ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗಾಳಿ, ಬೆಳಕಿಲ್ಲದ ಗ್ರಂಥಾಲಯ ಇದೀಗ ಬೆಳಕು ಹಾಗೂ ವಿಶಾಲವಾದ ಕಟ್ಟಡಕ್ಕೆ ಬಂದಿದ್ದು, ಪಟ್ಟಣದಲ್ಲಿ ಒಳ್ಳೆ ಗ್ರಂಥಾಲಯಕ್ಕೆ ಪ್ರಯತ್ನಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಹಳೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೊಠಡಿಗೆ ಸ್ಥಳಾಂತರಗೊಂಡಿದ್ದ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಒಳ್ಳೆ ಗ್ರಂಥಾಲಯ ಬೇಕಿದೆ ಎಂದರು. ಗ್ರಂಥಾಲಯದ ಆವರಣದಲ್ಲಿ ಕಸ ಹಾಕದಂತೆ ಪುರಸಭೆ ಮಾಡಬೇಕು. ಅಲ್ಲದೆ ವಿಶೇಷ ಅನುದಾನ ತಂದು ಸದ್ಯಕ್ಕೆ ಸುತ್ತುಗೋಡೆ, ಗೇಟ್ ಅಳವಡಿಸಲು ಮುಂದಾಗುವೆ ಎಂದು ಭರವಸೆ ನೀಡಿದರು.
ಕನ್ನಡಪ್ರಭ ನಿರಂತರ ವರದಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಶೈಲೇಶ್ ಪ್ರತಿ ನಿತ್ಯ ನನ್ನ ಮೇಲೆ ಒತ್ತಡ ಹಾಕಿ ಕಿಷ್ಕಿಂಧೆಯಂತಿದ್ದ ಗ್ರಂಥಾಲಯ ಬದಲಿಸಲು ಪ್ರಯತ್ನಿಸಿದರು ಎಂದರು. ಶಿಕ್ಷಣಕ್ಕೆ ಮಹತ್ವ ಇರುವ ಕಾರಣ ಗ್ರಂಥಾಲಯ ಪಟ್ಟಣದಲ್ಲಿ ಅತ್ಯವಶ್ಯಕವಾಗಿದೆ. ಗ್ರಂಥಾಲಯಕ್ಕೆ ಜಾಗ ಹಾಗೂ ಕಟ್ಟಡ ನಿರ್ಮಿಸಲು ಕ್ರಮ ಹಾಗೂ ಗ್ರಂಥಾಲಯಕ್ಕೆ ಮತ್ತೊಂದು ಕೊಠಡಿ ನೀಡುವಂತೆ ಬಿಇಒಗೆ ಹೇಳುವುದಾಗಿ ಭರವಸೆ ನೀಡಿದರು.ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್), ಮುಖ್ಯ ಗ್ರಂಥಾಲಯ ಅಧಿಕಾರಿ ವಡ್ಡಗೆರೆ ಶಿವಸ್ವಾಮಿ ಮಾತನಾಡಿ, ಗ್ರಂಥಾಲಯಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಮನವಿ ಮಾಡಿಕೊಂಡರು.
ಪುತ್ತನಪುರ ಸಾಹುಕಾರ್ ಚಿಕ್ಕಮಲ್ಲಪ್ಪ ಮನೆತನಕದ ಶಂಭಪ್ಪ ಹಾಗೂ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್) ರನ್ನು ಗ್ರಂಥಾಲಯ ಇಲಾಖೆಯ ಪರವಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಫಲ ತಾಂಬೂಲ ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್,ಪುರಸಭೆ ಸದಸ್ಯರಾದ ಎನ್.ಕುಮಾರ್,ಗೌಡ್ರ ಮಧು,ಪುತ್ತನಪುರ ಸಾಹುಕಾರ್ ಚಿಕ್ಕಮಲ್ಲಪ್ಪ ಚಂದ್ರಶೇಖರ್,ಕಸಾಪ ತಾಲೂಕು ಮಾಜಿ ಅಧ್ಯಕ್ಷ ಚಿದಾನಂದ,ಮುಖಂಡರಾದ ಲಕ್ಕೂರು ರಾಜಣ್ಣ,ವೀರನಪುರ ಗುರು,ಶಂಕರ್ ಮಾದಿಗ್,ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ,ಗ್ರಂಥಾಲಯದ ಜಯಶಂಕರ್ ಸೇರಿದಂತೆ ಹಲವರಿದ್ದರು.
ಕನ್ನಡಪ್ರಭ ನಿರಂತರ ವರದಿಗೆ ಗ್ರಂಥಾಲಯ ಬಂತು!ಗುಂಡ್ಲುಪೇಟೆ: ಹಳೇ ಆಸ್ಪತ್ರೆಯ ರಸ್ತೆಯಲ್ಲಿ ಖಾಸಗಿ ಮನೆಯಲ್ಲಿದ್ದ ಕಿಷ್ಕಿಂಧೆ ಗ್ರಂಥಾಲಯ ಸ್ಥಳಾಂತರವಾಗಬೇಕು ಎಂದು ಕನ್ನಡಪ್ರಭ ಹತ್ತಾರು ವರದಿಗಳನ್ನು ಪ್ರಕಟಿಸಿ ಶಾಸಕರ ಗಮನ ಸೆಳೆದಿತ್ತು.
ಕಳೆದ ೨೦೨೩ ರ ಫೆ.೨೩ ರ ಕನ್ನಡಪ್ರಭ ಪತ್ರಿಕೆಯಲ್ಲಿ ಬೆಳಕಿಲ್ಲದ ಕಿಷ್ಕಿಂಧೆ ಈ ಗ್ರಂಥಾಲಯ ಕಟ್ಟಡ ಎಂದು ಮೊದಲಿಗೆ ವರದಿ ಪ್ರಕಟಿಸಿತ್ತು. ಇದಾದ ಬಳಿಕ ಹಳೇ ಬಿಇಒ ಕಚೇರಿ ಕೊಠಡಿಗಾಗಿ ಎರಡು ವರದಿ ಪ್ರಕಟಗೊಂಡ ಬಳಿಕ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬಿಇಒಗೆ ಸೂಚಿಸಿ ಒಂದು ಕೊಠಡಿ ಕೊಡುವಂತೆ ಹೇಳಿದರು.ಇದಾದ ಬಳಿಕ ಶಾಸಕರ ಸೂಚನೆಯಂತೆ ಕಳೆದ ಏ.೨೯ ರಂದು ಹಳೇಯ ಬಿಇಒ ಕಚೇರಿಗೆ ಕಿಷ್ಕಿಂಧೆಯಂತಿದ್ದ ಮನೆಯಲ್ಲಿದ್ದ ಗ್ರಂಥಾಲಯ ಸ್ಥಳಾಂತರಗೊಂಡಿತ್ತು. (ಲೋಕಸಭೆ ಚುನಾವಣೆ ನೀತಿ ಸಂಹಿತಿ ಇತ್ತು) ಇದಾದ ಬಳಿಕ ಗ್ರಂಥಾಲಯ ವಿದ್ಯುಕ್ತವಾಗಿ ಮಂಗಳವಾರ ಮಧ್ಯಾಹ್ನ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಟೇಪು ಕತ್ತರಿಸುವ ಮೂಲಕ ಗ್ರಂಥಾಲಯಕ್ಕೆ ಅಧಿಕೃತ ಮುದ್ರೆ ಒತ್ತಿದರು.ಮೆಚ್ಚುಗೆ: ಗ್ರಂಥಾಲಯ ಅಧಿಕೃತವಾಗಿ ಚಾಲನೆ ನೀಡಿದ ಸಮಯದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್, ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ವಡ್ಡಗೆರೆ ಶಿವಸ್ವಾಮಿ ಕನ್ನಡಪ್ರಭ ವರದಿ ಬಳಿಕ ಗ್ರಂಥಾಲಯ ಸ್ಥಳಾಂತರವಾಯಿತೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.