ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಲೋಕಸಭೆ ಚುನಾವಣೆಗೆ ಮತದಾರರ ಪಟ್ಟಿ ಸಿದ್ಧವಾಗುತ್ತಿದ್ದು ಇದರಲ್ಲಿ ಮೃತರ ಹೆಸರುಗಳು ಇನ್ನೂ ಇರುವುದು ವಿಪರ್ಯಾಸ ಹಾಗೂ ಹಾಸ್ಯಾಸ್ಪದ ವಿಚಾರವಾಗಿದೆ.ಮೃತಪಟ್ಟು ಹಲವು ವರ್ಷ ಕಳೆದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕಳೆದ ಹಲವು ವರ್ಷಗಳಿಂದ ಮುಂದುವರಿಯುತ್ತಲೇ ಬಂದಿರುವ ಇದು ಈ ಬಾರಿಯೂ ಪುನರಾವರ್ತನೆಯಾಗಿದೆ. ಕೆಲವು ಮತದಾರರ ಪಟ್ಟಿಯಲ್ಲಿ ಶೇ.5ಕ್ಕಿಂತಲೂ ಅಧಿಕ ಮೃತರ ಹೆಸರುಗಳು ಇವೆ.
ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತಿದ್ದರೂ ಆ ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಇದು ಹಿಡಿದ ಕೈಗನ್ನಡಿಯಾಗಿದೆ.ಮತದಾರರ ಪಟ್ಟಿಯಲ್ಲಿ ಮೃತರ ಹೆಸರು ಇರುವುದು ಮತದಾರರ ಸಂಖ್ಯೆ, ಮತದಾನದ ಮೇಲೂ ಪರಿಣಾಮ ಬೀರುತ್ತದೆ ಹಾಗೂ ಮತದಾನದ ಶೇಕಡಾವಾರು ಲೆಕ್ಕಾಚಾರದ ಮೇಲೂ ಪರಿಣಾಮ ಬೀರುತ್ತದೆ.
ಮೃತಪಟ್ಟವರ ಮರಣ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆ ಮೂಲಕವೇ ಪಡೆಯಲಾಗುತ್ತದೆ. ಮತದಾರರ ಪಟ್ಟಿ ತಯಾರಿಯೂ ಇವರದೇ ಜವಾಬ್ದಾರಿ. ಮತದಾರರ ಪಟ್ಟಿ ತಯಾರಿಸುವ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯ, ಸ್ಥಳೀಯ ವಿಚಾರಗಳ ಕುರಿತ ಜ್ಞಾನದ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಕೇವಲ ದಾಖಲೆಗಳಿಗಾಗಿ ಮಾತ್ರ ನಿರ್ವಹಿಸಲಾಗುತ್ತಿದೆ ಎಂಬ ಅನುಮಾನವೂ ಕಾಡುತ್ತಿದೆ. ಅಥವಾ ಇಲಾಖೆಗಳಲ್ಲಿರುವ ಸಿಬ್ಬಂದಿ ಕೊರತೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.ಒಂದೊಂದು ಕಡೆ ಹೆಸರು: ಒಂದು ವಾರ್ಡ್‌ನ ಒಂದೇ ಮನೆಯಲ್ಲಿ ವಾಸವಾಗಿರುವ ಎಲ್ಲ ಮತದಾರರ ಹೆಸರನ್ನು ಸರಣಿ ಪ್ರಕಾರ ನಮೂದಿಸದೆ ಬೇಕಾಬಿಟ್ಟಿ ಅಲ್ಲಲ್ಲಿ ನಮೂದಿಸಲಾಗಿದೆ. ಮನೆಯ ಯಜಮಾನನ ಸಂಖ್ಯೆ 16 ಇದ್ದರೆ ಆತನ ಪತ್ನಿಯ ಸಂಖ್ಯೆ 844 ನೀಡಿರುವ ಉದಾಹರಣೆಗಳು ಸಾಕಷ್ಟು ಇವೆ. ಇಷ್ಟೇ ಸಾಲದೆಂಬಂತೆ ಕೆಲವೊಂದು ಕಡೆ ಪತಿ ಒಂದು ವಾರ್ಡ್ ಆದರೆ ಆತನ ಪತ್ನಿ ,ಮಕ್ಕಳ ಹೆಸರು ಅದೇ ಗ್ರಾಮದ ಇನ್ನೊಂದು ವಾರ್ಡ್‌ನಲ್ಲಿ ಇದೆ. ಹಲವು ವರ್ಷಗಳ ಹಿಂದೆ ಊರು ಬಿಟ್ಟು ಹೊರ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹೆಸರುಗಳು ಹಾಗೆ ಇವೆ. ಅವರೆಲ್ಲ ಅಲ್ಲಿನ ಇನ್ನೊಂದು ಕ್ಷೇತ್ರದ ಮತದಾರರಾಗಿದ್ದು ಇಲ್ಲೂ ಮತದಾನದ ಅವಕಾಶ ಪಡೆದಿದ್ದಾರೆ!
ಮೃತಪಟ್ಟವರ ಕೆಲವು ಹೆಸರುಗಳು ಕಣ್ತಪ್ಪಿನಿಂದ ಉಳಿದುಕೊಂಡಿರುವ ಸಾಧ್ಯತೆ ಇದೆ. ಇಂತಹ ಹೆಸರು ಇರುವವರ ಮನೆಯವರು ಮೃತಪಟ್ಟವರ ಮರಣ ಪ್ರಮಾಣ ಪತ್ರದೊಂದಿಗೆ ಬಿಎಲ್‌ಒಗಳನ್ನು ಸಂಪರ್ಕಿಸಬೇಕು. ಹಾಗೂ ಮತದಾರರ ಪಟ್ಟಿಯಲ್ಲಿದ್ದು ಮೃತಪಟ್ಟಿದ್ದರೆ ಅಂತಹವರ ವಿವರಗಳನ್ನು ತಕ್ಷಣ ಕಚೇರಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಮ್.ಮುಂಡಾಜೆಯ ಹೊನ್ನಮ್ಮ ಪ್ರತಿಕ್ರಿಯಿಸಿ, ನನ್ನ ತಾಯಿ ಸುಮಾರು ಏಳು ವರ್ಷಗಳ ಹಿಂದೆ ಮೃತಪಟ್ಟಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮರಣ ಪ್ರಮಾಣ ಪತ್ರ ನೀಡಲಾಗಿದೆ ಆದರೆ ಇದುವರೆಗೂ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿಲ್ಲ ಎನ್ನುತ್ತಾರೆ.