ದಾಬಸ್‍ಪೇಟೆ: ಸಿದ್ದಗಂಗಾ ಮಠದ ಕೀರ್ತಿಯನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ಲಿಂ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಸಲ್ಲುತ್ತದೆ. ಅವರ ಆಶ್ರಯದಲ್ಲಿ ಬೆಳೆದಿರುವುದು ನಮ್ಮ ಪುಣ್ಯಎಂದು ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸೋಂಪುರ ಹೋಬಳಿಯ ಕಂಬಾಳು ಮಠದಲ್ಲಿ ಆಯೋಜಿಸಿದ್ದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗುರುವಂದನೆ ಹಾಗೂ ಲಿಂ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ 12ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಅವರು ನಮ್ಮಿಂದ ದೈಹಿಕವಾಗಿ ಮಾತ್ರ ದೂರವಾಗಿದ್ದಾರೆ. ಅವರ ತತ್ವಾದರ್ಶಗಳು ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿವೆ. ಅವರ ಆದರ್ಶ ಮತ್ತು ಸಂದೇಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.ಚಕ್ರಬಾವಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಾಡಿನ ಮಠಗಳು ಸರ್ವ ಜನಾಂಗದ ಧಾರ್ಮಿಕ ಕೇಂದ್ರಗಳಾಗಿವೆ. ಕಂಬಾಳು ಸಂಸ್ಥಾನ ಮಠ ಶಿವಗಂಗಾ ಕ್ಷೇತ್ರದ ಪುಣ್ಯಭೂಮಿಯ ತಪ್ಪಲಿನಲ್ಲಿರುವ ಒಂದು ಪುಣ್ಯ ಕ್ಷೇತ್ರವಾಗಿದ್ದು ಈ ಮಠಕ್ಕೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಈ ಮಠ ಮಹತ್ವದ ಕೊಡುಗೆ ನೀಡಿದೆ ಎಂದರು.
ಕಂಬಾಳು ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಹಿಂದಿನ ಗುರುಗಳಾಗಿದ್ದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಆಸೆಯಂತೆ ಇಂದು ಶ್ರೀ ಮಠದಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಾಥ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ, ದಾಸೋಹವನ್ನು ನೀಡಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು ಎಂದರು.ಕಾರ್ಯಕ್ರಮದಲ್ಲಿ ಗುರುವಣ್ಣದೇವರ ಮಠದ ಶ್ರೀ ನಂಜುಂಡ ಸ್ವಾಮೀಜಿ, ಗುಮ್ಮಸಂದ್ರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಕಂಚುಗಲ್ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ರೇವಣಸಿದ್ದಯ್ಯ, ಜಿಲ್ಲಾ ನಿರ್ದೇಶಕ ಕೆಂಚನಪುರ ಚನ್ನಬಸಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರುದ್ರಶರ್ಮಾ, ಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷ ಉಮಾಶಂಕರ್, ಸಾಹಿತಿ ಬಾಲಚಂದ್ರ, ಹರಳೂರು ಪ್ರುಭುದೇವರು, ನಿರಂಜನ, ಚನ್ನಪ್ಪ, ಮನುದೊಡ್ಡಮನೆ, ಶಿವು ಸೇರಿದಂತೆ ವಿವಿಧ ಮಠದ ಹರಗುರು ಚರಮೂರ್ತಿಗಳು, ಕಂಬಾಳು ಗ್ರಾಮಸ್ಥರು, ಶ್ರೀ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.
ಪೋಟೋ 1 : ಸೋಂಪುರ ಹೋಬಳಿಯ ಕಂಬಾಳು ಮಠದಲ್ಲಿ ಆಯೋಜಿಸಿದ್ದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗುರುವಂದನೆ ಹಾಗೂ ಲಿಂ.ಶ್ರೀ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ 12ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳು ಹಾಗೂ ಭಕ್ತರು ಭಾಗವಹಿಸಿರುವುದು.