ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಂಗ ಸಂಸ್ಥೆಗಳು ಯಾವುದೂ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ನಮ್ಮ ಕಚೇರಿಯಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಂಗ ಸಂಸ್ಥೆಗಳನ್ನು ಮಾಡುವಂತೆ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಹೇಳಿದರು.

ಶಿರಸಿ: ಮಾನವಹಕ್ಕುಗಳ‌ ಆಯೋಗದ ಹೆಸರನ್ನು ಹೇಳಿಕೊಂಡು ಯಾರಾದರೂ ಅಧಿಕಾರಿಗಳಿಗೆ ಬೆದರಿಸುವುದು ಅಥವಾ ಸಾರ್ವಜನಿಕರಿಂದ ಹಣ ವಸೂಲಿ ಮಾಡುವ ಘಟನೆಗಳು ನಡೆದಲ್ಲಿ ತಕ್ಷಣ ಮಾಹಿತಿ ಹಕ್ಕುಗಳ ಆಯೋಗಕ್ಕೆ ದೂರು ನೀಡಬೇಕು ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಹೇಳಿದರು.

ನಗರದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮಾನವ ಹಕ್ಕುಗಳನ್ನು ಗೌರವಿಸಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಅಧಿಕಾರ ಎಲ್ಲರಿಗೂ ಇದೆ. ಮಾನವ ಹಕ್ಕುಗಳ ಆಯೋಗದಿಂದ ಸಾಕಷ್ಟು ಜನರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಆದರೆ ಇತ್ತೀಚೆಗೆ ಮಾನವ ಹಕ್ಕುಗಳ ಆಯೋಗದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮಾಹಿತಿಗಳು ಬರಲಾರಂಭಿಸಿದೆ‌. ಮಾನವ ಹಕ್ಕುಗಳ ಹೆಸರಿನಲ್ಲಿ ಸಂಘಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ನೋಂದಣಿ ಮಾಡಿಕೊಂಡ ಸಂಘಗಳ ಮುಖ್ಯಸ್ಥರ ಸಭೆ ನಡೆಸಿದ್ದೇವೆ. ಆಯೋಗದ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಂಗ ಸಂಸ್ಥೆಗಳು ಯಾವುದೂ ಇಲ್ಲ. ಬೆಂಗಳೂರಿನಲ್ಲಿ ಮಾತ್ರ ನಮ್ಮ ಕಚೇರಿಯಿದೆ. ಮಾನವ ಹಕ್ಕುಗಳ ದಿನಾಚರಣೆಯ ದಿನದಂದು ಪ್ರತಿ ತಾಲೂಕಿನಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಮಾಹಿತಿಗಳನ್ನು ನೀಡುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೂ ತಿಳಿಸಲಾಗಿದೆ. ಮಾನವ ಹಕ್ಕುಗಳ ಆಯೋಗಕ್ಕೆ ಪತ್ರದ ಮೂಲಕ ಅಥವಾ ಆನ್‌ಲೈನ್‌ ಮೂಲಕ ಸಹ‌ದೂರು ದಾಖಲಿಸಬಹುದು. ನಮ್ಮ ದೂರುಗಳಿಗೆ ಸರ್ಕಾರ ಸಹ ಉತ್ತಮವಾಗಿ ಸ್ಪಂದಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಂಗ ಸಂಸ್ಥೆಗಳನ್ನು ಮಾಡುವಂತೆ ಸಭೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.

ಸಾರ್ವಜನಿಕರಿಗೆ ಇರುವ ಮೂಲಭೂತ ಹಕ್ಕುಗಳನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಉಲ್ಲಂಘನೆಯ ಬಗ್ಗೆ ಇಲಾಖೆಗಳಿಗೆ ದೂರುಗಳು ಬಂದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಎಸ್.ಕೆ. ವಂಟಿಗೋಡಿ ಹೇಳಿದರು.

ಶಿರಸಿ ತಹಸೀಲ್ದಾರ್ ಪಟ್ಟರಾಜ ಗೌಡ, ಸಿದ್ದಾಪುರ ತಹಸೀಲ್ದಾರ್‌ ಎಂ.ಆರ್. ಕುಲಕರ್ಣಿ, ಡಿಎಸ್‌ಪಿ ಗೀತಾ ಪಾಟೀಲ್, ತಾಪಂ ಇಒ ಚನ್ನಬಸಪ್ಪ ಹಾವಣಗಿ, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಮತ್ತಿತರರು ಇದ್ದರು.