ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸಿದ್ದ ಹೆಸರು ಕಾಳು ಹಾಗೂ ಮೆಂತ್ಯೆ ಬೀಜಗಳು ಇದೀಗ ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಕೃಷಿ ವಿಶ್ವವಿದ್ಯಾಲಯಕ್ಕೆ ಮರಳಿವೆ.ಕಳೆದ ಜೂನ್ 25 ರಿಂದ 18 ದಿನಗಳ ಕಾಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ಹೋದ ಸಂದರ್ಭದಲ್ಲಿ ಕೃಷಿ ವಿವಿ ನೀಡಿದ್ದ ಹೆಸರು ಹಾಗೂ ಮೆಂತ್ಯೆ ಬೀಜಗಳನ್ನು ಸಹ ತೆಗೆದುಕೊಂಡ ಹೋಗಿದ್ದರು. ಬೀಜಗಳಿಗೆ ನೀರು ಸೇರಿಸುವ ಮೂಲಕ ಮೊಳಕೆಯೊಡೆಯುವಂತೆ ಮಾಡಿ ನಂತರ -80 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅವುಗಳನ್ನು ಫ್ರೀಜ್ ಮಾಡಿ ಮರಳಿ ಜುಲೈ 15ಕ್ಕೆ ಭೂಮಿಗೆ ತಂದಿದ್ದರು. ಇದೀಗ ಅದೇ ಸ್ಥಿತಿಯಲ್ಲಿ ಬೀಜಗಳು ಕೃಷಿ ವಿವಿ ತಲುಪಿದ್ದು, ಇನ್ನಷ್ಟೇ ಸಂಶೋಧನೆ ಶುರುವಾಗಬೇಕಿದೆ.
ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ವಿಜ್ಞಾನಿ ಡಾ. ರವಿಕುಮಾರ ಹೊಸಮನಿ, ಗಗನಯಾತ್ರಿಗಳು ಹೆಚ್ಚಾಗಿ ಬಾಹ್ಯಾಕಾಶದಲ್ಲಿ ಪೌಷ್ಟಿಕಾಂಶದ ಕೊರತೆ ಸೇರಿದಂತೆ ಗಮನಾರ್ಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಪರಿಹಾರವಾಗಿ ಅಲ್ಲಿ ತಾಜಾ, ಮೊಳಕೆಯೊಡೆದ ಆಹಾರ ಮೂಲಗಳಾಗಿ ಬಳಸಲು ಹೆಸರು, ಮೆಂತ್ಯೆ ಬೀಜಗಳನ್ನು ಕಳುಹಿಸಲಾಗಿತ್ತು. ಅಲ್ಲಿ ಅವುಗಳು ಮೊಳಕೆಯೊಡೆದ ನಂತರ ಫ್ರೀಜ್ ಮಾಡಲಾಗಿದೆ. ಸದ್ಯ ಅವು ಫ್ರೀಜ್ ರೂಪದಲ್ಲಿ ನಮ್ಮ ಪ್ರಯೋಗಾಲಯ ತಲುಪಿವೆ. ಅವುಗಳ ಪೋಷಕಾಂಶ ಗುಣಮಟ್ಟವನ್ನು ಫೈಟೊಹಾರ್ಮೋನ್ ಡೈನಾಮಿಕ್ಸ್‌ನ ಬದಲಾವಣೆಗಳು ಮತ್ತು ಬಾಹ್ಯಾಕಾಶ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಕುರಿತು ಇನ್ನಷ್ಟೇ ನಾವು ಅಧ್ಯಯನ ಮಾಡಬೇಕಿದೆ ಎಂದರು.ಎರಡು ತಿಂಗಳು ಅಧ್ಯಯನ: ಸುಮಾರು ಎರಡು ತಿಂಗಳು ಕಾಲ ಅವುಗಳ ಅಧ್ಯಯನ ಮಾಡಿ, ಈ ಕಾಳುಗಳನ್ನು ಬಾಹ್ಯಾಕಾಶಕ್ಕೆ ಹೋಗುವ ಅಂತರಿಕ್ಷಯಾನಿಗಳು ಆಹಾರವಾಗಿ ಸೇವಿಸಲು ಸಹಕಾರಿಯಾಗಬಹುದಾ ಎಂಬುದನ್ನು ಸಂಶೋಧಿಸಬೇಕಿದೆ ಎನ್ನುತ್ತಾರೆ ಡಾ. ರವಿಕುಮಾರ.
ಸಲಾಡ್ ಸಸ್ಯಗಳಿಗಿಂತ ಹೆಚ್ಚಿನ ಆಹಾರ ಮೌಲ್ಯವನ್ನು ಈ ಕಾಳುಗಳು ಹೊಂದಿರುತ್ತವೆ. ಭಾರತೀಯ ಪಾಕ ಪದ್ಧತಿಯಲ್ಲಿ ವ್ಯಾಪಾಕವಾಗಿ ಬಳಸಲಾಗುವ ಹೆಸರುಕಾಳು, ಮೆಂತ್ಯೆ ಕಾಳುಗಳು ಅರೆ- ಶುಷ್ಕ ಪರಿಸ್ಥಿತಿಯಲ್ಲೂ ಬೆಳೆಯತ್ತವೆ. ಬಾಹ್ಯಾಕಾಶ ಕೃಷಿಗೆ ಸೂಕ್ತ ಎಂದು ನಂಬಲಾಗಿದೆ. ಮೆಂತ್ಯೆಯಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿಹೊಂದಿರುತ್ತದೆ. ಗಗನಯಾತ್ರಿಗಳಿಗೆ ಮೂತ್ರಪಿಂಡ ಕಲ್ಲಿನ ಸಮಸ್ಯೆ ಹೆಚ್ಚಿದ್ದು, ಈ ಕಾಳುಗಳಿಂದ ಈ ಅಪಾಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಎರಡು ಕಾಳುಗಳನ್ನು ಕೃಷಿ ವಿವಿ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿ ಇದೀಗ ಅವುಗಳ ಅಧ್ಯಯನ ಶುರು ಮಾಡಿದ್ದು, ಸಂಶೋಧನೆಯ ಫಲಿತಾಂಶಕ್ಕೆ ಕಾಯಬೇಕಷ್ಟೇ..!ಅಧ್ಯಯನದ ಸಲುವಾಗಿ ಕೃಷಿ ವಿವಿಯಿಂದ ಬಾಹ್ಯಾಕಾಶಕ್ಕೆ ಹೋಗಿದ್ದ ಹೆಸರು ಕಾಳು ಹಾಗೂ ಮೆಂತ್ಯೆ ಬೀಜಗಳೀಗ ಮೊಳಕೆಯೊಡೆದು ಮರಳಿ ನಮ್ಮ ಪ್ರಯೋಗಾಲಯ ತಲುಪಿವೆ. ಸದ್ಯ ಅವು ಬಾಹ್ಯಾಕಾಶದಲ್ಲಿದ್ದ ಸ್ಥಿತಿಯಲ್ಲಿಯೇ ಫ್ರೀಜ್ ರೂಪದಲ್ಲಿ ನಮ್ಮಲ್ಲಿದ್ದು, ನಮ್ಮ ವಿಜ್ಞಾನಿಗಳು ಪೌಷ್ಟಿಕಾಂಶ ಮತ್ತು ಶಾರೀರಿಕ ಮೌಲ್ಯಮಾಪನ ಮಾಡಲಿದ್ದಾರೆ. ಇದು ಧಾರವಾಡ ಕೃಷಿ ವಿವಿ ಹಮ್ಮೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ.ಎಲ್, ಪಾಟೀಲ ಹೇಳಿದರು.