ರಾಜ್ಯ ಬಜೆಟ್‌ನತ್ತ ಮೇಲೆ ಮುಳುಗಡೆ ನಾಡಿನ ಜನತೆಯ ಚಿತ್ತ

| Published : Feb 15 2024, 01:35 AM IST

ರಾಜ್ಯ ಬಜೆಟ್‌ನತ್ತ ಮೇಲೆ ಮುಳುಗಡೆ ನಾಡಿನ ಜನತೆಯ ಚಿತ್ತ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ಕಳೆದ ಕೆಲ ವರ್ಷಗಳಿಂದ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ಬಹುತೇಕ ಯೋಜನೆಗಳನ್ನು ಪೂರ್ಣಗೊಳಿಸದೆ, ಅಗತ್ಯ ಅನುದಾನ ನೀಡದೆ ಇರುವ ಕಾರಣಕ್ಕೆ ಬಹುತೇಕ ಯೋಜನೆಗಳಿಗೆ ಹಿನ್ನೆಡೆಯಾಗಿದೆ. ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಗೆ ಘೋಷಣೆಯಾದ ಗುಳೇದಗುಡ್ಡದ ಜವಳಿ ಪಾರ್ಕ್‌ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ನಿಗದಿಯಾದ ₹ 5 ಸಾವಿರ ಕೋಟಿಯಲ್ಲಿ ನಿರೀಕ್ಷಿತ ಹಣ ನೀಡದೆ ಹೋಗಿದ್ದರಿಂದ ಯೋಜನೆ ಪೂರ್ಣಗೊಳ್ಳಲು ಬಹುದೊಡ್ಡ ಹಿನ್ನಡೆಯಾಗಿದೆ. ಈ ಬಾರಿಯ ಬಜೆಟ್‌ ನಲ್ಲಿ ಈ ಯೋಜನೆಗಳಿಗೆ ಅಗತ್ಯ ಅನುದಾನ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಕಾತರರಾಗಿದ್ದಾರೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಳೆದ ಕೆಲ ವರ್ಷಗಳಿಂದ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ಬಹುತೇಕ ಯೋಜನೆಗಳನ್ನು ಪೂರ್ಣಗೊಳಿಸದೆ, ಅಗತ್ಯ ಅನುದಾನ ನೀಡದೆ ಇರುವ ಕಾರಣಕ್ಕೆ ಬಹುತೇಕ ಯೋಜನೆಗಳಿಗೆ ಹಿನ್ನೆಡೆಯಾಗಿದೆ. ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಗೆ ಘೋಷಣೆಯಾದ ಗುಳೇದಗುಡ್ಡದ ಜವಳಿ ಪಾರ್ಕ್‌ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ನಿಗದಿಯಾದ ₹ 5 ಸಾವಿರ ಕೋಟಿಯಲ್ಲಿ ನಿರೀಕ್ಷಿತ ಹಣ ನೀಡದೆ ಹೋಗಿದ್ದರಿಂದ ಯೋಜನೆ ಪೂರ್ಣಗೊಳ್ಳಲು ಬಹುದೊಡ್ಡ ಹಿನ್ನಡೆಯಾಗಿದೆ.

ನಿರೀಕ್ಷಿತ ಅನುದಾನ ದೊರೆತಿದ್ದರೆ ಹಲವು ನೀರಾವರಿ ಯೋಜನೆಗಳು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ತುಂಬುವ ಕಾರ್ಯ ಜೊತೆಗೆ ನನೆಗುದಿಗೆ ಬಿದ್ದ ಪುನರ್ವಸತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ದೊರೆತು ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತಿತ್ತು, ಆದರೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರೀಕ್ಷಿತ ಪರಿಶ್ರಮ ಸಿಗದ ಕಾರಣ ಹತ್ತು ಹಲವು ಯೋಜನೆಗಳು ಕುಂಟುತ್ತಾ ಸಾಗಿವೆ.

ಬಾಗಲಕೋಟೆಗೆ ಮಂಜೂರಾದ ಸರ್ಕಾರಿ ವೈದ್ಯಕೀಯ ಕಾಲೇಜು, ವಿಜ್ಞಾನ ಕೇಂದ್ರದ ಸ್ಥಾಪನೆ, ಕೂಡಲಸಂಗಮ ಅಭಿವೃದ್ಧಿ, ಐಹೊಳೆ ಹಾಗೂ ಪಟ್ಟದಕಲ್ಲು, ಬಾದಾಮಿಯ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳು ಬಜೆಟ್ ನಲ್ಲಿ ಪ್ರಸ್ತಾಪವಾಗಿ ನೆಪ ಮಾತ್ರದ ಅನುದಾನ ದೊರೆತು ವಿಳಂಬ ಕಾರ್ಯದಿಂದ ಹಿನ್ನಡೆಯಾಗಿದ್ದು, ಬಜೆಟ್ ಘೋಷಣೆಗಳೇ ಅನುಷ್ಠಾನಗೊಳ್ಳದಿದ್ದರೆ ಉಳಿದ ಭರವಸೆಗಳಿಗೆ ನ್ಯಾಯ ಹೇಗೆ ಸಿಗಲು ಸಾಧ್ಯ ಎಂಬುದು ಜನತೆಯ ಮಾತಾಗಿದೆ.

2013-14ರಲ್ಲಿ ಬಜೆಟ್‌ ನಲ್ಲಿ ಘೋಷಣೆಯಾದ ವೈದ್ಯಕೀಯ ಕಾಲೇಜು ಇನ್ನೂ ಕನಸಾಗಿಯೇ ಉಳಿದಿದೆ, ಇದೇ ಅವಧಿಯಲ್ಲಿ ಮಂಜೂರಾದ ವಿಜ್ಞಾನ ಕೇಂದ್ರ ಪೂರ್ಣಗೊಂಡಿಲ್ಲ. ಇಂತಹ ಮಹತ್ವಾಕಾಂಕ್ಷಿ ಯೋಜನೆಗಳೇ ಸಾಕಾರಗೊಳ್ಳುತ್ತಿಲ್ಲ. ಹೀಗಾಗಿ ಬಜೆಟ್ ಘೋಷಣೆಗಳು ಸಹ ಅರ್ಥ ಕಳೆದುಕೊಳ್ಳುವಂತಾಗಿದೆ.

ಪ್ರವಾಸೋದ್ಯಮಕ್ಕೂ ಇಲ್ಲದ ಆದ್ಯತೆ :ಐತಿಹಾಸಿಕ ಪರಂಪರೆಯ ತಾಣಗಳಾಗಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲಿನ ಅಭಿವೃದ್ದಿ ವಿಷಯ ಬಂದಾಗಲೆಲ್ಲಾ ದೊಡ್ಡದಾಗಿ ಮಾತನಾಡುವ ಜಿಲ್ಲೆಯ ಪ್ರತಿನಿಧಿಗಳು ಪ್ರವಾಸೋಧ್ಯಮ ಕ್ಷೇತ್ರ ಬಲಪಡಿಸಲು ಬೇಕಾದ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗದೆ ಅಸಹಾಯಕತೆಯಲ್ಲಿದ್ದಾರೆ, ಈ ಹಿಂದೆ ಬಾದಾಮಿ ಪ್ರತಿನಿದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯಿಂದ ಕೆಲವು ಕೆಲಸಗಳು ಆರಂಭವಾಗುವ ಲಕ್ಷಣಗಳು ಇವೆಯಾದರೂ ನಿರೀಕ್ಷಿತವಾದ ಅಭಿವೃದ್ಧಿ ಕಾಣುತ್ತಿಲ್ಲ, ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಲ್ಲಿನ ಘೋಷಿತ ಕಾಮಗಾರಿಗಳಿಗೆ ವೇಗ ಸಿಗುತ್ತಿಲ್ಲ, ಹೀಗಾದರೆ ಅಭಿವೃದ್ಧಿಯ ಕನಸು ನನಸಾಗುವುದಾದರೂ ಹೇಗೆ ಎಂಬುದು ಜಿಲ್ಲೆಯ ಜನತೆಯ ಮಾತಾಗಿದೆ.

ಬಜೆಟ್ ನಿರೀಕ್ಷೆಗಳು: ಗುರುವಾರದ ಬಜೆಟ್ ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಅನುದಾನವನ್ನು ಒದಗಿಸಿ ಸಂತ್ರಸ್ತರ ಭಾವನೆಗಳಿಗೆ ಸ್ಪಂದಿಸುತ್ತಾರೆಂಬ ನಿರೀಕ್ಷೆ ಇದೆ.

ಆಲಮಟ್ಟಿ ಯೋಜನಾ ಸಂತ್ರಸ್ತರಿಗೆ ಮಾರುಕಟ್ಟೆ ಬೆಲೆಯಲ್ಲಿ ಪರಿಹಾರ ಧನ ವಿತರಣೆ, ಸೂಕ್ತ ಪುನರ್ವಸತಿ ದೊರೆತು ಗೌರವಯುತ ಬದುಕು ಕಟ್ಟಿಕೊಳ್ಳಲು ಹಾಗೂ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ತರುವ ವಿಶ್ವಾಸದಲ್ಲಿರುವ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸ್ಪಂದನೆ ದೊರೆಯಬಹುದೇ ಎಂಬುದು ಸಹ ಕೂತುಹಲ ಮೂಡಿಸಿದೆ.

ವಿಶ್ವ ಪಾರಂಪರಿಕ ಪ್ರವಾಸಿ ತಾಣಗಳಾದ ಐಹೊಳೆ, ಪಟ್ಟದಕಲ್ಲು, ಬಾದಾಮಿಯಲ್ಲಿನ ಸ್ಮಾರಕಗಳಿಗೆ ಹೊಂದಿಕೊಂಡಿರುವ ಜನ ವಸತಿಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಬೇಕಾದ ಅನುದಾನವನ್ನು ಬಜೆಟ್ ನಲ್ಲಿ ಒದಗಿಸುವ ಭರವಸೆ ನೀಡಿದ್ದರೂ ಸಹ ಅಂದಿನ ಬಜೆಟ್ ನಲ್ಲಿ ಹಣ ಒದಗಿಸಲು ಸಾಧ್ಯವಾಗಿರಲಿಲ್ಲ. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಸೂಕ್ತ ಅನುದಾನ ಸಿಗದೆ, ಕಾಲೇಜು ಸ್ಥಾಪನೆಗೆ ಬೇಕಾದ ಸೌಲಭ್ಯಗಳಿಲ್ಲದ ಕಾರಣಕ್ಕೆ ಹಿನ್ನಡೆಯಾಗಿದ್ದು, ಪ್ರಸಕ್ತ ಬಜೆಟ್ ನಲ್ಲಿ ಅನುದಾನ ಸಿಗಬಹುದೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ, ಒಟ್ಟಾರೆ ಶುಕ್ರವಾರದ ಬಜೆಟ್ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ನಾಂದಿ ಹಾಡುವುದೇ ಎಂಬುದನ್ನು ಜನತೆಯ ನಿರೀಕ್ಷೆಯಾಗಿದೆ.

ಜವಳಿ ಪಾರ್ಕ್‌ಗೆ ಬೇಕು ವೇಗ: ಜಿಲ್ಲೆಯ ಗುಳೇದಗುಡ್ಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ಮೇರೆಗೆ ಹಿಂದಿನ ಬಜೆಟ್‌ ನಲ್ಲಿ ಜವಳಿ ಪಾರ್ಕ್‌ ಸ್ಥಾಪನೆಗೆ ಘೋಷಣೆ ಮಾಡಲಾಗಿತ್ತು. ಆದರೆ ಇಡೀ ವರ್ಷದಲ್ಲಿ ಗುಳೇದಗುಡ್ಡ ಹೊರವಲಯದ ತೋಗುಣಿಸಿ ಬಳಿ ಸದ್ಯ 12 ಎಕರೆ ಜಮೀನನ್ನು ಗುರುತಿಸಲಾಗಿದೆ, ಇನ್ನೂ 3 ಎಕರೆ ಜಮೀನಿನ ಅವಶ್ಯಕತೆ ಇದೆ. ಜಮೀನಿನ ನಂತರ ಖಾಸಗಿ ಸಹ ಭಾಗಿತ್ವದಲ್ಲಿ ಸರ್ಕಾರದ ನೆರವಿನಲ್ಲಿ ಸ್ಥಾಪಿತವಾಗಬೇಕಾದ ಜವಳಿ ಪಾರ್ಕ್‌ ಇನ್ನೂ ಎಷ್ಟು ದಿನದ ನಂತರ ಆರಂಭಗೊಳ್ಳಲಿದೆಯೋ ಕಾದು ನೋಡಬೇಕಿದೆ.

---

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆಯ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಸಹಸ್ರಾರು ಕುಟುಂಬಕ್ಕೆ ಶಾಶ್ವತ ಉದ್ಯೋಗ ಕಲ್ಪಿಸುವ ಕೈಗಾರಿಕೆಗಳ ಅಗತ್ಯತೆ ಇದ್ದು, ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡುವ ಅವಶ್ಯಕತೆ ಇದೆ. ಜೊತೆಗೆ ಸರ್ಕಾರ ಬಜೆಟ್‌ ನಲ್ಲಿ ಘೋಷಣೆ ಮಾಡಿರುವ ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಅಗತ್ಯತೆ ಇದೆ.

- ರಮೇಶ ಬದ್ನೂರ ಹೋರಾಟಗಾರ ಬಾಗಲಕೋಟೆ

----

ಬಾಗಲಕೋಟೆ ಸಂತ್ರಸ್ತರ ಶಾಶ್ವತ ಪುನರ್ವಸತಿ ಅಗತ್ಯವಾಗಿದ್ದು, ನಗರದ 527 ಮೀಟರ್ ವ್ಯಾಪ್ತಿಯ ಒಳಗೆ ಭೂಸ್ವಾಧೀನ ಮಾಡಿಕೊಂಡು ಸಂತ್ರಸ್ತರಿಗೆ ಯೋಗ್ಯ ಪರಿಹಾರ ಧನ ನೀಡುವ 2013ರ ಭೂಸ್ವಾಧೀನ ಕಾಯ್ದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಆದ್ಯತೆ ನೀಡಲಿ.

-ಘನಶ್ಯಾಮ ಭಾಂಡಗೆ, ಸಾಮಾಜಿಕ ಹೋರಾಟಗಾರ ಬಾಗಲಕೋಟೆ