ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದಿದ್ದ ಹೆಸರು ಬೆಳೆ ಸಂಪೂರ್ಣ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅದರಲ್ಲಿಯೂ ಗುರುವಾರ ಮತ್ತು ಶುಕ್ರವಾರ ರಾತ್ರಿ ಸುರಿದ ಮಳೆ ವ್ಯಾಪಕ ಹಾನಿಯುಂಟು ಮಾಡಿದೆ.ಜಿಲ್ಲೆಯ ರೋಣ ತಾಲೂಕಿನ ಬಹುತೇಕ ಭಾಗವು ಎರಿ (ಕಪ್ಪು) ಭೂಮಿ ಹೊಂದಿದ್ದು, ಅತ್ಯುತ್ತಮವಾದ ಕಪ್ಪು ಮಣ್ಣಿನ ಸಮತಟ್ಟಾದ ಜಮೀನಗಳನ್ನು ಹೊಂದಿರುವ ಭಾಗವಾಗಿದೆ. ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಹೆಸರು ಬಿತ್ತನೆ ಮಾಡಿದ್ದು, ಈಗ ಕಟಾವಿಗೆ ಬಂದಿದ್ದ ಹೆಸರು ಬೆಳೆ ಮಳೆಯಲ್ಲಿ ಕೊಳೆಯುತ್ತಿದೆ. ಕೆರೆಯಂತಾಗಿ ಹೊಲಗಳಲ್ಲಿ ಶೇಂಗಾ, ಗೋವಿನ ಜೋಳ ಮುಂತಾದ ಹಂಗಾಮಿನ ಬೆಳೆಗಳು ಜಲಾವೃತಗೊಂಡಿವೆ. ಹೆಸರಿಗೆ ಹಳದಿ ರೋಗ ಮತ್ತು ಕೀಟ ಸಮಸ್ಯೆ ಹೆಚ್ಚಾಗಿ, ಉಳಿದಿದ್ದ ಬೆಳೆಯೂ ಕೊಳೆಯುತ್ತಿದೆ.
ಅಪಾರ ಹಾನಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ (ರೋಹಿಣಿ ಮಳೆಗೆ) ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ ಹಿನ್ನೆಲೆಯಲ್ಲಿ 123956 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿತ್ತು. ಉತ್ತಮ ಇಳುವರಿಯ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ. ಸಾಮಾನ್ಯವಾಗಿ ಒಂದು ಎಕರೆಗೆ 4ರಿಂದ 8 ಕ್ವಿಂಟಾಲ್ ವರೆಗೂ ಹೆಸರು ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರೀಗ ಪ್ರತಿ ಎಕರೆ 50ರಿಂದ 60 ಕಿಲೋ ಸಿಗದಂತಾ ಸ್ಥಿತಿ ನಿರ್ಮಾಣವಾಗಿದ್ದು, ಹೆಸರು ಬಿತ್ತನೆ ಸೇರಿದಂತೆ ಮುಂಗಾರು ಬಿತ್ತನೆಗಾಗಿ ರೈತರು ಮಾಡಿಕೊಂಡ ಸಾಲ ತೀರಿಸುವ ಕನಸು ಕೂಡ ದೂರವಾದಂತಾಗಿದೆ.ಕಟಾವು ಯಂತ್ರಗಳಿಗೂ ಕೆಲಸವಿಲ್ಲ: ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗನೇ ಹೆಸರು ಕಟಾವು ಮಾಡುವ ಉದ್ದೇಶದಿಂದ ಕಟಾವು ಯಂತ್ರಗಳನ್ನು ಆಶ್ರಯಿಸಿದರು. ಆದರೆ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ರೈತರು, ಈಗ ಜಮೀನಿಗೆ ಕಾಲಿಡಲೂ ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೊಲಗಳಲ್ಲಿ ಅತಿಯಾದ ತೇವಾಂಶದಿಂದಾಗಿ ಯಂತ್ರಗಳು ಕೂಡ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲಿಯೂ ಜಿಲ್ಲೆಯ ರೋಣ ಬೆಳವಣಿಕಿ, ಮಾಳವಾಡ, ಕೌಜಗೇರಿ, ಯಾವಗಲ್, ಮಲ್ಲಾಪೂರ ಮೊದಲಾದ ಗ್ರಾಮಗಳಲ್ಲಿ ಹಾರ್ವೆಸ್ಟರ್ ಯಂತ್ರಗಳು ಕಳೆದ ಐದು ದಿನಗಳಿಂದ ಕೆಲಸವಿಲ್ಲದೆ ನಿಂತಿವೆ.
ರೈತರ ಅಳಲು: ಸಾಲ ಮಾಡಿ ಹೆಸರು ಬಿತ್ತನೆ ಮಾಡಿ, ಅದನ್ನು ಮೂರು ತಿಂಗಳಿಂದ ಕಸ ಸ್ವಚ್ಛಗೊಳಿಸುವುದು ಎಡಿ ಹೊಡೆಯುವುದು ಸೇರಿದಂತೆ ಹಲವಾರು ರೀತಿಯಲ್ಲಿ ಖರ್ಚು ಮಾಡಿದ್ದೇವೆ, ಆದರೀಗ ಮಾಡಿದ ಖರ್ಚು ಕೂಡಾ ಮರಳಿ ಬರದಂತಾಗಿದೆ. ಯಾರಿಗೆ ಹೇಳೋದು ಎನ್ನುವುದೇ ತಿಳಿಯುತ್ತಿಲ್ಲ. ಸರ್ಕಾರದಿಂದ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಕೊಡುವ ಕೆಲಸವಾಗಬೇಕಿದೆ ಎಂದು ಬೆಳವಣಕಿ ಗ್ರಾಮದ ಪ್ರವೀಣ ಹಕ್ಕಾಪಕ್ಕಿ ಹೇಳಿದರು.ರೈತರ ಮುಖ್ಯ ಬೇಡಿಕೆಗಳು: ತಹಸೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳಿಂದ ತಕ್ಷಣ ಪರಿಶೀಲನೆ ನಡೆಯಬೇಕು. ಬೆಳೆ ವಿಮೆ ಅಡಿಯಲ್ಲಿ ನಷ್ಟದ ದಾಖಲೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಕೂಡಲೇ ತಾತ್ಕಾಲಿಕ ಪರಿಹಾರ ಧನ ನೀಡುವುದು ಸೇರಿದಂತೆ ಇನ್ನುಳಿದ ಬೆಳೆಗಳ ಬಗ್ಗೆಯೂ ಸಮೀಕ್ಷೆ ನಡೆಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.