ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆ, ವಿಶಿಷ್ಟ ಆಹಾರ ಪದ್ಧತಿ ಹಾಗೂ ಗೌಡ ಸಮುದಾಯದ ಸಾಂಸ್ಕೃತಿಕ ವೈಭವ ಆಟಿ ಜಂಬರದಲ್ಲಿ ಅನಾವರಣಗೊಂಡಿತು. ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ಖಾದ್ಯಗಳು ಎಲ್ಲರ ಗಮನ ಸೆಳೆದವು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಆಟಿ ತಿಂಗಳ ಸಾಂಪ್ರದಾಯಿಕ ಆಚರಣೆ, ವಿಶಿಷ್ಟ ಆಹಾರ ಪದ್ಧತಿ ಹಾಗೂ ಗೌಡ ಸಮುದಾಯದ ಸಾಂಸ್ಕೃತಿಕ ವೈಭವ ಆಟಿ ಜಂಬರದಲ್ಲಿ ಅನಾವರಣಗೊಂಡಿತು. ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿಕೊಂಡು ಬಂದಿದ್ದ ಸಾಂಪ್ರದಾಯಿಕ ಖಾದ್ಯಗಳು ಎಲ್ಲರ ಗಮನ ಸೆಳೆದವು.ಮಕ್ಕಂದೂರು- ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮಕ್ಕಂದೂರಿನ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಆಟಿ ತಿಂಗಳು ವೈಜ್ಞಾನಿಕವಾಗಿಯೂ, ಸಾಂಪ್ರದಾಯಿಕವಾಗಿಯೂ ವಿಶೇಷ ಮಹತ್ವ ಹೊಂದಿದೆ. ಈ ಸಂದರ್ಭದಲ್ಲಿ ಸಿಗುವ ಸಾಂಪ್ರದಾಯಿಕ ಆಹಾರ ಪದಾರ್ಥಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರೈತರು ಕೃಷಿಯಿಂದ ವಿಮುಖರಾಗದೆ ಭತ್ತದ ಕೃಷಿಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.ಮಕ್ಕಂದೂರು- ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ಕಚೇರಿ ನಿರ್ಮಾಣಕ್ಕೆ ರು. 25 ಸಾವಿರ ಹಾಗೂ ಮಕ್ಕಂದೂರು ಮುಕ್ಕೋಡ್ಲು ಗೌಡ ಸಮಾಜದ ಕಟ್ಟಡ ಅಭಿವೃದ್ಧಿಗೆ ರು. 1 ಲಕ್ಷ ನೆರವು ನೀಡುವುದಾಗಿ ಭರವಸೆ ನೀಡಿದ ಆನಂದ್ ಕರಂದ್ಲಾಜೆ, ಇತರ ದಾನಿಗಳಿಂದಲೂ ಅಗತ್ಯ ಸಹಕಾರ ಒದಗಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅರೆಭಾಷೆ ಗೌಡ ನಿಗಮದ ಅಗತ್ಯದ ಕುರಿತು ಗಮನ ಸೆಳೆಯಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಾಸಕ ಮಂತರ್ ಗೌಡ ಅವರ ಒತ್ತಾಸೆಯಿಂದ ಶೀಘ್ರದಲ್ಲೇ ಬುನಾದಿ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಉದ್ಯಮಿ ಹಾಗೂ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ಮಕ್ಕಂದೂರು ಮುಕ್ಕೋಡ್ಲು ಗೌಡ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಯಾವದೇ ಕೆಲಸ, ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಯಾಕಾಗಿ, ಯಾವಾಗ, ಯಾರು, ಹೇಗೆ, ಎಲ್ಲಿ ಮಾಡಬೇಕೆಂಬ ಬಗ್ಗೆ ಪೂರ್ವಾಲೋಚನೆ ಮಾಡಬೇಕೆಂದು ಐದು ಡಬ್ಲ್ಯೂಗಳ ಬಗ್ಗೆ ವಿವರಿಸಿದರು.ಆಹಾರ ಪ್ರದರ್ಶನ ಮಳಿಗೆಯನ್ನು ಉದ್ಘಾಟನೆ ಮಾಡಿದ ಕೊಡಗು-ದಕ್ಷಿಣ ಕನ್ನಡ ಗೌಡ ಒಕ್ಕಲಿಗರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ಗೌಡ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ತಮಗೆ ದೊರೆಯಬೇಕಾದ ಮೂಲಸೌಕರ್ಯ ಹಾಗೂ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂದರು. ಗೌಡ ಯುವ ವೇದಿಕೆಯ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಒಕ್ಕಲಿಗ, ಅರೆಭಾಷೆ ಹಾಗೂ ತುಳು ಜಾನಪದ ಶೈಲಿಯ ಹಾಡುಗಳನ್ನು ಕ್ಯಾಸೆಟ್/ ಸಿಡಿ ರೂಪದಲ್ಲಿ ಹೊರತರುವ ಉದ್ದೇಶವಿದ್ದು, ಸ್ವತಃ ರಚಿಸಿರುವ ಜನಪದ ಹಾಡುಗಳನ್ನು ಸಮುದಾಯದವರು ನೀಡಿದರೆ ಅವುಗಳನ್ನು ಬಳಸಿಕೊಳ್ಳಲಾಗುವುದು ಎಂದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಮಾತನಾಡಿ, ಮಹಿಳೆಯರು ಆಕಾಶವಾಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹೆಸರುವಾಸಿಯಾಗಬೇಕು ಎಂದು ಸಲಹೆ ನೀಡಿದರು.ಕೊಡಗು-ದಕ್ಷಿಣ ಕನ್ನಡ ಗೌಡ ಒಕ್ಕಲಿಗರ ಮಹಿಳಾ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಕೊಡಗು ಗೌಡ ವಿದ್ಯಾ ಸಂಘವನ್ನು ಸ್ಥಾಪಿಸಿದವರು ಮಕ್ಕಂದೂರು ಗ್ರಾಮದ ಕುಂಬಗೌಡನ ಕುಶಾಲಪ್ಪ ಎಂಬುದನ್ನು ಸ್ಮರಿಸಿಕೊಂಡರಲ್ಲದೆ, ಸಂಘವನ್ನು ಕಟ್ಟುವುದು ಸುಲಭವಾದರೂ ಅದನ್ನು ನಿರಂತರವಾಗಿ ಮುನ್ನಡೆಸುವುದು ಸವಾಲಿನ ಕೆಲಸ. ಮಕ್ಕಂದೂರು ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ನವೀನ ನೇತೃತ್ವದ ಉತ್ಸಾಹಿ ತಂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮುದಾಯದ ಏಳಿಗೆ ಹಾಗೂ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಸ್ಕೌಟ್ಸ್ ಆಂಡ್ ಗೈಡ್ಸ್ ತರಬೇತಿ ಆಯುಕ್ತ ಕುಂಬಗೌಡನ ರಂಜಿತ್ ಆಟಿ ತಿಂಗಳ ಮಹತ್ವ ಹಾಗೂ ಅದರ ಹಿಂದಿರುವ ಸಾಂಪ್ರದಾಯಿಕ ಆಚರಣೆಗಳ ಕುರಿತು ವಿವರಿಸಿದರು.ಮಕ್ಕಂದೂರು ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತೂಟೆರ ನವೀನ ಮಾತನಾಡಿ, ಮಹಿಳಾ ಒಕ್ಕೂಟ ನಡೆದುಬಂದ ಹಾದಿ, ಇದುವರೆಗೆ ಕೈಗೊಂಡ ಕಾರ್ಯಕ್ರಮಗಳು ಹಾಗೂ ಮಹಿಳೆಯರ ಸಂಘಟಿತ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ಮಹಿಳೆಯರ ಶ್ರಮ ಮತ್ತು ಪ್ರಯತ್ನವನ್ನು ಶ್ಲಾಘಿಸಿದರು.
ಗೌಡ ಸಮಾಜದ ಉಪಾಧ್ಯಕ್ಷ ಕೊಟ್ಟಕೇರಿಯನ ಪ್ರದೀಪ್ ಮಾತನಾಡಿ, ಜನಾಂಗದ ಒಗ್ಗಟ್ಟು, ಶ್ರೇಯೋಭಿವೃದ್ಧಿಗಾಗಿ ಏರ್ಪಡಿಸಲಾಗುವ ಇಂತಹ ಕಾರ್ಯಕ್ರಮಗಳಲ್ಲಿ ಆಹ್ವಾನವಿಲ್ಲದಿದ್ದರೂ ಅಭಿಮಾನದಿಂದ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.ಮಕ್ಕಂದೂರು ಮುಕ್ಕೋಡ್ಲು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಅಧ್ಯಕ್ಷತೆ ವಹಿಸಿ ಸಮಾಜ ಹಾಗೂ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗುವ ಎಲ್ಲ ಕಾರ್ಯಕ್ರಮಗಳಿಗೂ ಸಹಕರಿಸುವಂತೆ ಕೋರಿದರು. ಸಮಾಜದ ಪದಾಧಿಕಾರಿ ಕುಡೆಕಲ್ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ ಗೌಡ ಸಮಾಜ ಹಾಗೂ ಮಹಿಳಾ ಒಕ್ಕೂಟದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ಗೌಡ ಸಮಾಜದ ಕಾರ್ಯದರ್ಶಿ ಚೀಯಂಡಿ ಸುಜಯ್, ಪದಾಧಿಕಾರಿಗಳಾದ ಚೌಕಿ ರಘು ತಿಮ್ಮಯ್ಯ, ಅಣ್ಣಚ್ಚಿರ ಸತೀಶ್, ಕುಂಬಗೌಡನ ಮಧು, ಲಕ್ಕಪ್ಪನ ವಿಜೇತ, ಮಾನಡ್ಕ ಮಂಜು, ತೇಲಬೈಲು ದಿನೇಶ್, ಈರೇಗೌಡನ ತೀರ್ಥ ಸೇರಿದಂತೆ ಅನೇಕರು ಸಹಕಾರ ನೀಡಿದರು.
ಅಗೆ ತೆಗೆಯುವ ಸಾಂಪ್ರದಾಯಿಕ ಆಚರಣೆಯಿಂದ ಆರಂಭಗೊಂಡು, ಆಟಿ ತಿಂಗಳ ಅಪರೂಪದ ಖಾದ್ಯಗಳ ಪ್ರದರ್ಶನದವರೆಗೆ ಇಡೀ ಕಾರ್ಯಕ್ರಮವು ಗೌಡ ಸಮುದಾಯದ ಒಗ್ಗಟ್ಟು, ಸಂಸ್ಕೃತಿಯ ಚಿತ್ರಣವನ್ನು ಕಟ್ಟಿಕೊಟ್ಟಿತು. ಆಟಿ ಜಂಬರವು ಕೇವಲ ಸಂಭ್ರಮದ ಕಾರ್ಯಕ್ರಮವಾಗಿರದೆ, ಹಿರಿಯರಿಂದ ಬಂದ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು.ತೇಲಬೈಲು ದಿವಿನ ಪ್ರಾರ್ಥಿಸಿದರು. ಮಹಿಳಾ ಒಕ್ಕೂಟದ ನಿರ್ದೇಶಕಿ ಕುಂಬಗೌಡನ ಲೇಖ ಜಗದೀಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಕುಂಬಗೌಡನ ಕವಿತಾ ಸುನಿಲ್ ಸದಸ್ಯತ್ವದ ವಿವರ ನೀಡಿದರೆ, ನಿರ್ದೇಶಕಿ ಮಳ್ಳನ ಹೇಮಾ ವಿಜಯ್ ದಾನಿಗಳ ವಿವರ ನೀಡಿದರು. ಕಾರ್ಯದರ್ಶಿ ತೇಲಬೈಲು ಆಶಿಕಾ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರೆ, ಸಹ ಕಾರ್ಯದರ್ಶಿ ಕುಡೆಕಲ್ ಸವಿತಾ ಸಂತೋಷ್ ವಂದಿಸಿದರು.