ಅತ್ಯಂತ ಹೃದಯಪೂರ್ವಕ ಸಹಕಾರ ದೊರೆತಿದೆ

| Published : May 18 2025, 01:49 AM IST

ಸಾರಾಂಶ

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪ ಲೋಕಾಯುಕ್ತರ ಕಚೇರಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಆಯ್ದ ಪ್ರಕರಣಗಳನ್ನು ಇತ್ಯರ್ಥ ಪಡಿಸಲುವ ಸಂಬಂಧ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಅಭಿನಂದನೆಗಳನ್ನು ತಿಳಿಸಿದರು. ಸುಸೂತ್ರವಾಗಿ ಪ್ರಕರಣಗಳ ವಿಲೇವಾರಿ ಮಾಡಲು ಆತ್ಮೀಯವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಎರಡು ದಿನಗಳು ಬಹಳ ಸೌಜನ್ಯಯುತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅತ್ಯಂತ ಹೃದಯ ಪೂರ್ವಕವಾಗಿ ಸಹಕಾರ ನೀಡಿದ್ದಾರೆ ಎಂದು ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ತಿಳಿಸಿದ್ದಾರೆ.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪ ಲೋಕಾಯುಕ್ತರ ಕಚೇರಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಆಯ್ದ ಪ್ರಕರಣಗಳನ್ನು ಇತ್ಯರ್ಥ ಪಡಿಸಲುವ ಸಂಬಂಧ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಅಭಿನಂದನೆಗಳನ್ನು ತಿಳಿಸಿದರು. ಸುಸೂತ್ರವಾಗಿ ಪ್ರಕರಣಗಳ ವಿಲೇವಾರಿ ಮಾಡಲು ಆತ್ಮೀಯವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ರಾಜಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹಾಸನ ಜಿಲ್ಲೆಯಲ್ಲಿ ಬಹಳ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಮೂರು ಅಧಿಕಾರಿಗಳನ್ನು ನೋಡಿದರೆ ತುಂಬಾ ಖುಷಿ ಆಗುತ್ತದೆ ಎಂದರು. ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಂದರ್ಭದಲ್ಲಿ ಅವರು ಬಹಳ ತಾಳ್ಮೆಯಿಂದ ಸಾರ್ವಜನಿಕರಿಗೆ ವಿಷಯಗಳ ಕುರಿತು ಮನವರಿಕೆ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಇವರು ಯಾವ ನ್ಯಾಯಾಧೀಶರಿಗೂ ಕಡಿಮೆಯಿಲ್ಲ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು ಎಂದ ಅವರು, ಹಾಸನ ಜಿಲ್ಲೆಯ ಅಭಿವೃದ್ಧಿಗೆ ಈ ಮೂವರು ಮಹಿಳೆಯರು ಕರ್ತವ್ಯ ನಿರ್ವಹಿಸುತ್ತ ಮುನ್ನಡೆಯುತ್ತಿದ್ದಾರೆ. ನನ್ನ ಕರ್ತವ್ಯದಲ್ಲಿಯೂ ಉತ್ಕೃಷ್ಟ ಸಹಕಾರ ನೀಡಿದ್ದಾರೆ ಎಂದರು. ಒಟ್ಟು ೮೩ ಪ್ರಕರಣಗಳಲ್ಲಿ ೬೩ ಪ್ರಕರಣಗಳು ಮುಕ್ತಾಯವಾಯಿತು. ೪೩ ಪ್ರಕರಣಗಳು ತೀರ್ಮಾನ ಆಗಿ ದೂರುದಾರರಿಗೆ ನ್ಯಾಯ ದೊರಕಿದೆ ಯಾರಿಗೂ ಅಸಮಾಧಾನ ಆಗದಂತೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದ ಅವರು, ಈ ಕಾರ್ಯಕ್ರಮದ ನಂತರ ಉಳಿದ ೧೬ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದರು.ಸರ್ಕಾರಿ ನೌಕರರು ಸಾರ್ವಜನಿ ಕರಿಗೆ ಸ್ಪಂದಿಸಿ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸಮಯೋಚಿತ ಮತ್ತು ಸಂದರ್ಭೋಚಿತವಾಗಿ ಕೆಲಸ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಕಾಳಜಿಯಿಂದ ನಿಗಾ ವಹಿಸಬೇಕು ಎಂದು ತಿಳಿಸಿದರು.ಲೋಕಾಯುಕ್ತ ಪೊಲೀಸ್ ಅಧಿಕ್ಷಕರಾದ ಸ್ನೇಹ ಅವರು ನಾಲ್ಕು ಜಿಲ್ಲೆಗಳ ಜವಾಬ್ದಾರಿ ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೂಡ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ ಎಂದ ಅವರು, ಈ ಹಿಂದೆ ಇದ್ದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಹೆರಿಗೆ ರಜೆಯಲ್ಲಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಒಂದು ತಿಂಗಳ ಹಿಂದೆ ಈ ಕಾರ್ಯಕ್ರಮ ಕುರಿತು ತಿಳಿಸಿದಾಗ ಅವರು ಮುತುವರ್ಜಿ ವಹಿಸಿ ಪ್ರಕರಣ ಇತ್ಯರ್ಥಕ್ಕೆ ದೂರುದಾರರಿಗೆ ನೋಟಿಸ್ ನೀಡಿ ಸದರಿ ಸಭೆಗೆ ಹಾಜರಾಗಲು ಸಹಕಾರ ನೀಡಿದ್ದಾರೆ ಎಂದು ಕೃತಜ್ಞತೆ ತಿಳಿಸಿದರು.ಅದೇ ರೀತಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ದಾಕ್ಷಾಯಿಣಿ ಅವರು ಕೂಡ ತುಂಬಾ ಸಹಕಾರ ನೀಡಿದ್ದಾರೆ. ಅವರಿಗೂ ಸಹ ಕೆಲವು ಕೆಲಸಗಳನ್ನು ವಹಿಸಿರುವುದಾಗಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಅವರು ಕೂಡ ಜಿಲ್ಲಾಧಿಕಾರಿ ಅವರ ಅನುಪಸ್ಥಿತಿಯಲ್ಲಿ ತಾವು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮೊಂದಿಗೆ ಇದ್ದು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಸತ್ಯಭಾಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಮೂರ್ತಿ ಅವರು ಬೆಳಗ್ಗೆಯಿಂದ ಸಂಜೆವರೆಗೆ ಸತತವಾಗಿ ಕುಳಿತು ಮಧ್ಯದಲ್ಲಿ ಊಟಕ್ಕೆ ಹೋದ ಸಮಯ ಹೊರತು ಪಡಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದನ್ನು ಬಹಳ ಹತ್ತಿರದಿಂದ ನೋಡಿದಾಗ ಅವರ ಕಾರ್ಯತತ್ಪರತೆ ಮತ್ತು ದಕ್ಷತೆಯನ್ನು ನಾವು ಅಳವಡಿಸಿಕೊಳ್ಳಬೇಕು ಎಂದರಲ್ಲದೆ, ನ್ಯಾಯಮೂರ್ತಿ ಅವರು ನೀಡಿರುವ ಸಲಹೆಗಳನ್ನು ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸೋಣ ಎಂದು ತಿಳಿಸಿದರು.ಕಾರ್ಯಕ್ರಮ ನಂತರವು ಕೂಡ ನ್ಯಾಯಾಧೀಶರು ಉಳಿಕೆ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಿರುವುದು ಅವರ ಕಾರ್ಯವೈಖರಿಯೂ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು. ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ೭ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ ೨ ಸಹಾಯಕ ನಿಬಂಧಕರು ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶುಭವೀರ ಬಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಬಿ.ಕೆ. ಸಿವಿಲ್ ನ್ಯಾಯಾಧೀಶರು ಹಾಗೂ ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸ್ನೇಹ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹ್ಮಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಉಪಸ್ಥಿತರಿದ್ದರು.