ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಜವಾಬ್ದಾರಿಯನ್ನು ಎಚ್ಚರಿಸುವ ಮೂಲಕ ಸಭೆಗೆ ಬಾರದೆ ತಮ್ಮ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿದ್ದವರಿಗೆ ನಮ್ಮ ಪ್ರಶ್ನೆಗೆ, ತಾಲೂಕಿನ ಸಮಸ್ಯೆಗಳಿಗೆ ನಿಮ್ಮಿಂದ ಉತ್ತರಿಸಲು ಸಾಧ್ಯವಿಲ್ಲ, ಹಾಗಾಗಿ ನಿಮ್ಮ ಅಧಿಕಾರಿಗಳನ್ನು ಸಭೆಗೆ ಕರೆಸಿ ಎಂದು ಪ್ರಶ್ನಿಸುವ ಮೂಲಕ ಬಾರದ ಕೆಲ ಅಧಿಕಾರಿಗಳನ್ನು ಸಭೆಗೆ ಕರೆಸಿಕೊಂಡ ಘಟನೆ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜರುಗಿತು.ತಾಪಂ ಕಚೇರಿಯಲ್ಲಿ ಕೆರೆಯಲಾಗಿದ್ದ ಕೆಡಿಪಿ ಸಭೆಯಲ್ಲಿ ಆರಂಭದಲ್ಲಿ ಮೊದಲಿಗೆ ಇಒ ಶ್ರೀನಿವಾಸ್ ಅವರ ಕಾರ್ಯವೈಖರಿ ಹಾಗೂ ಸಕಾಲದಲ್ಲಿ ಅಧಿಕಾರಿಗಳ ಸಮಗ್ರ ಮಾಹಿತಿಗಳನ್ನು ಒದಗಿಸಲು ವಿಫಲವಾದ ಹಿನ್ನೆಲೆ ಶಾಸಕರು ತರಾಟೆ ತೆಗೆದುಕೊಂಡರು. ಜಿಲ್ಲಾ ಹಂತದ ಅಧಿಕಾರಿಗಳಿಗೆ ಕೊಂಬಿದೆಯಾ, ಇಂದಿನ ಸಭೆಗೆ ಗೈರಾದ 25 ವಿವಿಧ ಇಲಾಖಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಕ್ರಮಕೈಗೊಳ್ಳಲು ತಾಪಂ ಇಒಗೆ ಸೂಚಿಸಿದ್ದಲ್ಲದೆ, ಕಳೆದ ಸಭೆಯಲ್ಲಿನ ಅನುಪಾಲನ ವರದಿಯನ್ನೇಕೆ ಸಲ್ಲಿಸಿಲ್ಲ ಎಂದು ಖಾರವಾಗಿ ಪ್ರಶ್ನಿಸಿ ಮುಂದೆ ಹೀಗಾಗಕೂಡದು ಎಂದು ಎಚ್ಚರಿಸಿದರು.
ಇಂದಿನ ಸಭೆಗೆ ಅಧಿಕಾರಿಗಳು ಸಲ್ಲಿಸಿರುವ ವರದಿಗೂ, ಜಿಲ್ಲಾಮಟ್ಟದಲ್ಲಿ ಸಲ್ಲಿಸಿರುವ ವರದಿಗೂ ಸಾಕಷ್ಟು ವ್ಯತ್ಯಾಸ, ಲೋಪವಿದೆ. ಇಒ ಇದಕ್ಕೆ ಸಹಿ ಹಾಕಿಲ್ಲ, ಸಂಬಂಧಪಟ್ಟ ಕೆಲ ಇಲಾಖೆಯ ಅಧಿಕಾರಿಗಳು ಸಹಿ ಹಾಕಿಲ್ಲ, ಇಷ್ಟು ನಿರ್ಲಕ್ಷ್ಯ ತಾಳಿದರೆ ಪರಿಣಾಮ ಸರಿಯಿರಲ್ಲ ಎಂದರು.ಉಪನೋಂದಣಾಧಿಕಾರಿ, ಎಸಿಎಫ್‌ಗೆ ಕರೆ: ಇದೆ ವೇಳೆ ಸಭೆಗೆ ಬಾರದೆ ತಮ್ಮ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿದ್ದ ಉಪನೋಂದಣಾಧಿಕಾರಿ, ಅರಣ್ಯ ಇಲಾಖೆಯ ಎಸಿಎಫ್, ನಿರ್ಮಿತಿ ಕೇಂದ್ರದ ಅಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳನ್ನು ತಕ್ಷಣ ಕರೆ ಮಾಡಿ ಕರೆಸಿ ಎಂದರು. ಸಭೆಯಲ್ಲಿ ಶಾಸಕರು ಎಡಿಎಲ್ಆರ್ ಅಧಿಕಾರಿಯೊಬ್ಬರಿಗೆ ಉದ್ಧಟವಾಗಿ ತಮ್ಮ ಆಪ್ತ ಸಹಾಯಕ ಜೊತೆ ಮಾತನಾಡಿದ್ದಕ್ಕಾಗಿ ತರಾಟೆ ತೆಗೆದುಕೊಂಡು ಸೌಜನ್ಯ ಬೆಳೆಸಿಕೊಳ್ಳಿ ಎಂದು ತಾಕೀತು ಮಾಡಿದರು. ತಾಲೂಕು ಹಾಗೂ ಜಿಲ್ಲಾಮಟ್ಟದ ಇಲಾಖಾಧಿಕಾರಿಗಳು ಈ ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾದರೆ ಅಭಿವೃದ್ಧಿ ವೇಗ ಹೆಚ್ಚಲು ಹೇಗೆ ಸಾಧ್ಯ ಎಂದರು.
ಅಧಿಕಾರಿಗಳು ಪ್ರಗತಿಯತ್ತ ದಾಪುಗಾಲಿಡಬೇಕು. ತಾವು ಎಚ್ಚೆತ್ತುಕೊಂಡು ಕೆಲ ಯೋಜನೆಗಳ ಬಗ್ಗೆ ವಿವರಿಸಬೇಕು ಎಂದು ಸೂಚಿಸಿದರು ಸಿಸಿ ಕ್ಯಾಮರಾ ಅಳವಡಿಸಿದ ಮೇಲೆ ಜಿಲ್ಲೆಯಲ್ಲಿ 10ನೇ ತರಗತಿ ಫಲಿತಾಂಶ ಕುಸಿತಗೊಂಡಿದೆ. ಮುಂದೆ ಹೀಗಾಗಬಾರದು ಎಂದು ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದರು. ಮುಳ್ಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಗತ್ಯ:ಮುಳ್ಳೂರು ಗ್ರಾಮ ಸುಮಾರು ಹತ್ತು ಸಾವಿರ ಜನಸಂಖ್ಯೆಯುಳ್ಳ ದೊಡ್ಡ ಗ್ರಾಮ, ಹಾಗಾಗಿ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಕ್ಕೆ ಚಿಂತನೆ ನಡೆಸಿ, ಈ ಸಂಬಂಧ ಸರ್ಕಾರದ ಜೊತೆಯೂ ನಾನು ಚರ್ಚಿಸುವೆ ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಡೆಂಘೀ ಪ್ರಕರಣ ಹೆಚ್ಚು ವ್ಯಾಪಿಸಿದಂತೆ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು. ರಾಮಾಪುರದಲ್ಲಿ ನಿರುಪಯುಕ್ತವಾಗಿರುವ ಎರಡು ಡಯಾಲಿಸಿಸ್ ಯಂತ್ರಗಳನ್ನು ಕೊಳ್ಳೇಗಾಲ ಉಪವಿಭಾಗ ಇಲ್ಲವೇ ಯಳಂದೂರಿಗೆ ತರಿಸಿಕೊಂಡು ರೋಗಿಗಳಿಗೆ ಅನುಕೂಲಕ್ಕೆ ಕ್ರಮವಹಿಸಲು ಮುಂದಾಗಬೇಕು. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಚರ್ಚಿಸುವೆ, ಅಲ್ಲಿ ಅಗತ್ಯ ಬಿದ್ದ ವೇಳೆ ಮತ್ತೆ ಯಂತ್ರ ಹಿಂತಿರುಗಿಸಲು ಕ್ರಮ ವಹಿಸಿ, ಉಪವಿಭಾಗೀಯ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಉಪವಿಭಾಗೀಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಅವರಿಗೆ ಶಾಸಕರು ಸೂಚಿಸಿದರು.
ಡಾ.ರಾಜಶೇಖರ್ ಮಾತನಾಡಿ, ಆದಷ್ಟು ಡೆಂಘೀ ರೋಗಿಗಳಿಗೆ ನಮ್ಮಲ್ಲಿಯೇ ಸೂಕ್ತ ಚಿಕಿತ್ಸೆಗೆ ಸ್ಪಂದಿಸಲಾಗುತ್ತಿದ್ದು ಹಿಮೋಗ್ಲೋಬಿಯಂನ ಪ್ರಮಾಣ ತೀರಾ ಕುಂಠಿತದ ಹಂತ ಕಂಡು ಬಂದಾಗ ಪರಿಶೀಲಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಎಲ್ಲಾ ವಿಭಾಗಳಿಗೂ ಸೂಕ್ತ ವೈದ್ಯರ ತಂಡವಿದೆ. ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಇಲ್ಲ, ಆದರೆ ಯುಜಿಡಿ ಸಮಸ್ಯೆ ಇದ್ದು ಈ ಬಗ್ಗೆ ನಗರಸಭಾಧಿಕಾರಿಗಳಿಗೂ ಪತ್ರ ಬರೆದಿದ್ದೇನೆ. ಈ ಸಮಸ್ಯೆ ಬಗೆಹರಿಯಬೇಕಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರು ಪ್ರತಿ 15 ದಿನಕ್ಕೊಮ್ಮೆ ನಗರಸಭಾಧಿಕಾರಿಗಳು ಯುಜಿಡಿ ಸ್ವಚ್ಛಕ್ಕೆ ಮುಂದಾಗಿ ಚರಂಡಿಯನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುವ ಮೂಲಕ ಡೆಂಘೀ ನಿಯಂತ್ರಣಕ್ಕೆ ಮುಂದಾಗಿ, ನಿಗದಿತ ಸಮಯಕ್ಕೆ ವೈದ್ಯರು, ಸಿಬ್ಬಂದಿ ಬರುವಂತೆ ನೋಡಿಕೊಳ್ಳಿ ಎಂದರು.ಅಗರ ಗ್ರಾಮದ ಚಂಗುಮಣಿ ಎಂಬುವರು ನನಗೆ ಕರೆ ಮಾಡಿ ತನ್ನ ಮಗಳಿಗೆ ಬಂದ ಜ್ವರದ ಬಗ್ಗೆ ವಿವರಿಸಿ ₹14 ಲಕ್ಷ ಖರ್ಚು ಮಾಡಿದ್ದೇನೆ. ಜಮೀನು ಮಾರಿಕೊಂಡೆ, ಆಕೆ ಬದುಕಿದರೆ ಸಾಕು ಎಂದು ನೋವು ತೋಡಿಕೊಂಡರು. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ತುರ್ತು ವಾಹನ ತೆರಳದಂತೆ, ಇಲ್ಲಿಂದ ಸರ್ಕಾರಿ ಜಿಲ್ಪಾಸ್ಪತ್ರೆಗೆ ತುರ್ತು ವಾಹನ ತೆರಳಲು ಅವಕಾಶ ಮಾಡಿಕೊಡಿ, ಖಾಸಗಿ ಆಸ್ಪತ್ರೆಗಳ ಹೊರೆಯನ್ನು ಬಡವರು ತಾಳಿಕೊಳ್ಳಲಾಗಲ್ಲ, ಈ ಅಂಶವನ್ನು ಆರೋಗ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು. ಕುಂತೂರು ಗ್ರಾಮದಲ್ಲಿ ಒಂದು ಜಾಗಕ್ಕೆ ನಾಲ್ಕು ಹಕ್ಕು ಪತ್ರಗಳನ್ನು ವಕೀಲರ ಮೂಲಕ ತರಲಾಗುತ್ತಿದೆ. ಈ ಹಿಂದಿದ್ದ ಅಧಿಕಾರಿಗಳು ಒಂದೇ ಜಾಗಕ್ಕೆ 4-5 ಹಕ್ಕು ಪತ್ರ ನೀಡಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಈ ಗ್ರಾಮದಲ್ಲಿ ಇ-ಸ್ವತ್ತು ವಿತರಿಸುವುದೇ ಸವಾಲಾಗಿದೆ.
- ಶ್ರೀನಿವಾಸ್, ಇಒಅತಿಥಿ ಶಿಕ್ಷಕರ ಕೊರತೆ ಇರುವ 12 ಕಡೆ ಕೂಡಲೆ ನೇಮಿಸಿ ಕ್ರಮ ವಹಿಸಿ, ಡೆಂಘೀ ಸಂಬಂಧ ಆರೋಗ್ಯ ಇಲಾಖೆ, ಪಂಚಾಯ್ತಿ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ತೀರಾ ಕಳಪೆ ಫಲಿತಾಂಶಕ್ಕೆ ಕಾರಣವನ್ನು ಇಲಾಖೆ ಗ್ರಹಿಸಿ ಕ್ರಮವಹಿಸಬೇಕು. ಅಧಿಕಾರಿಗಳು ಸೌಜನ್ಯದಿಂದ ವರ್ತಿಸುವುದನ್ನು ರೂಡಿಸಿಕೊಳ್ಳಬೇಕು.- ಎ.ಆರ್.ಕೃಷ್ಣಮೂರ್ತಿ, ಶಾಸಕರು