ಕೂಲಿಕಾರರ ಕೊರತೆ: ಒಣಗುತ್ತಿರುವ ಹೆಸರು ಬೆಳೆ

| Published : Jul 29 2024, 12:51 AM IST / Updated: Jul 29 2024, 12:52 AM IST

ಸಾರಾಂಶ

ಮುಂಗಾರು ಹಂಗಾಮಿನ ಮುಖ್ಯ ವಾಣಿಜ್ಯ ಬೆಳೆಯಾದ ಹೆಸರು ಕಟಾವು ಮಾಡಲು (ಬುಡ್ಡಿ ಬಿಡಿಸಲು) ಕೂಲಿಕಾರರ ತೀವ್ರ ಕೊರತೆ ಎದುರಾಗಿದ್ದು, ಹೆಸರು ಕಾಯಿಗಳು ಗಿಡಗಳಲ್ಲೇ ಒಣಗುತ್ತಿವೆ.

ಇಳುವರಿ ಕುಂಠಿತ । ಕೃಷಿ ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೇಟು । ರೈತರಿಗೆ ಹೊರೆ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮುಂಗಾರು ಹಂಗಾಮಿನ ಮುಖ್ಯ ವಾಣಿಜ್ಯ ಬೆಳೆಯಾದ ಹೆಸರು ಕಟಾವು ಮಾಡಲು (ಬುಡ್ಡಿ ಬಿಡಿಸಲು) ಕೂಲಿಕಾರರ ತೀವ್ರ ಕೊರತೆ ಎದುರಾಗಿದ್ದು, ಹೆಸರು ಕಾಯಿಗಳು ಗಿಡಗಳಲ್ಲೇ ಒಣಗುತ್ತಿವೆ.

ಪಟ್ಟಣ ಸೇರಿದಂತೆ ತಾಲೂಕಿನ ಹನುಮಸಾಗರ, ಹನುಮನಾಳ, ತಾವರಗೇರಾ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಒಟ್ಟು 3,480 ಹೆಕ್ಟೇರ್ (ಶೇ. 91.92) ಹೆಸರು ಬೆಳೆಯಲಾಗಿದೆ. ಸದ್ಯ ಬೆಳೆ ಕೈಗೆ ಬಂದಿದೆ. ಒಂದೆಡೆ ಜಿಟಿಜಿಟಿ ಮಳೆಯ ಕಾಟ ಹಾಗೂ ಇನ್ನೊಂದೆಡೆ ಕೂಲಿಕಾರರ ಕೊರತೆ ಕಾಡುತ್ತಿದ್ದು, ಹೆಸರು ಬೆಳೆದ ರೈತರು ಆತಂಕದಲ್ಲಿದ್ದಾರೆ.

ರೈತರಿಗೆ ಹೊರೆ:

ತಾಲೂಕಿನಾದ್ಯಂತ ಉತ್ತಮವಾಗಿ ಮುಂಗಾರು ಮಳೆ ಸುರಿದಿದ್ದರಿಂದ ರೈತರು ಹೆಸರು ಬೆಳೆ ಬಿತ್ತನೆ ಮಾಡಿದ್ದಾರೆ. ಈಗ ಹೆಸರು ಬೆಳೆ ಕೈ ಸೇರುವ ಹೊತ್ತಿಗೆ ಕೂಲಿಕಾರರ ಕೊರತೆ ಎದುರಾಗಿದೆ. ಈ ಹಿನ್ನೆಲೆ ಕೃಷಿ ಕೂಲಿಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ₹200 ಇರುವ ಕೂಲಿಯು ಈ ವರ್ಷ ₹300-350ಕ್ಕೆ ಏರಿಕೆಯಾಗಿದೆ. ಆದರೂ ಆಳುಗಳು ಸಿಗುತ್ತಿಲ್ಲ. ಒಂದೆಡೆ ದುಡಿಯುವ ಕೈಗಳಿಗೆ ಸಂತಸ ಉಂಟಾದರೆ ರೈತರಿಗೆ ಹೊರೆಯಾಗಿದೆ. ಒಣಗಿದ ಹೆಸರು ಕಾಯಿ ಬಿಡಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಗಾಯದ ಮೇಲೆ ಬರೆ:

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಿತ್ತನೆಯಾದ ಹೆಸರು ಬೆಳೆಗೆ ಹಳದಿ ಬಂಜೆತನದ ರೋಗ ಬಂದಿದೆ. ಕಾಯಿಗೆ ಹತ್ತಿದ ಹುಳುಬಾಧೆ ನಿವಾರಣೆಗೆ ರೈತರು ದುಬಾರಿ ರಾಸಾಯನಿಕ ಖರೀದಿಸಿ ಮೂರು ನಾಲ್ಕು ಬಾರಿ ಸಿಂಪಡಿಸಿದ್ದರೂ ಬಹಳಷ್ಟು ಕಾಯಿಗಳು ಹಾಳಾಗಿವೆ. ಈಗ ಕಾಯಿ ಬಿಡಿಸಬೇಕೆಂದರೆ ಕೂಲಿಕಾರ್ಮಿಕರ ಕೊರತೆ ಎದುರಾಗಿದೆ. ಇನ್ನೊಂದೆಡೆ ಜಿಟಿಜಿಟಿ ಮಳೆಯೂ ಅಡ್ಡಿಯಾಗಿದ್ದು, ಬಿಸಿಲು ಬಿದ್ದರೆ ಕಾಯಿಗಳು ಸಿಡಿಯುತ್ತವೆ.

ಬಹುತೇಕ ಸ್ಥಳಿಯ ಕೂಲಿಕಾರ್ಮಿಕರು ಹತ್ತಿ ಪ್ಲಾಟ್ ಸೇರಿದಂತೆ ವಿವಿಧ ಕೆಲಸಗಳಿಗೆ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನರೇಗಾ ಕಾಮಗಾರಿಗಳು ನಡೆಯುತ್ತಿದ್ದು, ಆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನರೇಗಾ ಕುಲಿ ₹350. ಕೃಷಿ ಕೂಲಿ ₹ 300. ಹಾಗಾಗಿ ಕೃಷಿ ಕೆಲಸ ಕಾರ್ಯಗಳಿಗೆ ಕಾರ್ಮಿಕರು ಸಿಗದಂತಾಗಿದೆ.

ಕೃಷಿ ಕೂಲಿಕಾರರಿಗೆ ಬೇಡಿಕೆ ಹೆಚ್ಚಾಗಿದೆ. ₹ 200 ಇದ್ದ ಕೂಲಿಯನ್ನು 300ಕ್ಕೆ ಏರಿಸಲಾಗಿದೆ. ಹೊಲಕ್ಕೆ ಕರೆದುಕೊಂಡು ಹೋಗಿ ಬರಲು ವಾಹನ ವ್ಯವಸ್ಥೆ ಇದ್ದರೂ ಸರಿಯಾಗಿ ಕೂಲಿಕಾರರು ಸಿಗುತ್ತಿಲ್ಲ ದೋಟಿಹಾಳ ಗ್ರಾಮದ ರೈತ ಶರಣಗೌಡ ಪಾಟೀಲ ತಿಳಿಸಿದ್ದಾರೆ.