ಬಿಸಿಯೂಟ ಮೊಟ್ಟೆಗೆ ನೀಡುವ ಹಣ ಸಾಕಾಗುತ್ತಿಲ್ಲ

| Published : Jan 17 2025, 12:46 AM IST

ಸಾರಾಂಶ

ಶಾಲೆಗಳಲ್ಲಿ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಮತ್ತು ಚಕ್ಕಿ ವಿತರಿಸಲಾಗುತ್ತಿದೆ. ಪಚ್ಚ ಬಾಳೆಹಣ್ಣು ಕೆಜಿ ಲೆಕ್ಕದಲ್ಲಿ ಖರೀದಿಸಲಾಗುತ್ತಿದೆ. ಆದರೆ ಸಕಾಲದಲ್ಲಿ ಅನುದಾನ ಬರುವುದಿಲ್ಲ. ನಮ್ಮ ಸಂಬಳದ ಹಣದಲ್ಲಿ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಖರೀದಿಸಲಾಗುತ್ತಿದೆ. ಒಂದು ವಾರ ಇದ್ದ ಮೊಟ್ಟೆಯ ಬೆಲೆ ಮತ್ತೊಂದು ವಾರ ಇರುವುದಿಲ್ಲ. ಈ ವೆಚ್ಚಗಳನ್ನು ಹೇಗೆ ಭರಿಸಬೇಕು?.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆ ಮಾಡುತ್ತಿದೆ. ಇದರೊಂದಿಗೆ ಅಜೀಮ್ ಪ್ರೇಮ್ ಜೀ ಫೌಂಡೇಷನ್ ಸಹ ಎರಡು ದಿನ ಮೊಟ್ಟೆ ವಿತರಣೆ ಮಾಡುತ್ತಿದೆ. ಕೋಳಿ ಮೊಟ್ಟೆ ದರ ಏರಿಕೆಯಾಗುತ್ತಿರುವುದರಿಂದ ಮೊಟ್ಟೆಗೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರ ಒತ್ತಾಯವಾಗಿದೆ.

ಸಕಾಲಕ್ಕೆ ಹಣ ಬರುತ್ತಿಲ್ಲ

ಶಾಲೆಗಳಲ್ಲಿ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಮತ್ತು ಚಕ್ಕಿ ವಿತರಿಸಲಾಗುತ್ತಿದೆ. ಪಚ್ಚ ಬಾಳೆಹಣ್ಣು ಕೆಜಿ ಲೆಕ್ಕದಲ್ಲಿ ಖರೀದಿಸಲಾಗುತ್ತಿದೆ. ಆದರೆ ಸಕಾಲದಲ್ಲಿ ಅನುದಾನ ಬರುವುದಿಲ್ಲ. ನಮ್ಮ ಸಂಬಳದ ಹಣದಲ್ಲಿ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಖರೀದಿಸಲಾಗುತ್ತಿದೆ. ಸರ್ಕಾರದಿಂದ ಬಿಡುಗಡೆಯಾದಾಗ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಅನುಮತಿ ಪಡೆದುಕೊಂಡು ಹಣ ಬಿಡಿಸಿಕೊಳ್ಳಬೇಕು. ಒಂದು ವಾರ ಇದ್ದ ಮೊಟ್ಟೆಯ ಬೆಲೆ ಮತ್ತೊಂದು ವಾರ ಇರುವುದಿಲ್ಲ. ಈ ವೆಚ್ಚಗಳನ್ನು ಹೇಗೆ ಭರಿಸಬೇಕು ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಸರ್ಕಾರ ಒಂದು ಮೊಟ್ಟೆಗೆ ಆರು ರು. ಬಿಡುಗಡೆ ಮಾಡಿದರೆ ಶಾಲೆಗೆ 5.70 ರು. ನೀಡಲಾಗುತ್ತದೆ. ಅದರಲ್ಲಿ 5.20 ರುಪಾಯಿ ಮೊಟ್ಟೆಗೆ, 20 ಪೈಸೆ ಸಾಗಣೆ ವೆಚ್ಚವಾಗಿ ಕೊಡುತ್ತಿದೆ. 30 ಪೈಸೆ ಇಂಧನಕ್ಕಾಗಿ ಕಡಿತ ಮಾಡಿಕೊಳ್ಳಲಾಗುತ್ತಿದೆ. ಒಂದು ಮೊಟ್ಟೆ ಬೆಲೆ 6.50 ರು. ಆಗಿದೆ. ಪ್ರತಿ ಮಂಗಳವಾರದಿಂದ ಶುಕ್ರವಾರದವರೆಗೆ ನಗದನ್ನೇ ನೀಡಿ ಖರೀದಿಸಬೇಕು. ಶಾಲೆಗೇ ಮೊಟ್ಟೆ ತಲುಪಿದರೆ ಒಂದು ಮೊಟ್ಟೆಯ ಬೆಲೆ 6.80 ರು. ಆಗುತ್ತದೆ. ಆದ್ದರಿಂದ ಶಿಕ್ಷಕರೇ ಅಂಗಡಿಗೆ ಹೋಗಿ ತರುರುತ್ತಿದ್ದಾರೆ.

ಸಂಬಳದ ಹಣ ಬಳಕೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಮತ್ತು ಚಿಕ್ಕಿಗೆ ನೀಡಿದಂತೆ ಮೊಟ್ಟೆಗೂ ಆರು ರು. ನೀಡುತ್ತಿದೆ. ಆದರೆ ಮೊಟ್ಟೆ ಮತ್ತು ಇತರೆ ವೆಚ್ಚಗಳಿಗೆ ಸರ್ಕಾರ ಮತ್ತು ಅಜೀಮ್ ಪ್ರೇಮ್ ಜೀ ಫೌಂಡೇಷನ್ ಹೆಚ್ಚಿನ ಅನುದಾನ ನೀಡಬೇಕು. ಶಿಕ್ಷಕರು ತಮ್ಮ ಸಂಬಳದಲ್ಲಿ ಹೆಚ್ಚುವರಿ ಹಣ ಖರ್ಚು ಮಾಡಿ ಮೊಟ್ಟೆ ತರವುದು ಅ‍ವರಿಗೂ ಹೊರೆಯಾಗುತ್ತಿದೆ. ಇದನ್ನೆಲ್ಲ ಪರಿಶೀಲಿಸಿ ಅನುದಾನ ಹೆಚ್ಚಿಸಬೇಕಿ ಎಂಬುದು ಶಿಕ್ಷಕ ಮನವಿಯಾಗಿದೆ.

ಶಾಲೆಗಳಿಗೆ ಮೊಟ್ಟೆ ಖರೀದಿಗೆ ನಗದು ಬದಲು ಶಾಲಾ ಶಿಕ್ಷಕರು ಬ್ಯಾಂಕ್‌ ಚೆಕ್‌ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಚೆಕ್‌ಗೆ ಹಣ ಬರುವುದು ತುಂಬಾ ವಿಳಂಬವಾಗುತ್ತದೆ. ಹೀಗಾಗಿ ನಮಗೆ ನಗದು ಕೊಟ್ಟು ಮೊಟ್ಟೆ ಖರೀದಿಸಿದರೆ ಅನುಕೂಲ ಆಗುತ್ತದೆ. ಜೊತೆಗೆ ಮೊಟ್ಟೆ ಬೆಲೆ ಕೂಡ ಏರಿಕೆಯಾಗುತ್ತಿದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.