ಶಾಸಕರೇ ನನ್ನನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿಸಿದ್ದಾರೆ

| Published : Sep 12 2024, 02:02 AM IST

ಶಾಸಕರೇ ನನ್ನನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿಸಿದ್ದಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ, ತನ್ನನ್ನು ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅಂದಿನಿಂದ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ, ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರ ಕ್ಷುಲಕ ರಾಜಕಾರಣದಿಂದಾಗಿ ಬೇರೆಯವರ ಹೆಸರು ಹರಿದಾಡುತ್ತಿದೆ. ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾನೇ ಎಂದು ಎಚ್.ಬಿ. ಶಿವಯೋಗಿ ಹೊನ್ನಾಳಿಯಲ್ಲಿ ಸ್ಪಷ್ಟಪಡಿಸಿದರು.

- ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಹೆಸರು ವೈರಲ್‌ ಬೇಸರದ ಸಂಗತಿ: ಶಿವಯೋಗಿ ಹೇಳಿಕೆ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಈ ಹಿಂದೆ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ, ತನ್ನನ್ನು ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅಂದಿನಿಂದ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ, ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರ ಕ್ಷುಲಕ ರಾಜಕಾರಣದಿಂದಾಗಿ ಬೇರೆಯವರ ಹೆಸರು ಹರಿದಾಡುತ್ತಿದೆ. ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾನೇ ಎಂದು ಎಚ್.ಬಿ. ಶಿವಯೋಗಿ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ತಾನು ಈ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿ, ಮುಖ್ಯಮಂತ್ರಿ, ಎಐಸಿಸಿ ಹಾಗೂ ಹೈಕಮಾಂಡ್ ವರಿಷ್ಠರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ತಂದೆ ದಿವಂಗತ ಎಚ್.ಬಿ, ಕಾಡಸಿದ್ದಪ್ಪ 11 ವರ್ಷ ಹಾಗೂ ಸಹೋದರ ದಿ. ಎಚ್.ಬಿ.ಕೃಷ್ಣಮೂರ್ತಿ 5 ವರ್ಷಗಳ ಕಾಲ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಅವರು ಜನಮಾನಸದಲ್ಲಿದ್ದಾರೆ. ಇಂತಹ ಕುಟುಂಬದಿಂದ ಬಂದಿರುವ ತಾನು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ. ಪಕ್ಷವೇ ತನ್ನನ್ನು ಗುರುತಿಸಿ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದರು.

ಅಧ್ಯಕ್ಷನಾದ ಮೇಲೆ ನಡೆದ ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ತನ್ನ ಪಾತ್ರವೂ ಇದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವ್ಯಕ್ತಿಯು ಈ ಹಿಂದೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ವ್ಯಕ್ತಿ. ತಾನೇ ರಾಜೀನಾಮೆ ನೀಡಿ, ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದರು. ಆಮೇಲೆ ಎಲ್ಲರೂ ಸೇರಿ ಸಭೆ ನಡೆಸಿ, ತನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದು ಎಚ್‌.ಬಿ. ಶಿವಯೋಗಿ ತಿಳಿಸಿದರು.

ತಾನು ಪಕ್ಷದ ಅಧ್ಯಕ್ಷ ಆಗಬೇಕೆಂದು ಎಂದೂ ಬಯಸಿದವನಲ್ಲ. ಪಕ್ಷದ ಮುಖಂಡರೇ ತನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಪಕ್ಷದ ರೀತಿ ನೀತಿ, ಸಿದ್ಧಾಂತಗಳ ಅಡಿಯಲ್ಲಿ ನನ್ನ ಸೇವೆ ತೃಪ್ತಿ ತರದೇ ಇದ್ದರೆ ನನಗೆ ಕಾರಣ ಸಹಿತ ನೋಟಿಸ್ ನೀಡಿ ಅಥವಾ ಗಮನಕ್ಕೆ ತಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಬೇಕಾಗಿತ್ತು. ಇದಕ್ಕೆ ಸಂತೋಷದಿಂದ ಸಮ್ಮತಿಸುತ್ತಿದ್ದೆ. ಆದರೆ ಏಕಾಎಕಿಯಾಗಿ ಇದೀಗ ಬೇರೆಯವರು ಅಧ್ಯಕ್ಷರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಹರಿಯಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡ ಬಿ.ಸಿದ್ದಪ್ಪ, ಮಲ್ಲೇಶ್ ಮಳ್ಳಕ್ಕಿ, ಕರವೇ ಅಧ್ಯಕ್ಷ ಶ್ರೀನಿವಾಸ, ಇನ್ನಿತರ ಮುಖಂಡರು ಇದ್ದರು.

- - - -10ಎಚ್.ಎಲ್.ಐ1:

ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸ್ಥಾನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಖಂಡ ಎಚ್.ಬಿ.ಶಿವಯೋಗಿ ಮಾತನಾಡಿದರು. ಹಿರಿಯ ಮುಖಂಡ ಬಿ.ಸಿದ್ದಪ್ಪ ಇತರರು ಇದ್ದರು.