ಕೊಪ್ಪಪದವೀಧರ ವಿದ್ಯಾರ್ಥಿಗಳ ಹೆಮ್ಮೆಯ ಪೋಷಕರು ಮತ್ತು ಕುಟುಂಬ ವರ್ಗದವರ ತ್ಯಾಗ, ಪ್ರಾರ್ಥನೆ ಮತ್ತು ಅಚಲ ನಂಬಿಕೆಗೆ ಫಲ ಸಿಕ್ಕಿರುವ ಕ್ಷಣ ಇದು ಎಂದು ಕಾಲೇಜು ಪ್ರಾಂಶುಪಾಲ ಡಾ. ಹರ್ಷ ಎನ್.ಎಮ್. ಅಭಿಪ್ರಾಯಪಟ್ಟರು.

- ಎ.ಎಲ್.ಎನ್. ರಾವ್ ಮಹಾವಿದ್ಯಾಲಯದಲ್ಲಿ ‘ಸಮಾವರ್ತನ-2026’ ಪದವಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ​ಕೊಪ್ಪ

ಪದವೀಧರ ವಿದ್ಯಾರ್ಥಿಗಳ ಹೆಮ್ಮೆಯ ಪೋಷಕರು ಮತ್ತು ಕುಟುಂಬ ವರ್ಗದವರ ತ್ಯಾಗ, ಪ್ರಾರ್ಥನೆ ಮತ್ತು ಅಚಲ ನಂಬಿಕೆಗೆ ಫಲ ಸಿಕ್ಕಿರುವ ಕ್ಷಣ ಇದು ಎಂದು ಕಾಲೇಜು ಪ್ರಾಂಶುಪಾಲ ಡಾ. ಹರ್ಷ ಎನ್.ಎಮ್. ಅಭಿಪ್ರಾಯಪಟ್ಟರು.

ಪಟ್ಟಣದ ಎ.ಎಲ್.ಎನ್. ರಾವ್ ಮೆಮೋರಿಯಲ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ‘ಅಮೇಯ’ (2020-26) ಬ್ಯಾಚ್‌ನ ವಿದ್ಯಾರ್ಥಿಗಳ ‘ಸಮಾವರ್ತನ-2026’ ಪದವಿ ಪ್ರಧಾನ ಸಮಾರಂಭದಲ್ಲಿ ಮಾತಾಡಿದರು.

ನಿಮ್ಮ ಮಕ್ಕಳ ಈ ಧೀರ್ಘ ಶೈಕ್ಷಣಿಕ ಪ್ರಯಾಣದಲ್ಲಿ ಬೆನ್ನೆಲುಬಾಗಿ ನಿಂತ ನೀವು ಇಂದು ಅವರು ಸಮಾಜ ಮೆಚ್ಚುವ ವೈದ್ಯ ರಾಗಿ ಹೊರಹೊಮ್ಮುವುದನ್ನು ನೋಡುತ್ತಿರುವ ನಿಮ್ಮ ಕಣ್ಣಿನ ಹರ್ಷ ನಮಗೆ ಅರಿವಾಗುತ್ತದೆ. ನಮ್ಮ ಸಂಸ್ಥೆ ಮೇಲೆ ವಿಶ್ವಾಸ ವಿಟ್ಟು, ನಿಮ್ಮ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಮಗೆ ನೀಡಿದ್ದಕ್ಕಾಗಿ ಧನ್ಯ ಎಂದು ಹೇಳಿದರು.

ನವದೆಹಲಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪದ್ಧತಿಗಳ ಆಯೋಗದ (NCISM) ಬೋರ್ಡ್ ಆಫ್ ಆಯುರ್ವೇದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡ ಮಾತನಾಡಿ ಆಯುರ್ವೇದ ವೈದ್ಯಕೀಯ ಪದ್ಧತಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆ ಯುತ್ತಿದ್ದು, ಯುವ ವೈದ್ಯರು ವೈದ್ಯಕೀಯ ವೃತ್ತಿಧರ್ಮ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅರವಿಂದ ಘೋಷ್ ರಂತೆ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಶಿಕ್ಷಣದ ಮೂಲಕ ‘ದ್ವಿಜ’ರಾಗಿ (ಮರುಜನ್ಮ) ಹೊರ ಹೊಮ್ಮುತ್ತಿರುವ ಆಯುರ್ವೇದ ವೈದ್ಯರು ಕೇವಲ ಔಷಧ ಬರೆಯುವುದಷ್ಟೇ ಅಲ್ಲದೆ ರೋಗಿಗಳನ್ನು ಪ್ರೀತಿ-ಕಾಳಜಿಯಿಂದ ಪರೀಕ್ಷಿಸಿ ಸೇವೆ ನೀಡಬೇಕು ಎಂದು ಕರೆನೀಡಿದರು.

ಪದವಿ ಮುಗಿಯಿತು ಎಂದ ತಕ್ಷಣ ಕಲಿಕೆ ನಿಲ್ಲಬಾರದು. ಜೀವನದ ಕೊನೆವರೆಗೂ ಹೊಸ ವಿಷಯ ಕಲಿಯುವ ಹಸಿವು ಹಾಗೂ ಜ್ಞಾನಾರ್ಜನೆ ಸಂಕಲ್ಪ ನಮ್ಮಲ್ಲಿ ಜೀವಂತವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಆರೂರು ನಮಿತಾ ರಾವ್ ಮಾತನಾಡಿ ಕೋವಿಡ್ ಸವಾಲುಗಳು ಹಾಗೂ ಸಾಂಸ್ಕೃತಿಕ-ಕ್ರೀಡಾ ಪಯಣದ ನಡುವೆ ಪ್ರಬುದ್ಧರಾಗಿ ಹೊರಹೊಮ್ಮಿದ ‘ಅಮೇಯ’ ತಂಡದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸರಳ ಜೀವನ ಮತ್ತು ಜ್ಞಾನಾ ರ್ಜನೆಯೇ ತಮ್ಮ ಅಜ್ಜ ಸ್ಥಾಪಿಸಿದ ಈ ಸಂಸ್ಥೆ ಮೂಲ ಧ್ಯೇಯ ಎಂದರು.

ರೋಗಿಗಳು ನೀವು ಓದಿದ ಪುಸ್ತಕಗಳನ್ನಲ್ಲ, ಬದಲಿಗೆ ನೀವು ನೀಡಿದ ಪ್ರೀತಿ, ಮಂದಹಾಸ ಹಾಗೂ ಸಹಾನುಭೂತಿಯನ್ನು ಮಾತ್ರ ನೆನಪಿಡುತ್ತಾರೆ ಎಂದು ಹೇಳಿದರು.

ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ರಾಜೀವ್ ಗಾಂಧಿ ವಿವಿ ಸ್ನಾತಕ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದ ಡಾ.ಸಂಜನಾ ರಾವ್ ಅವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು. ‘ಅಮೇಯ’ ತಂಡದ ನೂತನ ವೈದ್ಯರಿಗೆ ಪದವಿ ಪ್ರದಾನ ಮಾಡಿ, ವೈದ್ಯಕೀಯ ವೃತ್ತಿ ಪಾವಿತ್ರ್ಯತೆ ಎತ್ತಿಹಿಡಿಯುವ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಲೇಜಿನ *ವ್ಯಾಸತರಂಗ ಮಾಸಿಕ ಪತ್ರಿಕೆ* ಸ್ವಾತಂತ್ರ್ಯ ದಿನಾಚರಣೆ ವಿಶೇಷ ಸಂಚಿಕೆಯನ್ನು ಗಣ್ಯರು ಅನಾವರಣಗೊಳಿಸಿದರು.ಸ್ನಾತಕೋತ್ತರ ವಿಭಾಗದ ಉಪ- ಪ್ರಾಂಶುಪಾಲರಾದ ಡಾ: ಡಿ. ಕೆ. ಮಿಶ್ರಾ, ಸ್ನಾತಕ ಪದವಿ ವಿಭಾಗದ ಉಪ- ಪ್ರಾಂಶುಪಾಲರಾದ ಡಾ: ಪ್ರಶಾಂತ್ ಭಟ್, ಪ್ರಶಿಕ್ಷಣ ಸಮನ್ವಯಾಧಿಕಾರಿ ಡಾ: ನಾಗರಾಜ್ ಇತರರು ಹಾಜರಿದ್ದರು. ​​