ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಅಂಬೇಡ್ಕರ್ ಅವರನ್ನು ಗುರುವಾಗಿ ಪಡೆದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಯಾವುದೇ ಜನಪರ ಚಳವಳಿಗಳಿಗೆ ಸೋಲಾಗಲಿ, ಸಾವಾಗಲಿ ಇರಲು ಸಾಧ್ಯವೇ ಇಲ್ಲ ಎಂದು ದಲಿತ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ನಾಯಕ ಡಾ.ಎಂ.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಡಾ.ಎಂ.ವೆಂಕಟಸ್ವಾಮಿ ಅವರಿಗೆ ದಲಿತ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿ, ದಲಿತ ಜನಾಂಗಗಳಿಗಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ನನಗೆ ದಲಿತ ಚೇತನ ಪ್ರಶಸ್ತಿ ನೀಡಿದ್ದಾರೆ. ದಸಂಸ ಹುಟ್ಟಿ 50 ವರ್ಷಗಳ ಆಯುಷ್ಯ ಕಳೆದಿದೆ. ಈ ನಡುವೆ ಚಿರಸ್ಥಾಯಿಯಾಗಿ ಉಳಿಯುವಂತಹ ಚಾರಿತ್ರಿಕ ಹೋರಾಟಗಳನ್ನು ಮಾಡಿದೆ. ಮುಂದೆಯೂ ಕೂಡ 50 ವರ್ಷ ಖಚಿತವಾಗಿ ಈ ಹೋರಾಟ ಮುನ್ನಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನಮಗೆ ನಮ್ಮ ಹೋರಾಟಕ್ಕೆ ನಿರ್ದಿಷ್ಟ ಗುರಿಯಿತ್ತು. ಅಂಬೇಡ್ಕರ್ ಎಂಬ ಗುರುವಿದ್ದರು. ಈಗ ಎಲ್ಲವೂ ತುರ್ತಾಗಿಯೇ ಆಗಬೇಕಿದೆ. ಸಂಘಕ್ಕೆ ಸೈದ್ಧಾಂತಿಕ ಬದ್ಧತೆ ಬೇಕು. ದಸಂಸದ ಇಂತಹ ಕಾರ್ಯಕ್ರಮಗಳು ಸಮುದಾಯವನ್ನು ಕಟ್ಟುವ ಆತ್ಮಾವಲೋಕನದ ಕಾರ್ಯಕ್ರಮಗಳಾಗಬೇಕು ಎಂದು ಕರೆ ನೀಡಿದರು.

ನಗಗೀಗ 72ವರ್ಷ ನನ್ನ ಹೋರಾಟಕ್ಕೆ 60 ವರ್ಷ ತುಂಬಿದೆ, ಶ್ರೀನಿವಾಸಪುರದ ಹಾಸ್ಟೆಲ್‌ನಲ್ಲಿ 6ನೇ ತರಗತಿ ಓದುತ್ತಿರುವಾಗ ಕಲ್ಲುಮಣ್ಣು ಸ್ವಚ್ಛಮಾಡದೆ ಮಾಡುತ್ತಿದ್ದ ಮುದ್ದೆ ಊಟವನ್ನು ಪ್ರಶ್ನಿಸಿದ್ದಕ್ಕೆ ವಾರ್ಡನ್ ಹೊಡೆದಿದ್ದರು. ಆಗ ಕೈಯಲ್ಲಿ ಮುದ್ದೆ ಹಿಡಿದೇ ಬಿಡಿಓ ಕಚೇರಿವರೆಗೆ ಹೋರಾಟ ಪ್ರಾರಂಭ ಮಾಡಿದ್ದೇ. ಈ ಮುದ್ದೆ ಚಳವಳಿ ಮೂಲಕ ವಾರ್ಡನ್ ಮೇಲೆ ಶಿಸ್ತು ಕ್ರಮವಾಗುವಂತೆ ಮಾಡಿದ್ದೆ. ಇಲ್ಲಿಂದ ನನ್ನ ಹೋರಾಟ ಪ್ರಾರಂಭ. ಆಗ ಡಿಎಸ್‌ಎಸ್‌ನ ಎನ್.ಶಿವಣ್ಣ ಅವರ ತಾಯಿ ನಮ್ಮ ಹಾಸ್ಟೆಲ್‌ನಲ್ಲಿ ಆಹಾರ ಧಾನ್ಯ ಸ್ವಚ್ಛ ಮಾಡುವ ಕೆಲಸಕ್ಕೆ ಸೇರಿದ್ದರು ಎಂದು ಸ್ಮರಿಸಿದರು.


ಪ್ರೊ.ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಹುಟ್ಟಿಕೊಂಡ ದಸಂಸದಲ್ಲಿ ವಿದ್ಯಾರ್ಥಿ ನಾಯಕನಾಗಿದ್ದಾಗ ರಾಮ್‌ದಾಸ್ ಅಠವಳೆ, ಸವಿತಾ ಅಂಬೇಡ್ಕರ್ ಅವರನ್ನು ಕೋಲಾರಕ್ಕೆ ಕರೆಸಿ ನಚಿಕೇತ ನಿಲಯದಲ್ಲಿ ರಾಜ್ಯ ಮಟ್ಟದ ಪ್ರಥಮ ವಿದ್ಯಾರ್ಥಿ ಸಮ್ಮೇಳನ ಆಯೋಜನೆ, ಟೌನ್‌ಹಾಲ್ ಸರ್ಕಲ್‌ನಲ್ಲಿ ದಲೇಕ ಜಿಲ್ಲಾ ಸಮ್ಮೇಳನ ನಡೆಸಿದ್ದು, ಮಾಲೂರು ಹುಣಸೀಕೋಟೆ ಶೇಷಗಿರಿಯಪ್ಪನ ಕೊಲೆ ಖಂಡಿಸಿ ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಐತಿಹಾಸಿಕ ಕಾಲ್ನಡಿಗೆ ಜಾಥಾ, ಗೌರಿಬಿದನೂರಿನ ಎಚ್.ನಾಗಸಂದ್ರ ಜೀತವಿಮುಕ್ತಿ ಹೋರಾಟ, ಸೇರಿ ನಿರಂತರ 53 ವರ್ಷಗಳ ದಲಿತ ಹೋರಾಟವು ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ದಲಿತ ಚೇತನ ಪ್ರಶಸ್ತಿ ಕೊಡ ಮಾಡುವವರೆಗೆ ಬಂದು ನಿಂತಿದೆ ಎಂದರು.

ಇಂದು ವಿಷಮಯ ಪರಿಸ್ಥಿತಿಯಿದೆ. ನಾವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಅಂಬೇಡ್ಕರ್ ಸಿದ್ಧಾಂತ ಮೈಗೂಡಿಸಿಕೊಂಡು ಸಾಗಬೇಕು. 101 ಜಾತಿ ಜಗಳ ರೋಸಿ ಹೋಗಿದೆ. 101 ಎಸ್ಸಿ ಮತ್ತು 51 ಎಸ್ಟಿ ಒಟ್ಟುಗೂಡಿ ಸಾಗಬೇಕಿದೆ. ಒಳಮೀಸಲಾತಿ ಎಂಬುದು ಮೇಲ್ಜಾತಿಗಳ ಹುನ್ನಾರವಿದು. ಇದಕ್ಕೆ ಬಲಿಯಾಗಬೇಡಿ. ದಲಿತ ಮುಖ್ಯಮಂತ್ರಿ ಆಗಬೇಕು ಎಂಬ ಹೋರಾಟ ಪ್ರಾರಂಭ ಆಗಿದೆ.ಇದನ್ನು ಸಮರ್ಥವಾಗಿ ಮುನ್ನಡೆಸೋಣ,ಈ 50ವರ್ಷ ಚಳವಳಿಗಾಗಿ ಜೀವತೇದ ಎಲ್ಲಾ ಹೋರಾಟಗಾರರಿಗೆ ಸನ್ಮಾನ ಆಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಡಾ.ಎಂ.ವೆಂಕಟಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಬಲಗೈ ಜಾತಿಗಳ ಒಕ್ಕೂಟದ ಸಲಹಾ ಸಮಿತಿ ಅಧ್ಯಕ್ಷ ಏಡುಕೊಂಡಲ ಶ್ರೀನಿವಾಸ್, ದಸಂಸ ರಾಜ್ಯ ಮುಖಂಡ ಸುದಾ ವೆಂಕಟೇಶ್, ಡಾ.ಶ್ರೀನಿವಾಸ್, ಬಿ.ವಿ.ಆನಂದ್,ಗಾಯಕ ಗಾ.ನ.ಅಶ್ವತ್ಥ್, ಎಸ್‌ಎಸ್‌ಡಿ ರಾಜ್ಯ ಉಪಾಧ್ಯಕ್ಷ ಪಿಳ್ಳರಾಜು ಬೋಸು, ಬೆಂಗ್ರಾ. ಜಿಲ್ಲಾಧ್ಯಕ್ಷ ಚಂದ್ರಶೇಖರ್,ರಾಜ್ಯ ಮಹಿಳಾ ಅಧ್ಯಕ್ಷ ಶೋಭ, ಮುಖಂಡ ವೆಂಕಟ್.ಡಿ. ಮತ್ತಿತರರು ಇದ್ದರು.

ಸಿಕೆಬಿ-6 ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕ್ರಮದಲ್ಲಿ ಡಾ.ಎಂ.ವೆಂಕಟಸ್ವಾಮಿ ಅವರಿಗೆ ದಲಿತ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು