಷಮೆಯಾಚಿಸಬೇಕು. ನೀವೇನು ದುಡ್ಡಿನ ಗಿರಾಕಿಯೇ ಎಂದು ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಕಟುವಾಗಿ ಟೀಕಿಸಿದರು.ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಐಎಡಿಬಿಯಿಂದ ಖರ್ಗೆ ಅವರ ಪುತ್ರನ ಹೆಸರಿನಲ್ಲಿರುವ ಟ್ರಸ್ಟ್ ಗೆ ನಿವೇಶನ ಮಂಜೂರು ಮಾಡಿರುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ ತರಾತುರಿಯಲ್ಲಿ ಉಳಿದ ಅರ್ಜಿ ಬದಿಗಿರಿಸಿ ನಿಮ್ಮದೇ ಅರ್ಜಿಗೆ ನಿವೇಶನ ನೀಡಿರುವ ಕುರಿತು ಅನುಮಾನ ಹುಟ್ಟಿದೆಯಷ್ಟೇ ಎಂದರು.
ಅನುಮಾನಕ್ಕೆ ಸಮಜಾಯಿಷಿ ನೀಡುವ ಬದಲು ಕಾಂಗ್ರೆಸ್ ನಾಯಕರು ವಿಷಯಾಂತರ ಮಾಡಲು ಮುಂದಾಗಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಸಿಎ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ತಂದಿದ್ದ ಕಾನೂನಿಗೆ ತಿದ್ದುಪಡಿ ತಂದು ಹೊಸ ಕಾನೂನು ರಚಿಸಿ ಹಂಚಿಕೆ ಮಾಡಲಾಗಿದೆ. ಪ್ರಿಯಾಂಕ ಖರ್ಗೆ ಅವರ ಟ್ರಸ್ಟ್ ಗೆ ಹಂಚಿಕೆ ಮಾಡಿರುವ ಪ್ರಕರಣ ಕಾನೂನುಬಾಹಿರ ಆಗಿದೆ ಎಂದು ಅವರು ದೂರಿದರು.ಕೈಗಾರಿಕಾ ನಿವೇಶನಕ್ಕಾಗಿ 282 ಅರ್ಜಿಗಳನ್ನು ಸಲ್ಲಿಕೆಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ಮಾಡದೆ ಕೇವಲ ಐದಾರು ಅರ್ಜಿಯನ್ನು ಮಾತ್ರ ಪರಿಶೀಲಿಸಿ ಮಂಜೂರು ಮಾಡಿರುವುದರಿಂದ ಅನುಮಾನ ವ್ಯಕ್ತಪಡಿಸಿ ಮತ್ತೊಮ್ಮೆ ಪುನರ್ ಪರಿಶೀಲನೆ ವಾಡುವಂತೆ ಮನವಿ ವಾಡಿದ್ದಾರೆ. ಒಬ್ಬ ಪ್ರತಿಪಕ್ಷ ನಾಯಕ ತನಗಿರುವ ಜವಾಬ್ದಾರಿಯಂತೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ನಾಗರಿಕ ಮತ್ತು ಸಂವಿಧಾನ ಬದ್ದವಾಗಿರುವ ಸರ್ಕಾರ ಜನರ ಮುಂದೆ ಉತ್ತರ ಕೊಡಬೇಕು. ಆದರೆ, ಸರ್ಕಾರ ನೀಡುತ್ತಿರುವ ಉತ್ತರ ವಿಚಿತ್ರವಾಗಿದೆ. ನೀವು ಅಕ್ರಮ ಮಾಡಿಲ್ಲವೇ ಎನ್ನುವುದಾದರೇ ನಾವೂ ಅಕ್ರಮ ಮಾಡುತ್ತೇವೆ ಎಂದು ಹೇಳಿದಂತೆ. ಯಾವುದೂ ಅಕ್ರಮವಾಗಿ ಮಂಜೂರಾಗಿದೆ ಎಂಬುದನ್ನು ಪರಿಶೀಲಿಸಿ ರದ್ದುಪಡಿಸಲು ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಛಲವಾದಿ ನಾರಾಯನಸ್ವಾಮಿ ಅವರನ್ನು ಶೆಡ್ ಗಿರಾಕಿ ಎನ್ನುವ ಮಾತನಾಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ನಾಚಿಕೆಪಡುವಂತ ತಪ್ಪೇನೂ ಮಾಡಿಲ್ಲ. ಒಂದು ವೇಳೆ ಛಲವಾದಿ ನಾರಾಯನಸ್ವಾಮಿ ಅವರಿಗೆ ಮಂಜೂರು ಆಗಿರುವ ಭೂಮಿ ಕಾನೂನುಬಾಹಿರ ಆಗಿದ್ದರೆ ರದ್ದುಪಡಿಸಲಿ ಎಂದು ಅವರು ಸವಾಲು ಹಾಕಿದರು.ಛಲವಾದಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸಚಿವ ಎಂ.ಬಿ. ಪಾಟೀಲ್ ಮಾತನಾಡುತ್ತಿದ್ದಾರೆ. ಇದು ಪಾಟೀಲರ ಉಳಿಗಮಾನ್ಯ, ಯಜಮಾನಿಕೆ ಸಂಸ್ಕತಿಯನ್ನು ಎತ್ತಿ ತೋರಿಸುತ್ತದೆ. ತಕ್ಷಣವೇ ಛಲವಾದಿ ನಾರಾಯಣಸ್ವಾಮಿ ಅವರಲ್ಲಿ ಕ್ಷಮೆ ಕೋರಬೇಕು. ನಾರಾಯಣಸ್ವಾಮಿ ಅವರೇ ಹೇಳಿದಂತೆ ಸುಮಾರು 550 ರಿಂದ 600 ಕೋಟಿ ರೂ. ಅವ್ಯವಹಾರ ಆಗಿರುವ ಕಾರಣ ನಿಮ್ಮನ್ನು ದುಡ್ಡಿನ ಗಿರಾಕಿ ಅನ್ನಬಹುದೇ ಎಂದು ಅವರು ಟೀಕಿಸಿದರು.
ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಪಕ್ಷದಲ್ಲಿದ್ದರು ಗೌರವ ಕೊಡುತ್ತೇವೆ. ಆದರೆ ಸಂವಿಧಾನ ಬದ್ಧವಾದ ಹಕ್ಕು ಕೊಡಿಸಲು ಮೀಸಲಾತಿ ಕಲ್ಪಿಸಲಾಗಿದೆಯೇ ಹೊರತು ಅವರು ತಮಗೆ ಬೇಕಾಗಿದ್ದನ್ನು ಮಾಡಿಕೊಳ್ಳಲು ಅಲ್ಲ. ಕೆಐಎಡಿಬಿ ಆರಂಭವಾಗಿ 40 ವರ್ಷವಾದರೂ ತಮ್ಮಂತವರು ಇದ್ದರೂ ಎಸ್ಸಿ, ಎಸ್ಟಿಗೆ ನಿವೇಶನ ಹಂಚಿಕೆಯಲ್ಲಿ ಮೀಸಲಾತಿ ನೀಡಲು ಆಗಿರಲಿಲ್ಲ. 2009ರಲ್ಲಿ ಯಡಿಯೂರಪ್ಪ ಅವರು ಸಿಎಂ ಆದ ಮೇಲೆ ಮೀಸಲಾತಿ ಜಾರಿಗೆ ತಂದಿದ್ದಾಗಿ ಅವರು ಹೇಳಿದರು.2009 ರಿಂದ 2024 ರವರೆಗೆ ಸಾಮಾನ್ಯ ವರ್ಗದವರಿಗೆ 3,494 ನಿವೇಶನ, ಎಸ್ಸಿ, ಎಸ್ಟಿಗೆ 2,590 ನಿವೇಶನ ಹಂಚಲಾಗಿದೆ. ಉಳಿದ ಬ್ಯಾಕ್‌ಲಾಗ್‌ಶೇ. 16ರಷ್ಟು ನಿವೇಶನ ಹಂಚಿಕೆ ಬಗ್ಗೆ ಪ್ರಿಯಾಂಕ ಖರ್ಗೆ ಚಕಾರ ಎತುತ್ತಿಲ್ಲ. ಎಸ್ಸಿ, ಎಸ್ಟಿಗೆ ಸಬ್ಸಿಡಿ ಕೊಡುವಾಗ ಮೂರು ಕೋಟಿ ರೂ. ಇದ್ದರೆ ಶೇ. 50ರಷ್ಟು ಕೊಡಲಾಗುತ್ತಿತ್ತು. ಆದರೆ ಈ ಅನುದಾನ ಸಾಲುವುದಿಲ್ಲ ಎಂದು ಎಸ್ಸಿ, ಎಸ್ಟಿ ಸದನ ಸಮಿತಿಯ ಶಿಫಾರಸ್ಸಿನಂತೆ ಶೇ. 75ರಷ್ಟು ಸಬ್ಸಿಡಿ ಹೆಚ್ಚಿಸಿದರು. ನಮ್ಮವರಿಂದ ಅನ್ಯಾಯವಾದರೇ ಕೇಳುವುದು ತಪ್ಪೇ. ಹಾದಿ ಬೀದಿಯಲ್ಲಿ ಹೋಗುವವರು ಮಾತನಾಡುತ್ತಿದ್ದಾರೆ. ಪ್ರತಿಪಕ್ಷದ ನಾಯನ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದರೇ ವಿಜಯಪುರ ಜಿಲ್ಲೆಯ ದಲಿತರ ಪಾಡು ಏನಾಗಿರಬಹುದು ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಪರಮಾನಂದ, ಮಾಜಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಅನಿಲ್, ನಗರ ಅಧ್ಯಕ್ಷ ವಿ. ಶೈಲೇಂದ್ರ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮೊದಲಾದವರು ಇದ್ದರು.