ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಬದಾಯಿಸಿರುವುದನ್ನು ಖಂಡಿಸಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ನಗರಸಭೆ ಆವರಣದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಯಿತು.

ಸಾಗರ: ಕೇಂದ್ರ ಸರ್ಕಾರ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಬದಾಯಿಸಿರುವುದನ್ನು ಖಂಡಿಸಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ನಗರಸಭೆ ಆವರಣದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಗ್ರಾಮೀಣ ಜನರ ಕೈಗೆ ಉದ್ಯೋಗ ಮತ್ತು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ಡಾ.ಮನಮೋಹನ್ ಸಿಂಗ್ ಅವರು ಉದ್ಯೋಗ ಖಾತ್ರಿ ಯೋಜನೆಯನ್ನು ಮಹಾತ್ಮಾ ಗಾಂಧಿಜಿಯವರ ಹೆಸರಿನಲ್ಲಿ ಅನುಷ್ಠಾನಕ್ಕೆ ತಂದರು. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಗಾಂಧಿ ಅವರ ಹೆಸರನ್ನು ತೆಗೆದು ಅವರಿಗೆ ಅವಮಾನ ಮಾಡುತ್ತಿದೆ. ಹಿಂದಿನಿಂದಲೂ ಬಿಜೆಪಿಯವರು ಗಾಂಧಿಜಿಯವರಿಗೆ ಅವಮಾನ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿಜಿಯವರನ್ನು ಗುಂಡಿಟ್ಟು ಕೊಂದ ನಂತರವೂ ಬಿಜೆಪಿಗೆ ಗಾಂಧಿ ಅವರ ಹೆಸರನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಖಾತ್ರಿ ಹೆಸರು ಬದಲಾವಣೆ ಪ್ರಧಾನಿ ಮೋದಿ ಅವರ ಸಣ್ಣತನದ ರಾಜಕೀಯಕ್ಕೆ ಸಾಕ್ಷಿಯಾಗಿದೆ ಎಂದರಲ್ಲದೆ ಕೇಂದ್ರ ಸರ್ಕಾರ ಯೋಜನೆಯ ಹೆಸರು ಬದಲಾವಣೆ ಮಾಡಿರುವುದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ಉದ್ಯೋಗಖಾತ್ರಿ ಯೋಜನೆ ಹೆಸರು ಬದಲಾವಣೆಯ ಹಿಂದೆ ಗಾಂಧೀಜಿ ಅವರಿಗೆ ಅಗೌರವ ತೋರಿಸುವ ಕೇಂದ್ರದ ಧೋರಣೆ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರ ಮಹಾತ್ಮಾ ಗಾಂಧೀಜಿ ಅವರ ಹೆಸರು ಅಳಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಬ್ಲಾಕ್ ಅಧ್ಯಕ್ಷ ಸುರೇಶಬಾಬು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಮುಖರಾದ ಅನಿತಾ ಕುಮಾರಿ, ಗಣಪತಿ ಮಂಡಗಳಲೆ, ಸೋಮಶೇಖರ ಲ್ಯಾವಿಗೆರೆ ಅಶೋಕ ಬೇಳೂರು, ಮಧುಮಾಲತಿ, ಸದ್ದಾಂ, ಚಂದ್ರಮೌಳಿ, ಬಿ.ಎ.ಇಂದೂಧರ ಬೇಸೂರು, ಕೆ.ಎಂ.ಸೂರ್ಯನಾರಾಯಣ, ಉಷಾ.ಎನ್, ಪ್ರಭಾವತಿ ಇನ್ನಿತರರು ಹಾಜರಿದ್ದರು.