ನಿತ್ಯ ಜೀವನಕ್ಕೆ ಬೇಕಾಗುವ ತಾಯಿ ಸಂಸ್ಕೃತಿ ಜನಪದ

| Published : Aug 23 2024, 01:14 AM IST

ಸಾರಾಂಶ

ಚಿತ್ರದುರ್ಗದ ಪತ್ರಕರ್ತರ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಆಯೋಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಾನಪದ ಸಂಸ್ಕೃತಿಗೆ ಚಲನಶೀಲತೆ ಇದ್ದು, ನಿತ್ಯ ಜೀವನಕ್ಕೆ ಬೇಕಾಗುವ ತಾಯಿ ಸಂಸ್ಕೃತಿಯನ್ನು ಅದು ಒಳಗೊಂಡಿದೆ ಎಂದು ಪ್ರಾಧ್ಯಾಪಕ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ.ಕರಿಯಪ್ಪಮಾಳಿಗೆ ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಗುರುವಾರ ಪತ್ರಕರ್ತರ ಸಾಂಸ್ಕೃತಿಕ ಭನದಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಸಾಮಾನ್ಯರ ಮಧ್ಯೆ ಬದುಕಿದ್ದ ಜಾನಪದ ಇಂದು ವಿಧ್ವತ್ ಜನರ ಅಧ್ಯಯನದ ವಸ್ತುವಾಗಿದೆ. ಜನಪದ ಇಡೀ ಜನಾಂಗವನ್ನು ಪ್ರತಿನಿಧಿಸುವ ಸಾಹಿತ್ಯ. ಎಲ್ಲ ಶಿಷ್ಟ ಸಾಹಿತ್ಯಗಳ ಜನನಿ. ಸಂಸ್ಕೃತಿ ಮತ್ತು ಪರಂಪರೆಗಳನ್ನು ಜನಾಂಗದಿಂದ ಜನಾಂಗಕ್ಕೆ ಒಯ್ಯುವ, ಕಾಲಮಾನಕ್ಕೆ ತಕ್ಕಂತೆ ಪ್ರತಿಸ್ಪಂದಿಸುವ, ಪರಿವರ್ತನೆಗೊಳ್ಳುವ ಪರಂಪರೆ ಮತ್ತು ಪ್ರಗತಿಗೆ ಸೇತುವೆಯಾಗಿದೆ ಎಂದರು.

ಜಾಗತೀಕರಣ ಮತ್ತು ಆಧುನಿಕತೆಯ ಒತ್ತಡಗಳ ಮಧ್ಯೆ ನಾವಿಂದು ಸಿಲುಕಿದ್ದೇವೆ. ಪರಂಪರೆ ಮತ್ತು ವರ್ತಮಾನದ ಸೇತುವೆ ಯಂತಿರುವ ಜಾನಪದ ಸಂಸ್ಕೃತಿಯ ಮರೆಯಲಾರಂಬಿಸಿವೆ. ಜನಪದ ಎಂದರೆ ಕೂಡಿಸುವ ಸಂಸ್ಕೃತಿ. ಜಾತಿ, ಮತ, ಧರ್ಮಗಳನ್ನು ಮೀರಿದ ಮಾನವೀಯ ಗುಣ ಅದಕ್ಕಿದೆ. ವಿಘಟಿಸುವ, ಶಿಥಿಲಗೊಳಿಸುವ ಸ್ವಾರ್ಥದ ಚಿಂತನೆಗಳಿಗೆ ಇಲ್ಲಿ ಅವಕಾಶವಿಲ್ಲ. ಅದೊಂದು ಅಪ್ಪಿಕೊಳ್ಳುವ ಸಂಸ್ಕೃತಿ. ದೇಸೀ ಜ್ಞಾನ ನೆಲೆ. ಜನಪದರು ತಮ್ಮ ಅನುಭವವನ್ನು ತಿಳುವಳಿಕೆ ಮೂಲಕ ಕಟ್ಟಿಕೊಂಡ ಜ್ಞಾನ. ಅದರಲ್ಲಿ ಆಯಾ ಕಾಲದ ಒಪ್ಪಿತ ಮೌಲ್ಯಗಳಿವೆ. ಅಂಥ ಮೌಲ್ಯಗಳನ್ನು ಪರಂಪರೆಯಿಂದ ರೂಢಿಸಿಕೊಂಡು ಬಂದಿರುವುದರಿಂದ ಅದಕ್ಕೊಂದು ನಿರಂತರತೆ ಇದೆ ಎಂದು ಡಾ.ಕರಿಯಪ್ಪ ಮಾಳಿಗೆ ಹೇಳಿದರು.

ಜಾನಪದಕ್ಕೆ ಕ್ರಿಯಾಶೀಲ ಮತ್ತು ಸೃಜನಶೀಲತೆ ಇರುವುದರಿಂದಲೆ ಅದೊಂದು ಅಧ್ಯಯನ ಯೋಗ್ಯವಾಗಿದ್ದು, ಈ ಹೊತ್ತು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬಂದಿದೆ. ಜನಪದ ಸಂಸ್ಕೃತಿ ಪ್ರಸ್ತುತತೆ, ಅದರಲ್ಲಿನ ಸಾರ್ವಕಾಲಿಕತೆಯನ್ನು ಕುರಿತು ತಾತ್ವಿಕ ಅಧ್ಯಯನ ನಡೆಸಿದರೆ ಅದರ ಮಹತ್ವ ಮತ್ತು ಅಗತ್ಯತೆ ತಿಳಿಯುತ್ತದೆ. ಅನೇಕ ನಂಬಿಕೆಗಳಲ್ಲಿ ನೀತಿ ಇದೆ. ವೈಜ್ಞಾನಿಕತೆ, ನಿಜವೂ ಇದೆ. ಇದೆಲ್ಲದರ ಹೊರತಾಗಿಯೂ ಮುಗ್ದ ಜನತೆ ಮನೋ ದೌರ್ಬಲ್ಯಕ್ಕೊಳಗಾಗಿ ಮೌಢ್ಯರಾಗಿರುವ ನಿದರ್ಶನಗಳೂ ಇವೆ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಾನಪದ ಎಂಬುದು ನಮ್ಮ ಸಂಸ್ಕೃತಿ ಅವಿಭಾಜ್ಯ ಅಂಗವಾಗಿದೆ. ಜಾನಪದ ಯಾವ ಶಿಷ್ಟ ಸಂಸ್ಕೃತಿಗಿಂತ ಕಡಿಮೆ ಇಲ್ಲ. ಎಲ್ಲರ ಜೀವನದಲ್ಲೂ ಹಾಸುಹೊಕ್ಕಾಗಿದೆ. ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ತುಂಬುವಲ್ಲಿ ಅತ್ಯಂತ ಸಹಕಾರಿಯಾಗಿದೆ ಎಂದರು.

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ ತಾಜ್‍ಪೀರ್ ಮಾತನಾಡಿ, ಜಾನಪದವು ಬದುಕಿಗೆ ಮೌಲ್ಯ ಮತ್ತು ಮನರಂಜನೆ ಬಿತ್ತುವಲ್ಲಿ ತುಂಬಾ ಸಹಕಾರಿಯಾಗಿದೆ. ಜನಪದ ಕಲೆಗಳ ಪ್ರದರ್ಶನ ಮತ್ತು ಅವುಗಳ ಅರಿವು ಇಂದಿನ ಯುವ ಪೀಳಿಗೆಗೆ ಅನಿವಾರ್ಯವಾಗಿವೆ. ಜಾನಪದ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ತುಂಬಬೇಕೆಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಚಿತ್ರದುರ್ಗದ ಸ್ನಾತಕೊತ್ತರ ಕನ್ನಡ ಅದ್ಯಯನ ಕೇಂದ್ರದ ಡಾ.ವಿಜಯಕುಮಾರ್ ಮಾತನಾಡಿ, ನಾಡಿನ ಜಾನಪದ ಕ್ಷೇತ್ರಕ್ಕೆ ಜಿ.ಶಂ ಪರಮಶಿವಯ್ಯ, ಎಚ್.ಎಲ್. ನಾಗೇಗೌಡರು, ತೀನಂ ಶಂಕರನಾರಾಯಣ ಹಾಗೂ ಮೀರಸಾಬಿಹಳ್ಳಿ ಶಿವಣ್ಣ ಮುಂತಾದವರ ಕೊಡುಗೆ ಅನನ್ಯವಾದುದು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಿಗೆರೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ನಿರಂಜನ ದೇವರಮನೆ ಆಶಯ ನುಡಿಗಳನ್ನಾಡಿದರು. ಆಕಾಶವಾಣಿಯ ಉದ್ಘೋಶಕ ನವೀನ್‍ ಮಸ್ಕಲ್ ನಿರೂಪಿಸಿದರು. ಸ್ಥಳೀಯ ಜಾನಪದ ಕಲಾವಿದರಿಂದ ಚೌಡಿಕೆ, ವೀರಗಾಸೆ, ಕರಡಿ ಮೇಳ, ಡೊಳ್ಳು, ಕಹಳೆ ಮುಂತಾದ ಕಲೆಗಳು ಪ್ರದರ್ಶನಗೊಂಡವು.