ದೂರಾಗಲು ಬಯಸಿದ್ದ 15 ಜೋಡಿ ಒಂದಾದ ಕ್ಷಣ!

| Published : Jul 14 2024, 01:31 AM IST

ಸಾರಾಂಶ

ದಾವಣಗೆರೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ ನಲ್ಲಿ ವಿಚ್ಛೇದನ ವಿಚಾರ ಕೈಬಿಟ್ಟು, ಒಂದಾಗಿ ಬಾಳಲು ಮುಂದಾದ 15ಕ್ಕೂ ಹೆಚ್ಚು ಜೋಡಿಗಳು. ನ್ಯಾಯಾಧೀಶರು, ವಕೀಲರು, ಕಕ್ಷಿದಾರರ ಕುಟುಂಬ ವರ್ಗ, ಸಿಬ್ಬಂದಿ ಇದ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ನಾನೊಂದು ತೀರ, ನೀನೊಂದು ತೀರ.. ಮನಸು ಮನಸ್ಸು ದೂರ, ಪ್ರೀತಿ ಹೃದಯ ಭಾರ.. ಎನ್ನುವಂತಾಗಿದ್ದ 15ಕ್ಕೂ ಹೆಚ್ಚು ಪತಿ-ಪತ್ನಿಯರನ್ನು ಒಗ್ಗೂಡಿಸುವ ಮೂಲಕ ಮನಸ್ಸು ಮನಸ್ಸನ್ನು ಬೆಸೆಯುವ ಕೊಂಡಿಯಾಗಿ, ಬೇರ್ಪಡಲು ಮುಂದಾಗಿದ್ದ ಜೋಡಿಗಳನ್ನು ಒಂದಾಗಿಸುವ ಮೂಲಕ ರಾಷ್ಟ್ರೀಯ ಲೋಕ ಅದಾಲತ್‌ ಮಹತ್ವದ ಮಾನವೀಯ ಕಾರ್ಯ ಮಾಡಿದೆ.

ನಗರದ ಜನತಾ ಬಜಾರ್ ಪಕ್ಕದ ಕೌಟುಂಬಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶರು, ನುರಿತ ವಕೀಲರು ಲೋಕ ಅದಾಲತ್ ಪೀಠದಲ್ಲಿ ವಾದಿ-ಪ್ರತಿವಾದಿಗಳನ್ನು ಕೂಡಿಸಿಕೊಂಡು, ಉಭಯ ಕಡೆಯವರ ಮನವೊಲಿಸಿ, ವ್ಯಾಜ್ಯಕ್ಕೆ ಎರಡು ಕಡೆಯವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳುತ್ತದೆ. ಈ ಪ್ರಯತ್ನದ ಭಾಗವಾಗಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ 15ಕ್ಕೂ ಹೆಚ್ಚು ಜೋಡಿಗಳು ಮತ್ತೆ ಒಂದಾಗುವ ಮೂಲಕ ಜೀವನದ ಎರಡನೇ ಇನ್ನಿಂಗ್ಸ್‌ಗೆ ಮುನ್ನುಡಿ ಬರೆದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಜೇಶ್ವರಿ ಎನ್.ಹೆಗಡೆ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್‌ನ ರಾಜಿ, ಸಂಧಾನದಲ್ಲಿ 15ಕ್ಕೂ ಹೆಚ್ಚು ಪತಿ-ಪತ್ನಿಯರು ಒಂದಾಗಿದ್ದಾರೆ. ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಗಳು ಮತ್ತೆ ಜೊತೆಯಾಗಿ ಜೀವನ ನಡೆಸಲು ಮುಂದಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥದಿಂದ ಸಮಯ ಉಳಿತಾಯವಾಗಿ, ಶೀಘ್ರ ನ್ಯಾಯದಾನವೂ ಸಿಗುತ್ತಿದೆ ಎಂದರು.

ಕೌಟುಂಬಿಕ ನ್ಯಾಯಾಲಯದಲ್ಲಿ ಕಕ್ಷಿದಾರರ ಪರ ಪ್ರತಿನಿಧಿಸುವ ವಕೀಲರು, ಸಂಧಾನಕಾರರು ಹೀಗೆ ಎಲ್ಲರ ಶ್ರಮದಿಂದ ಈವರೆಗೆ ಸುಮಾರು 15 ಜೋಡಿ ಗಂಡ-ಹೆಂಡತಿಯರು ಮರು ಹೊಂದಾಣಿಕೆ ಮಾಡಿಕೊಂಡು ಸಹ ಜೀವನ ನಡೆಸಲು ಸಿದ್ದರಾಗಿದ್ದಾರೆ. ಈ ಸಂಖ್ಯೆಯು ಇನ್ನೂ ಕೂಡ ಹೆಚ್ಚಾಗುವ ಸಂಭವ ಇದೆ. ಇದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಬಹುದು ಎಂದರು.

ಕೆಲವು ಪಕ್ಷಗಾರರಿಗೆ ನಾವು ಏಕೆ ಪ್ರಕರಣ ಬಗೆಹರಿಸಬೇಕೆಂಬ ಜಿದ್ದು ಇರುತ್ತದೆ. ಆ ಜಿದ್ದಾಜಿದ್ದಿಯನ್ನು ಮರೆತು, ಇಲ್ಲಿಗೆ ಬಂದು ತಮ್ಮ ಪ್ರಕರಣಗಳನ್ನು ಎಲ್ಲರೂ ಕೂಡಿಕೊಂಡು, ಪರಿಹರಿಸಿಕೊಂಡಿದ್ದಾರೆ. ಮನುಷ್ಯನ ಬದುಕಿನಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿಂದ ವ್ಯಾಜ್ಯಗಳು ಸಂಭವಿಸುವುದು ಸಹಜ. ಸಣ್ಣ ಅವಘಡಗಳನ್ನು ದೊಡ್ಡದಾಗಿ ಮಾಡದೇ, ಸುಖ ಜೀವನ ನಡೆಸುವುದೇ ನಿಜ ಜೀವನವಾಗಿದೆ. ಐದಾರು ಸಾವಿರದಷ್ಟು ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಿದ್ದು, ಈಗಾಗಲೇ 4,800 ಪ್ರಕರಣಗಳನ್ನು ಈ‍ವರೆಗೆ ಬಗೆಹರಿಸಲಾಗಿದೆ ಎಂದು ಹೇಳಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ್ ಮಾತನಾಡಿ, ಮದುವೆಯೆಂದರೆ ನಮ್ಮ ಸಂಬಂಧಿಗಳು, ಗೆಳೆಯರು, ಆತ್ಮೀಯರು ಹೀಗೆ ಸಾವಿರಾರು ಜನರು ಬಂದು, ಗಂಡ-ಹೆಂಡತಿ ಚೆನ್ನಾಗಿರಿ. ನಿಮ್ಮ ಬಾಳು ಸಂತೋಷವಾಗಿರಲಿ. ನಾಳೆ ನಿಮ್ಮ ಮಧ್ಯೆ ಏನೇ ಸಣ್ಣಪುಟ್ಟ ಸಮಸ್ಯೆ ಬಂದರೂ ತಮ್ಮನ್ನು ಭೇಟಿಯಾಗಿ, ನಮ್ಮ ಅನುಭವ ಕೇಳಿ, ತಿಳಿದುಕೊಳ್ಳಿ. ಆದರ್ಶ ಬಾಳು ನಿಮ್ಮದಾಗಲಿ ಎಂಬುದಾಗಿ ಹರಸಿ, ಹಾರೈಸಿ ಕಳಿಸುವುದೇ ವಿವಾಹ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್.ಅರುಣಕುಮಾರ ಮಾತನಾಡಿ, ನಮ್ಮಲ್ಲಿ ಬರುವಂತಹ ಪ್ರಕರಣಗಳ ಪಕ್ಷಗಾರರ ಮನವೊಲಿಸಿ, ಸಂಧಾನಕ್ಕೆ ವಕೀಲರನ್ನು ಸಜ್ಜುಗೊಳಿಸುವರು. ಈ ಲೋಕ ಅದಾಲತ್‌ನಲ್ಲಿ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ಅಂತಹವರ ಪಾತ್ರವೂ ಮುಖ್ಯ. ಪ್ರಕರಣಗಳು ಮುಗಿದರೂ ಸಾಮಾಜಿಕ ಜವಾಬ್ದಾರಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ವಕೀಲರು ತಮ್ಮ ಪ್ರಕರಣಗಳನ್ನು ತ್ಯಾಗ ಮಾಡಿ, ಜೋಡಿಗಳನ್ನು ಒಂದುಗೂಡಿಸುವ ಮಾನವೀಯ ಹೊಣೆ ಹೊಂದಿರುತ್ತಾರೆ ಎಂದರು.

1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಚ್.ಅಣ್ಣಯ್ಯನವರ್, ಕೌಟುಂಬಿಕ ನ್ಯಾಯಾಧೀಶ ಶಿವಪ್ಪ ಗಂಗಪ್ಪ ಸಲಗೇರಿ, 2ನೇ ಸತ್ರ ಜಿಲ್ಲಾ ನ್ಯಾಯಾಧೀಶರಾದ ಎನ್.ಪ್ರವೀಣಕುಮಾರ ಎನ್, ಮಕ್ಕಳ ಶಾಲೆ ನ್ಯಾಯಾಧೀಶರಾದ ಶ್ರೀರಾಮ ಹೆಗಡೆ, ವಕೀಲ ಸಂಧಾನಕಾರರಾದ ಭಾಗ್ಯಲಕ್ಷ್ಮಿ, ಇತರರು, ಕಕ್ಷಿದಾರರು, ಒಂದಾದ ಜೋಡಿಗಳು, ಕುಟುಂಬ ವರ್ಗದವರು, ನ್ಯಾಯಾಲಯ ಸಿಬ್ಬಂದಿ ಇದ್ದರು.