ಸಾರಾಂಶ
ಕಲೆ, ಕಲಾವಿದ, ಗಾಯಕ ಎನ್ನದೆ ಸಮುದಾಯದಲ್ಲಿನ ವಿರಸವನ್ನು ದೂಡಿ ಸಮರಸವನ್ನು ಪ್ರೀತಿಯ ಮೂಲಕ ಹಂಚಿದ ಕವಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಹುಟ್ಟಿದ ಮನೆ ರಾಷ್ಟ್ರೀಯ ಸ್ಮಾರಕವಾಗಬೇಕಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ನವ್ಯ ಕಾವ್ಯ ಪರಂಪರೆಯಲ್ಲಿ ದಾಂಪತ್ಯ ಬೆಸುಗೆ ಹಾಕಿದ ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿ ಹೆಸರನ್ನು ಶಾಶ್ವತವಾಗಿ ಉಳಿಯುವ ಕೆಲಸವಾಗಬೇಕಿದೆ ಎಂದು ಅಂತಾರಾಷ್ಟ್ರೀಯ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ತಿಳಿಸಿದರು.ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ನೂತನ ಸದಸ್ಯರಿಗೆ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಕಲೆ, ಕಲಾವಿದ, ಗಾಯಕ ಎನ್ನದೆ ಸಮುದಾಯದಲ್ಲಿನ ವಿರಸವನ್ನು ದೂಡಿ ಸಮರಸವನ್ನು ಪ್ರೀತಿಯ ಮೂಲಕ ಹಂಚಿದ ಕವಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಹುಟ್ಟಿದ ಮನೆ ರಾಷ್ಟ್ರೀಯ ಸ್ಮಾರಕವಾಗಬೇಕಿದೆ ಎಂದರು.
ಟ್ರಸ್ಟಿ ಸುರೇಶ್ ಮಾತನಾಡಿ, ತನಗೆ ಅತ್ಯಂತ ಪ್ರೀತಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು. ಇವರ ಹುಟ್ಟಿದ ಮನೆ ಸ್ಮಾರಕವಾಗಲಿ. ಕಾವ್ಯಕ್ಕೆ ಸ್ಫೂರ್ತಿಯಾಗಿರುವ ಕೆರೆ ಕೆಎಸ್‌ನ ಸರೋವರ ನಾಮಕರಣ, ಬಯಲು ರಂಗಮಂದಿರ, ಕೆರೆ ಬಳಿ ವಾಕಿಂಗ್, ಜಾಗಿಂಗ್ ಪಾಥ್, ಬೋಟಿಂಗ್, ಸ್ವಾಗತ ಕಮಾನುಗಳು ಆಗಬೇಕಿದೆ. ಸರ್ಕಾರ ಹೆಚ್ಚು ಅನುದಾನ ನೀಡಿ ಕವಿಯ ನೆನಪು ಯುವಪೀಳಿಗೆಯಲ್ಲಿ ಚಿರಸ್ಥಾಯಿ ಆಗಲು ಶ್ರಮಿಸುವೆ ಎಂದರು.ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿಕೃಷ್ಣಮೂರ್ತಿ ಮಾತನಾಡಿ, ಕೆಎಸ್‌ನ ಕನ್ನಡ ಸಾರಸ್ವತ ಲೋಕದ ಬಲುದೊಡ್ಡ ಅಸ್ಮಿತೆ. ಅವರ ಹೆಸರಿನಲ್ಲಿ ಕೆರೆ ಹೆಸರು ನಾಮಾಂಕಿತವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕವಿಯ ಹೆಸರಿನಲ್ಲಿನ 2ನೇ ಕೆರೆ ಇದಾಗಲಿದೆ ಎಂದರು.
ಪ್ರೀತಿಯನ್ನೆ ಉಸಿರಾಗಿಸಿಕೊಂಡು ಬದುಕಿಗೆ ಪ್ರೀತಿಯ ಸಾರ ಬಡಿಸಿ ಪ್ರೀತಿ ವಿಶ್ವವನ್ನೆಗೆಲ್ಲುವ ಸಾಧನ ಎಂದು ತೋರಿಸಿಕೊಟ್ಟ ಕವಿಯ ಹೆಸರಿನಲ್ಲಿ ಕಿಕ್ಕೇರಿ ಹಬ್ಬ ದೊಡ್ಡಮಟ್ಟದಲ್ಲಿ ಆಗಬೇಕಿದೆ ಎಂದು ಮನದ ಇಂಗಿತ ವ್ಯಕ್ತಪಡಿಸಿದರು.ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೆಎಸ್‌ನ ದೊಡ್ಡ ಅಭಿಮಾನಿ ಆಗಿದ್ದಾರೆ. ಕಿಕ್ಕೇರಿ ಅಭಿವೃದ್ಧಿ ಜೊತೆ ಕವಿಯ ಹೆಸರಿನಲ್ಲಿ ಆಗಬೇಕಾದ ಯೋಜನೆಗಳನ್ನು ನನಸಾಗಿಸಲಿದ್ದಾರೆ ಎಂದರು.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಟ್ರಸ್ಟಿಗಳಾದ ಎಂ.ಎನ್. ಸುಬ್ಬಣ್ಣ, ಮೇಕಲಾ ವೆಂಕಟೇಶ್, ಕೆ.ವಿ. ಬಲರಾಮು ಮತ್ತಿತರರಿದ್ದರು.