ಚಾಮರಾಜನಗರಕ್ಕೆ ಬಂದಷ್ಟು ನನ್ನ ಕುರ್ಚಿ ಗಟ್ಟಿ ಆಗುತ್ತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Aug 11 2024, 01:31 AM IST / Updated: Aug 11 2024, 06:41 AM IST

Siddaramaiah
ಚಾಮರಾಜನಗರಕ್ಕೆ ಬಂದಷ್ಟು ನನ್ನ ಕುರ್ಚಿ ಗಟ್ಟಿ ಆಗುತ್ತೆ: ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ‌ ಕುರ್ಚಿ ಗಟ್ಟಿ ಆಗ್ತನೇ ಇರುತ್ತದೆ, ಚಾಮರಾಜನಗರ ಜಿಲ್ಲೆಗೆ ಬಂದಷ್ಟು ನನ್ನ ಕುರ್ಚಿ ಗಟ್ಟಿಯಾಗುತ್ತಲೆ ಇರುತ್ತೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.

ಕೊಳ್ಳೇಗಾಲ: ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ. ನನ್ನ‌ ಕುರ್ಚಿ ಗಟ್ಟಿ ಆಗ್ತನೇ ಇರುತ್ತದೆ, ಚಾಮರಾಜನಗರ ಜಿಲ್ಲೆಗೆ ಬಂದಷ್ಟು ನನ್ನ ಕುರ್ಚಿ ಗಟ್ಟಿಯಾಗುತ್ತಲೆ ಇರುತ್ತೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.

ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಜಲಪಾತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುತ್ತಿದ್ದರು. ಆದರೆ, ನಾನು ಮೊದಲ ಸಿಎಂ ಆದ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೆ. ಎರಡನೇ ಅವಧಿಯಲ್ಲಿ 5ನೇ ಬಾರಿ ಭೇಟಿ ಕೊಟ್ಟಿದ್ದೇನೆ. ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನನ್ನ ಕುರ್ಚಿ ಗಟ್ಟಿಯಾಗುತ್ತಿದ್ದೆ, ಕೆಲವರು ಕುರ್ಚಿ ಅಲ್ಲಾಡಿಸುತ್ತಿದ್ದಾರೆ, ಅವರು ಅಲ್ಲಾಡಿಸುತ್ತಿರಲಿ, ನನ್ನನ್ನು ಏನೂ ಮಾಡಕ್ಕಾಗಲ್ಲ, ಅಲ್ಲಾಡಿಸಿದಷ್ಟು ಕುರ್ಚಿ ಗಟ್ಟಿಯಾಗುತ್ತೆ ಎಂದರು.

ಪ್ರವಾಸೋದ್ಯಮಕ್ಕೆ ಸುಂದರ ಜಿಲ್ಲೆ:ಪರಿಸರ ಪ್ರವಾಸೋಧ್ಯಮ ಆಹ್ಲಾದಿಸಲು ಚಾಮರಾಜನಗರ ಜಿಲ್ಲೆ ಉತ್ತಮ ಮತ್ತು ಸುಂದರ ಜಿಲ್ಲೆಯಾಗಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ. ಹಿಂದಿನ ಸರ್ಕಾರಗಳು ಪ್ರವಾಸೋದ್ಯಮಕ್ಕೆ ಅಷ್ಟಾಗಿ ಅಭಿವೃದ್ಧಿ ನೀಡಿರಲಿಲ್ಲ, ಆದರೆ ನಾನು ಹಾಗೆ ಮಾಡಲ್ಲ, ಈಗಾಗಾಲೇ ಪ್ರವಾಸೋದ್ಯಮ ಸಚಿವರ ಜೊತೆಯೂ ಚರ್ಚಿಸಿದ್ದು ಅಭಿವೃದ್ಧಿಗೆ ಹೆಚ್ಟಿನ ಒತ್ತು ನೀಡುವೆ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರವಾಸೋದ್ಯಮದ ಲಾಭದಿಂದಲೇ ಬದುಕುತ್ತಿವೆ. 

ಹಾಗಾಗಿ ಚಾ.ನಗರ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡುವೆ. ಅದಕ್ಕಾಗಿ ಸಾಕಷ್ಟು ಅನುದಾನ ನೀಡಲು ಸಿದ್ಧನಿದ್ದೇನೆ ಎಂದರು. ನಾನು ಇನ್ನಷ್ಟು ಗಟ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಲೆ ಇರುತ್ತೇನೆ.

ಸಿದ್ದರಾಮಯ್ಯರ ಕಾಲುಗುಣ ಸರಿ ಇಲ್ಲ. ಅದಕ್ಕೆ ರಾಜ್ಯದಲ್ಲಿ ಮಳೆ ಇಲ್ಲ ಎಂದು ನನ್ನ ಬಗ್ಗೆ ಆರೋಪಿಸಿದ್ದರು. ಆದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನೆರೆಯೂ ಬಂದಿದೆ. ಹೀಗಾಗಿ ನನ್ನ ಬಗ್ಗೆ ಮೂಡಿಸಿದ್ದ ಮತ್ತೊಂದು ಮೂಢನಂಬಿಕೆ ಕೂಡ ಸುಳ್ಳಾಗಿದೆ ಎಂದು ವಿಪಕ್ಷಗಳ ಟೀಕೆಗೆ ಕುಟುಕಿದರು.

ಪ್ರವಾಸೋದ್ಯಮ ನೀತಿಗೂ ಬದ್ಧ:

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯವಾದ ಎಲ್ಲ ನೆರವನ್ನೂ ನೀಡಲಿದೆ. ಅಗತ್ಯಬಿದ್ದರೆ ಹೊಸ ಪ್ರವಾಸೋಧ್ಯಮ ನೀತಿಯನ್ನೂ ರಚಿಸಲಾಗುವುದು ಎಂದು ಭರವಸೆ ನೀಡಿದರು. ಬಿಳಿಗಿರಿರಂಗನಬೆಟ್ಟ, ಗಗನಚುಕ್ಕಿ ರೋಪ್ ವೇ, ಇಲ್ಲಿನ ದೇವಸ್ಥಾನ ಅಭಿವೃದ್ಧಿ, ಸುವರ್ಣಾವತಿ ಜಲಾಶಯದಲ್ಲಿ ಜಲ ಸಾಹನ ಕ್ರೀಡೆಗಳನ್ನು ಆರಂಭಿಸುವುದೂ ಸೇರಿ ಎಲ್ಲಾ ಯೋಜನೆಗಳಿಗೂ ಸರ್ಕಾರ ಜೊತೆಗೆ ನಿಲ್ಲಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಮೂಲಕ ಆರ್ಥಿಕವಾಗಿ ವೇಗದ ಪ್ರಗತಿ ಕಾಣಿಸಲು ಎಲ್ಲಾ ಸಹಕಾರವನ್ನೂ ಸರ್ಕಾರ ನೀಡಲಿದೆ. ಅದೇ ರೀತಿಯಲ್ಲಿ ಶಿವಮೊಗ್ಗ, ಬೆಳಗಾಂ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಈ ವೇಳೆ ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಶಾಸಕರಾದ ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಸಂಸದ ಸುನಿಲ್ ಬೋಸ್, ವಿಧಾನ‌ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ವಿವೇಕಾನಂದ, ಹೊಂಗನೂರು ಚಂದ್ರ ಇನ್ನಿತರರಿದ್ದರು.

ಭರಚುಕ್ಕಿ ಮೂಲ ಸೌಲಭ್ಯಕ್ಕೆ ₹2.5ಕೋಟಿ ಕ್ರಿಯಾಯೋಜನೆ

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಜಲಪಾತೋತ್ಸವದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಹಾ ಚರ್ಚಿಸುವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಭರಚುಕ್ಕಿ ಜಲಪಾತೋತ್ಸವದಲ್ಲಿ ಮಾತನಾಡಿ, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದಷ್ಟು ಸ್ಥಳೀಯ ಜನರ ಆರ್ಥಿಕ ಬೆಳವಣಿಗೆಗೂ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಈ ಪ್ರಕೃತಿಯಲ್ಲಿ ಜಲಪಾತೋತ್ಸವ ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು. ಈ ಪ್ರದೇಶ ನಿಸರ್ಗದ ಮಡಿಲಲ್ಲಿದೆ. ಅದರಲ್ಲೂ ಜನರನ್ನು ವಿಸ್ಮಯ ಮಾಡುತ್ತ ಆಕರ್ಷಿಸುತ್ತಿದೆ. ಇಂತಹ ಪ್ರದೇಶಗಳಲ್ಲಿ ಸ್ವಲ್ಪ ಮೂಲ ಸೌಲಭ್ಯ ಕಲ್ಪಿಸಿದರೆ ಉತ್ತಮ ಅಭಿವೃದ್ಧಿಯಾಗಲಿದೆ.

ಸುವರ್ಣಾವತಿ ಜಲಾಶಯವನ್ನು ಜಲಸಾಹಸ ಕ್ರೀಡೆಗೆ ಉಪಯುಕ್ತ ಸ್ಥಾನವನ್ನಾಗಿಸಲು, ಹೊಗೇನಕಲ್ ಜಲಾಶಯದ ಬಳಿ ತೂಗು ಸೇತುವೆಯ ಕಲ್ಪನೆ ಜನರಿಗಿದೆ. ಒಂದು ಯೋಜನೆ ರೂಪಿಸಿ ತಕ್ಷಣ ಅನುಷ್ಠಾನಗೊಳಿಸಬೇಕಿದೆ. ಇದು ಅನುಷ್ಠಾನವಾದರೆ ಪಾಲಾರ್ ನಿಂದ ಹೊಗೇನಕಲ್ ತನಕ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಭರಚುಕ್ಕಿ ಜಲಪಾತದ ಬಳಿ ₹5 ಕೋಟಿ ಅಭಿವೃದ್ಧಿಯಡಿ ಪಾರ್ಕಿಂಗ್, ರಸ್ತೆ ಇನ್ನಿತರೆ ಕಾಮಗಾರಿ ಕೈಗೊಳ್ಳಲಾಗಿದ್ದು ಇನ್ನು ಎರಡೂವರೆ ಕೋಟಿಯಲ್ಲಿ ಹೆಚ್ಚುವರಿ ಮೂಲಭೂತ ಅನೇಕ ಯೋಜನೆ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿದ್ದಾರೆ. ಸಾಕಷ್ಟು ಪ್ರಯತ್ನಪಟ್ಟು ಪ್ರವಾಸೋದ್ಯಮದ ಮಹತ್ವ ತಾಣವನ್ನಾಗಿಸುವಲ್ಲಿ ಶ್ರಮಿಸುವೆ ಎಂದು ಭರವಸೆ ನೀಡಿದರು.