ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್‌ನ ಸಮಾಧಿಯನ್ನು ದುಷ್ಕರ್ಮಿಗಳು ಹಾನಿ ಮಾಡಿದ್ದು, ಸಂಕೇತ್ ಮೃತಪಟ್ಟ ಮೇಲೂ ನೆಮ್ಮದಿಯಿಲ್ಲದಂತೆ ಮಾಡಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್‌ನ ಸಮಾಧಿಯನ್ನು ದುಷ್ಕರ್ಮಿಗಳು ಹಾನಿ ಮಾಡಿದ್ದು, ಸಂಕೇತ್ ಮೃತಪಟ್ಟ ಮೇಲೂ ನೆಮ್ಮದಿಯಿಲ್ಲದಂತೆ ಮಾಡಿರುವ ಘಟನೆ ನಡೆದಿದೆ.ಕಳೆದ ಫೆ.24 ರಂದು ಊರಗಡೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್ ಹತ್ಯೆಯಾಗಿತ್ತು. ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್‌ನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಸಂಕೇತ್ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೊ ಅಳವಡಿಸಲಾಗಿತ್ತು. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗ ಒಡೆದಿರುವುದು ಗೊತ್ತಾಗಿದೆ. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಇನ್ನು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಮಾಧಿಗೆ ಮಗ ಸಂಕೇತ್‌ನ ಫೋಟೋ ಅಳವಡಿಸಲಾಗಿತ್ತು. ಅದನ್ನು ಕಲ್ಲಿನಿಂದ ಜಜ್ಜಿದ್ದಾರೆ. ಹಿಂದೆ ಹಾಕಿದ್ದ ಗ್ರಾನೈಟ್ ಒಡೆದು ಹಾಕಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂಕೇತ್‌ನ ಸಾವಿನ ಬಳಿಕ ಮನೆಯಲ್ಲಿ ನೆಮ್ಮದಿ ಇಲ್ಲವಾಗಿದೆ. ಈಗ ಇಂತಹ ಘಟನೆ ನಡೆದಿರುವುದು ಮತ್ತಷ್ಟು ಆಘಾತ ತಂದಿದೆ ಎಂದು ಸಂಕೇತ್‌ನ ತಂದೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಹಿಂದೂ ರುದ್ರಭೂಮಿಯಲ್ಲಿ ಮಾ.26ರಂದು ಸಂಕೇತ್ ಸಮಾಧಿಗೆ ಕಟ್ಟೆ ಕಟ್ಟಿಸಲಾಗಿತ್ತು. ಕುಟುಂಬದವರು ಸುತ್ತಲು ಗ್ರಾನೈಟ್ ಕಲ್ಲು ಹಾಕಿಸಿದ್ದರು. ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಹಿಂಬದಿಯಲ್ಲಿ ಸಂಕೇತ್‌ನ ಫೋಟೊ ಇರಿಸಲಾಗಿತ್ತು. ಕುಟುಂಬದವರು ಪ್ರತಿ ದಿನ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಮಾಡಿ ಬರುತ್ತಿದ್ದರು ಎಂದು ತಿಳಿಸಿದರು.ಸಂಕೇತ್‌ಗೆ ಬುಧವಾರ ಅಂದರೆ ಪ್ರೀತಿ. ಆತ ಪ್ರತಿ ಬುಧವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಪೂಜೆ ಮಾಡುತ್ತಿದ್ದ. ಹಾಗಾಗಿ ಈ ಬುಧವಾರ ಸಮಾಧಿ ಸ್ಥಳಕ್ಕೆ ಕುಟುಂಬದವರೆಲ್ಲ ತೆರಳಿ ಪೂಜೆ ಸಲ್ಲಿಸುವ ಯೋಚನೆಯಲ್ಲಿದ್ದರು. ಆದರೆ, ಮಂಗಳವಾರ ಸಂಜೆ ಸಮಾಧಿ ಒಡೆದ ವಿಷಯ ತಿಳಿದು ಬಂದಿದೆ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ಬಾಕ್ಸ್...
ಪೊಲೀಸರು ಬಿಗಿ ಕ್ರಮ ಕೈಗೊಳ್ಳಿ: ಆರಗಬಾಲಕನ ಸಮಾಧಿಯನ್ನು ದುಷ್ಕರ್ಮಿಗಳು ಹಾನಿ ಮಾಡಿರುವುದು ತುಂಬಾ ದುಃಖದ ವಿಚಾರ. ಇದೊಂದು ದುಷ್ಕರ್ಮಿಗಳ ಕೃತ್ಯವಾಗಿದ್ದು, ಪೊಲೀಸರು ಬಿಗಿಕ್ರಮ ಕೈಗೊಳ್ಳಬೇಕಾಗಿದೆ ಎಂದು ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೃತ್ಯ ಎಸಗಿದವರಿಗೆ ಕಾನೂನು ಮತ್ತು ಪೊಲೀಸರ ಭಯವಿಲ್ಲ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ ಎಂಬ ಸಂಶಯ ಕಾಡುತ್ತಿದೆ. ಪರಿಸ್ಥಿತಿ ಕೈಮೀರುವ ಮೊದಲು ಪೊಲೀಸರು ಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಾಲಕನ ಸಮಾದಿ ಎಂದರೆ ಬಹಳ ಜನರ ಭಾವನೆ ಅದರ ಮೇಲಿದೆ. ಅನೇಕರಿಗೆ ಈ ಘಟನೆ ಕಸಿವಿಸಿವುಂಟು ಮಾಡಿದೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇಂತಹ ದುಷ್ಕೃತ್ಯ ಎಸಗುವವರಿಗೆ ಹಾಸಿಗೆ ಹಾಸಿಕೊಟ್ಟ ಹಾಗೆ ಆಗಿದೆ. ಪ್ರತಿಭಟನೆ ಮಾಡಿದವರ ಮೇಲೆ ಕೇಸು ಹಾಕಲಾಗುತ್ತಿದೆ. ಈ ನೊಂದ ಕುಟುಂಬಕ್ಕೆ ಸಾವಿನ ನಂತರವೂ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದರೆ ಅವರೆಷ್ಟು ಕ್ರೂರಿಗಳಿರಬಹುದು. ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ: ಈಶ್ವರಪ್ಪಇತ್ತೀಚೆಗೆ ಹಲ್ಲೆಗೊಳಗಾಗಿ ಮೃತಪಟ್ಟ ಸೂಳೆಬೈಲಿನ ಬಾಲಕ ಸಂಕೇತ್‌ನ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಆ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಮಾಡಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸರ್ಕಾರವನ್ನು ಆಗ್ರಹಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಳೆಬೈಲಿನಲ್ಲಿರುವ ಮೃತ ಬಾಲಕನ ಸಮಾಧಿಯ ಧ್ವಂಸದ ಕೃತ್ಯ ಮುಸ್ಲಿಂ ಗೂಂಡಾಗಳಿಂದಾದ ಕೃತ್ಯವೇ ಆಗಿದೆ ಎಂದು ಆರೋಪಿಸಿದರು. ಹಿಂದೂಗಳ ಸಮಾಧಿಯನ್ನೂ ಬಿಡಲಾರರು ಎಂದರೆ ಅವರ ಅಟ್ಟಹಾಸ ಎಲ್ಲಿಯವರೆಗೆ ಇರಬೇಕು? ಇದನ್ನೆಲ್ಲ ನೋಡಿಕೊಂಡು ಸಹಿಸಿಕೊಳ್ಳಲು ಸಾಧ್ಯವೆ ಎಂದು ಖಾರವಾಗಿ ಪ್ರಶ್ನಿಸಿದ ಅವರು ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ತಾಕೀತು ಮಾಡಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಯಲ್ಲಿ ನಿರತವಾಗಿದೆ. ತಾವು ಏನು ಮಾಡಿದರೂ ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿ ನಿಲ್ಲುತ್ತದೆ ಎಂಬ ಭಾವನೆ ಮುಸ್ಲಿಂ ಗೂಂಡಾಗಳಲ್ಲಿ ಬೇರೂರಿದೆ ಎಂದು ಕಿಡಿಕಾರಿದರು.
ಸಂಕೇತ್ ಸಮಾಧಿ ಧ್ವಂಸದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಇಷ್ಟರಲ್ಲಿಯೇ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗುವುದು.ಬಿ.ನಿಖಿಲ್ ಎಸ್ಪಿ, ಶಿವಮೊಗ್ಗ.