ಚನ್ನಪಟ್ಟಣ ಟಿಕೆಟ್ : ಡಾ.ಸಿ.ಎನ್.ಮಂಜುನಾಥ್ ದಂಪತಿ ಸಮೇತ ನನಗೆ ಬೆಂಬಲ : ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

| Published : Sep 16 2024, 01:53 AM IST / Updated: Sep 16 2024, 12:08 PM IST

CP Yogeshwar
ಚನ್ನಪಟ್ಟಣ ಟಿಕೆಟ್ : ಡಾ.ಸಿ.ಎನ್.ಮಂಜುನಾಥ್ ದಂಪತಿ ಸಮೇತ ನನಗೆ ಬೆಂಬಲ : ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಬೆಂಬಲವಿದೆ ಎಂದು ತಿಳಿಸಿದ್ದಾರೆ. ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದು, ಟಿಕೆಟ್ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚನ್ನಪಟ್ಟಣ: ಉಪ ಚುನಾವಣೆ ಟಿಕೆಟ್ ವಿಚಾರವಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ನನ್ನ ಪರವಾಗಿದ್ದಾರೆ.

ಅವರು ದಂಪತಿ ಸಮೇತ ನನಗೆ ಬೆಂಬಲ ನೀಡುತ್ತಿದ್ದು, ಅವರ ಆಶೀರ್ವಾದ ಯಾವಾಗಲೂ ನನ್ನ ಜೊತೆ ಇರುತ್ತದೆ. ಹಾಗಾಗಿ ಅವರ ಮೇಲೆ ನನಗೆ ಸದಾ ಗೌರವ ಇದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಐದು ಪಂಚಾಯ್ತಿ ವ್ಯಾಪ್ತಿಯ ಪ್ರಮುಖರ ಸಭೆ ಮಾಡಿದ್ದೇನೆ. ಬೆಳಿಗ್ಗೆ ಟೌನ್ ವ್ಯಾಪ್ತಿಯ ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದೀನಿ. ಬುಧವಾರದಿಂದ ಹಳ್ಳಿಗಳಿಗೆ ಹೋಗಿ ಜನರನ್ನು ಭೇಟಿ ಆಗುತ್ತೇನೆ. ಜನ ನನಗೆ ಸೂಕ್ತ ಸ್ಪಂದನೆ ನೀಡುತ್ತಿದ್ದಾರೆ. ಎನ್ ಡಿಎ ಅಭ್ಯರ್ಥಿ ಆಗಿ ನಾನು ಬರುತ್ತೇನೆ. ಆಶೀರ್ವಾದ ಮಾಡಿ ಅಂತ ಕೇಳುತ್ತಿದ್ದೇನೆ.ಇದಕ್ಕೆ ಜನರ ಪ್ರತಿಕ್ರಿಯೆ ಚೆನ್ನಾಗಿ ಸಿಗುತ್ತಿದೆ ಎಂದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಆಪರೇಷನ್ ಹಸ್ತ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ದುಡ್ಡುಕೊಟ್ಟು ಮುಖಂಡರ ಸೆಳೆಯುವ ಕೆಲಸ ನಡೆಯುತ್ತಿದೆ. ಸಂಸತ್ ಚುನಾವಣೆಯಲ್ಲಿ ನಗರಸಭೆ ಸದಸ್ಯರನ್ನು ಸೆಳೆದಿದ್ದರು. ಆದರೆ, ಅವರು ಕೂಡಾ ಈಗ ಮಾನಸಿಕವಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡಾ ಸಭೆ ಮಾಡುತ್ತಿದ್ದಾರೆ, ನಾನು ಸಭೆ ಮಾಡುತ್ತಿದ್ದೇನೆ. ಎರಡೂ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ.

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಚುನಾವಣೆ ಘೋಷಣೆ ಆದಮೇಲೆ ಇದಕ್ಕೆಲ್ಲ ಉತ್ತರ ಸಿಗುತ್ತದೆ. ನೂರಕ್ಕೆ ನೂರುಭಾಗ ಟಿಕೆಟ್ ಸಿಗುತ್ತದೆ ಎಂದು ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಜಾತಿನಿಂದನೆ ಆರೋಪದಡಿ ಶಾಸಕ ಮುನಿರತ್ನ ಬಂಧನವಾಗಿರುವ ವಿಚಾರವನ್ನು ನಾನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಇದು ರಾಜಕೀಯ ಪ್ರೇರಿತವಾ ಅಥವಾ ಅವರು ಅಪರಾಧ ಮಾಡಿದ್ದಾರಾ ಗೊತ್ತಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ. ಅದು ನಿಜವಾಗಿಯೂ ಅವರ ಆಡಿಯೋನಾ, ಅದು ಖಾತ್ರಿ ಆಗಿದ್ಯಾ. ನಮ್ಮ ನಾಯಕರು ಆರ್.ಅಶೋಕ್ ಇದು ರಾಜಕೀಯ ಪ್ರೇರಿತ ಅಂತ ಹೇಳಿದ್ದಾರೆ. ಮುನಿರತ್ನ ಅವರು ಸಮಾಜ ವಿರೋಧಿ ಹೇಳಿಕೆ ನೀಡಿದ್ದರೆ ಅದಕ್ಕೆ ಕ್ರಮ ಆಗಲಿ.

- ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯರು