ಫುಟ್‌ಪಾತ ಒತ್ತುವರಿ ತೆರವಿಗೆ ಮುಂದಾದ ಪುರಸಭೆ

| Published : Jul 10 2024, 12:30 AM IST

ಸಾರಾಂಶ

ದರ್ಗಾದ ಹತ್ತಿರದ ಅಂಗಡಿಕಾರರು ಫುಟ್‌ಪಾತ್‌ನ್ನು ಅತಿಕ್ರಮಣ ಮಾಡಿಕೊಳ್ಳುವುದರಿಂದ ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆ

ಲಕ್ಷ್ಮೇಶ್ವರ: ಪಟ್ಟಣದ ದೂದಪೀರ್ ದರ್ಗಾದ ಹತ್ತಿರ ಹಲವು ವರ್ಷಗಳಿಂದ ಫುಟ್‌ಪಾತ್‌ನ್ನು ಹಲವು ಅಂಗಡಿಕಾರರು ಅತಿಕ್ರಮಣ ಮಾಡಿಕೊಂಡಿದ್ದ ಜಾಗೆಯನ್ನು ತೆರವು ಮಾಡುವ ಕಾರ್ಯಕ್ಕೆ ಪುರಸಭೆಯ ಅಧಿಕಾರಿಗಳು ಮುಂದಾದ ಘಟನೆ ಮಂಗಳವಾರ ನಡೆಯಿತು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾಜಿ ಶಾಸಕ ಗಂಗಣ್ಣ ಮಾತನಾಡಿ, ಫುಟ್‌ಪಾತ್ ಜಾಗೆಯನ್ನು ಯಾರೇ ಅತಿಕ್ರಮಣ ಮಾಡಿಕೊಂಡಿದ್ದರು ಅದು ಸರಿಯಲ್ಲ. ಇತಿಹಾಸ ಪ್ರಸಿದ್ಧ ದೂದಪೀರಾ ದರ್ಗಾಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ದರ್ಗಾದ ಹತ್ತಿರದ ಅಂಗಡಿಕಾರರು ಫುಟ್‌ಪಾತ್‌ನ್ನು ಅತಿಕ್ರಮಣ ಮಾಡಿಕೊಳ್ಳುವುದರಿಂದ ಸುಗಮ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತದೆ, ಪುರಸಭೆಯು ಗುರುತಿಸಿರುವ ಜಾಗೆ ಬಿಟ್ಟು ನೀವು ನಿಮ್ಮ ವ್ಯಾಪಾರ ಮಾಡಿಕೊಳ್ಳಬೇಕು. ಇದರಿಂದ ಬೇರೆಯವರಿಗೆ ತೊಂದರೆಯಾಗುವುದು ತಪ್ಪುತ್ತದೆ. ಅಲ್ಲದೆ ಪೌರಕಾರ್ಮಿಕರು ಚರಂಡಿಯಲ್ಲಿ ಕಸ ತೆಗೆಯುವಲ್ಲಿ ತೊಂದರೆ ಅನುಭವಿಸುವಂತಾಗಿದೆ, ಆದ್ದರಿಂದ ಸ್ವಚ್ಛತೆಯ ಸಮಸ್ಯೆ ಎದುರಾಗಿದೆ, ಈಗ ಎಲ್ಲೆಡೆ ಸ್ವಚ್ಛತೆಯ ಕೊರತೆಯಿಂದ ಡೆಂಘೀಯಂತ ಮಹಾಮಾರಿ ಒಕ್ಕರಿಸುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಪುರಸಭೆಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಫುಟ್‌ಪಾತ್ ಜಾಗೆಯನ್ನು ತೆರವುಗೊಳಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಪುರಸಭೆಯ ಜೆಸಿಬಿ ಯಂತ್ರಗಳು ಅತಿಕ್ರಮಣ ಮಾಡಿಕೊಂಡಿದ್ದ ಜಾಗೆಯನ್ನು ಹಾಗೂ ಅಂಗಡಿಯ ಮುಂದೆ ಹಾಕಲಾಗಿದ್ದ ತಗಡಿನ ಶೆಡ್ಡುಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದವು.

ದೂದ್‌ಪೀರಾ ದರ್ಗಾದ ಮುಂದೆ ಇರುವ ಅಂಗಡಿಗಳು ಚರಂಡಿಯ ಮೇಲೆ ಕಟ್ಟಲಾಗಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಪುರಸಭೆಯ ಸಿಬ್ಬಂದಿಗಳು ನಿರತರಾಗುತ್ತಿದ್ದಂತೆಯೇ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿತು. ಈ ವೇಳೆ ಪಿಎಸ್‌ಐ ಈರಪ್ಪ ರಿತ್ತಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಕಾರ್ಯ ಮಾಡಿದರು.

ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ, ಹನಮಂತಪ್ಪ ನಂದೆಣ್ಣವರ, ಎಂ.ಆರ್. ಪಾಟೀಲ, ನವೀನ ಬೆಳ್ಳಟ್ಟಿ, ಮಂಜುನಾಥ ಮಾಗಡಿ, ದಾದಾಪೀರ್ ಮುಚ್ಚಾಲೆ, ನಿಂಗಪ್ಪ ಬನ್ನಿ, ಇಕ್ಬಾಲ್ ಸೂರಣಗಿ, ಪ್ರಕಾಶ ಮಾದನೂರ ಇದ್ದರು.