ಹೋಳಿ ಓಕುಳಿಯಲ್ಲಿ ಮಿಂದೆದ್ದ ಮಲೆನಾಡಿಗರು

| Published : Mar 27 2024, 01:06 AM IST

ಸಾರಾಂಶ

ಇಡೀ ಹಬ್ಬವೆಲ್ಲ ಗೋಪಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿತ್ತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಮುಖವಾಗಿ ಯುವಕ ಯುವತಿಯರೇ ಹೆಚ್ಚಾಗಿ ಡಿ.ಜೆ.ಯೊಂದಿಗೆ ಹೆಜ್ಜೆ ಹಾಕಿ ಬಣ್ಣದ ನೀರುಗಳ ಎರಚಿ ನೃತ್ಯಮಾಡುತ್ತ ಬಣ್ಣದಲ್ಲಿ ಮಿಂದು ಹುಚ್ಚೆದ್ದು ಕುಣಿದು ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎಲ್ಲಿ ನೋಡಿದರೂ ಬಣ್ಣ, ಬಣ್ಣದ ಚಿತ್ತಾರ. ಮಕ್ಕಳು, ಯುವಕ-ಯುವತಿಯರ ಕೇಕೆ ಸಿಳ್ಳೆ, ಇಷ್ಟದ ಹಾಡುಗಳಿಗೆ ಭರ್ಜರಿ ನೃತ್ಯ. ರೇನ್‌ ಡ್ಯಾನ್ಸ್‌ ಇದು ಶಿವಮೊಗ್ಗ ನಗರದಲ್ಲಿ ಮಂಗಳವಾರ ಕಂಡು ಬಂದ ದೃಶ್ಯ.

ಬಣ್ಣದಾಟ ಇಡೀ ನಗರದ ಜನರ ಸಂತಸದ ಅಲೆಯಲ್ಲಿ ತೇಲಿಸಿತು. ಈ ವೇಳೆ ಒಬ್ಬರಿಗೊಬ್ಬರು ಗುರುತು ಸಿಗಲಾರದಷ್ಟು ಮುಖಕ್ಕೆಲ್ಲ ಮೆತ್ತಿಕೊಂಡು ಬಣ್ಣದೋಕುಳಿಯಲ್ಲಿ ತೇಲಿದರು. ಇನ್ನೂ ಅನೇಕ ಯುವಕ ಯುವತಿಯರು ಬಣ್ಣ ಬಳಿದು ಪರಸ್ಪರ ಎರಚಿಕೊಂಡು ಬೈಕ್‌ಗಳಲ್ಲಿ ಸವಾರಿ ಮಾಡುತ್ತ ರಂಗು ರಂಗಿನ ಹೋಳಿ ಸಂಭ್ರಮದಲ್ಲಿ ಮಿಂದರು.

ಇಡೀ ಹಬ್ಬವೆಲ್ಲ ಗೋಪಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿತ್ತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಮುಖವಾಗಿ ಯುವಕ ಯುವತಿಯರೇ ಹೆಚ್ಚಾಗಿ ಡಿ.ಜೆ.ಯೊಂದಿಗೆ ಹೆಜ್ಜೆ ಹಾಕಿ ಬಣ್ಣದ ನೀರುಗಳ ಎರಚಿ ನೃತ್ಯಮಾಡುತ್ತ ಬಣ್ಣದಲ್ಲಿ ಮಿಂದು ಹುಚ್ಚೆದ್ದು ಕುಣಿದು ಅತ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.

ಗೋಪಿವೃತ್ತದಲ್ಲಿ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಡಿ.ಜೆ.ನೃತ್ಯ ಮತ್ತು ದೊಡ್ಡ ಟ್ಯಾಂಕರ್‌ಗಳ ಮೂಲಕ ಕಾರಂಜಿ ನೃತ್ಯವನ್ನು ಕೂಡ ಆಯೋಜಿಸಲಾಗಿತ್ತು. ಬರಗಾಲದ ನೀರಿನ ಕೊರತೆ ಹಿನ್ನೆಲೆಯಲ್ಲಿ ಕಾರಂಜಿ ನೃತ್ಯ ಕಡಿಮೆಗೊಳಿಸಿ ಡಿಜೆಗೆ ಯುವಕ ಯುವತಿಯರು ಹೆಜ್ಜೆ ಹಾಕಿದ್ದು ಕಂಡು ಬಂದಿತು. ಒಬ್ಬರಿಗೊಬ್ಬರು ಬಣ್ಣದ ನೀರು ಎರಚುವ ಮೂಲಕ ಕುಣಿದು ಕುಪ್ಪಳಿಸಿದರು.

ಬಾಲ್ಕನಿಯಲ್ಲಿ ನಿಂತು ಹಬ್ಬ ವೀಕ್ಷಣೆ:

ಗೋಪಿ ವೃತ್ತದ ಸುತ್ತ ಬ್ಯಾರಿಕೇಡ್‍ಗಳ ಅಳವಡಿಸಲಾಗಿತ್ತು. ಗೋಪಿ ವೃತ್ತದಲ್ಲಿ ಹೋಳಿ ಆಚರಣೆ ಇದ್ದ ಕಾರಣ ಬಾಲರಾಜ್ ಅರಸ್ ರಸ್ತೆ, ದುರ್ಗಿಗುಡಿ ರಸ್ತೆ, ಬಿ.ಎಚ್.ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಎಂ.ಜೆ.ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಹಿಳೆ ಇರುವ ಕಟ್ಟಡ ಸೇರಿ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ಜನರು ನಿಂತು ಹಬ್ಬವನ್ನು ವೀಕ್ಷಿಸಿದರು. ಹೋಳಿ ಹಬ್ಬ ನೋಡಲೆಂದೇ ನೂರಾರು ಸಂಖ್ಯೆಯಲ್ಲಿ ಜನರು ನೆರದಿದ್ದರು. ಜನರು ಸೆಲ್ಫೀ ಪೋಟೋಗಳು, ವೀಡಿಯೋಗಳ ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದು ಖುಷಿಪಟ್ಟರು.

ಇದಲ್ಲದೆ ನಗರದ ಎಲ್ಲೆಡೆ ಹೋಳಿ ಹಬ್ಬ ಆಚರಿಸಿದ್ದು ಕಂಡುಬಂದಿತು. ಬಸ್‍ನಿಲ್ದಾಣ ಗಾಂಧಿಬಜಾರ್, ಕೋಟೆರಸ್ತೆ, ಪೊಲೀಸ್ ಚೌಕಿ, ವಿದ್ಯಾನಗರ , ಕಲ್ಲಳ್ಳಿ, ಡಿ.ವಿ.ಎಸ್. ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಸಾಗರ ರಸ್ತೆ, ಗೋಪಾಳ ಬಡಾವಣೆ ಮುಂತಾದ ಅನೇಕ ಕಡೆಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಕೂಡ ಹಬ್ಬದಲ್ಲಿ ಪಾಲ್ಗೊಂಡರು.

ಬಿಸಿಲಿನ ಧಗೆಗೂ ಕುಗ್ಗದ ಜನರು

ನಗರದಲ್ಲಿ ಬಿಸಿಲಿನ ಶಾಖ ವಿಪರೀತವಿದ್ದರೂ. ಬಿಸಿಲಿನ ಧಗೆ ಲೆಕ್ಕಿಸದ ಜನರು ಬೆಳಗ್ಗೆಯಿಂದಲೇ ಬಣ್ಣದಾಟ ಆರಂಭಿಸಿ ಮಧ್ಯಾಹ್ನದವರೆಗೂ ಬಣ್ಣದೋಕುಳಿಯ ಸಂಭ್ರಮಿಸಿ ಆಚರಿಸಿದರು. ಪರಸ್ಪರ ಬಣ್ಣ ಎರಚಿಕೊಂಡು ಬೈಕ್‌ಗಳ ಮೇಲೆ ಗುಂಪು-ಗುಂಪಾಗಿ ಬಂದ ಯುವಕ-ಯುವತಿಯರ ಸಂಭ್ರಮ ಹಬ್ಬಕ್ಕೆ ಕಳೆ ನೀಡಿತು. ಯುವಕರು ಸ್ನೇಹಿತರ ತಲೆಯ ಮೇಲೆ ಮೊಟ್ಟೆ ಒಡೆಯುತ್ತ ಸಂಭ್ರಮಿಸಿದ ಪರಿ ನೋಡುಗರ ಹೋಳಿ ಸಂಭ್ರಮ ಇಮ್ಮಡಿಗೊಳಿಸಿತು.