‘ಎಚ್.ಡಿ.ಕುಮಾರಸ್ವಾಮಿ ಬಹಳ ದೊಡ್ಡವರು, ಅವರು ಯಾರ ಬೆಂಬಲವನ್ನೂ ಪಡೆಯುವುದಿಲ್ಲ. ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಹೇಳಿದ್ದಾರೆ.

 ಬೆಂಗಳೂರು : ‘ಎಚ್.ಡಿ.ಕುಮಾರಸ್ವಾಮಿ ಬಹಳ ದೊಡ್ಡವರು, ಅವರು ಯಾರ ಬೆಂಬಲವನ್ನೂ ಪಡೆಯುವುದಿಲ್ಲ. ಒಕ್ಕಲಿಗರ ಮಠ, ಒಕ್ಕಲಿಗರ ಸಂಘ, ಒಕ್ಕಲಿಗ ಜಾತಿಯನ್ನು ಎಂದೂ ಉಪಯೋಗಿಸಿಕೊಂಡಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಹೇಳಿದ್ದಾರೆ.

ಜತೆಗೆ ‘ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿ ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿದ್ದರೆ’ ಎಂದೂ ಅವರು ತಿರುಗೇಟು ನೀಡಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯದಲ್ಲಿ ಧರ್ಮಪೀಠ ತಲೆ ಹಾಕುವುದು ಬೇಡ ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯ್ತು ಎಂಬುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು? ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿದ್ದರೆ? ಅಂದು ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ?’ ಎಂದು ಹರಿಹಾಯ್ದರು.

ಕೆಲ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ನಾನು ಯಾರ ಬೆಂಬಲ ಕೇಳಿರಲಿಲ್ಲ:

ನಾನು ಯಾರ ಬೆಂಬಲವನ್ನೂ ಕೇಳಿರಲಿಲ್ಲ. ಅವರು ಪ್ರೀತಿಯಿಂದ ಮಾತಾಡಿದರೆ ಬೇಡ ಎನ್ನಲು ಸಾಧ್ಯವೇ? ನಾನು ಒಂದು ಸಮುದಾಯದಲ್ಲಿ ಹುಟ್ಟಿದ್ದರೂ ಎಲ್ಲಾ ಸಮುದಾಯಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಎಂದು ಇದೇ ವೇಳೆ ಶಿವಕುಮಾರ್ ಹೇಳಿದರು.

ಬಾಳೆಹೊನ್ನೂರು ಸ್ವಾಮೀಜಿ, ಶ್ರೀಶೈಲ ಸ್ವಾಮೀಜಿಗಳು ಸೇರಿ ಸಾಕಷ್ಟು ಸ್ವಾಮೀಜಿಗಳು ನನ್ನ ಪರ ಮಾತನಾಡಿದ್ದಾರೆ. ಜೈನ ಸ್ವಾಮೀಜಿಗಳು ದೊಡ್ಡ ಸಮಾವೇಶದಲ್ಲೇ ನನಗೆ ಆಶೀರ್ವಾದ ಮಾಡಿದ್ದರು. ಅದನ್ನು ತಪ್ಪು ಎನ್ನಲು ಸಾಧ್ಯವೇ? ಎಂದರು.

ಎಚ್‌ಡಿಕೆ ಹೇಳಿದ್ದು ಏನು?

ಕಾಂಗ್ರೆಸ್‌ ಆಂತರಿಕ ವಿಚಾರದಲ್ಲಿ ಸ್ವಾಮೀಜಿಗಳ ಮಧ್ಯಪ್ರವೇಶ ಅನಗತ್ಯ. ರಾಜಕಾರಣಿಗಳಷ್ಟೇ ರಾಜಕಾರಣ ಮಾಡಲಿ. ಸ್ವಾಮೀಜಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು. ನಾನು ಅಧಿಕಾರ ಕಳೆದುಕೊಂಡಾಗ ಯಾವ ಮಠಾಧಿಪತಿಗಳ ನೆರವನ್ನೂ ಕೇಳಿರಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ.

ದೇವೇಗೌಡರು ಸಿಎಂ ಆಗಿದ್ದು ಶ್ರೀಗಳಿಂದ ಅಲ್ಲ: ಎಚ್‌ಡಿಕೆ ಕಿಡಿ 

ಮಾಜಿ ಪ್ರಧಾನಿ ದೇವೇಗೌಡರು ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿ ಎಂದು ಯಾವ ಸ್ವಾಮೀಜಿಯೂ ಹೇಳಿಕೆ ನೀಡಿರಲಿಲ್ಲ. ಡಿಕೆಶಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರು ತಮ್ಮ ಶ್ರಮದಿಂದ ಮುಖ್ಯಮಂತ್ರಿ ಆಗಿದ್ದಾರೆ. ಅದರ ಬಗ್ಗೆ ಇವರ್‍ಯಾರು ಚರ್ಚೆ ಮಾಡುವ ನೈತಿಕತೆ ಹೊಂದಿಲ್ಲ. ದೇವೇಗೌಡರು ಆ ರೀತಿ ರಾಜಕೀಯ ಮಾಡಿದ್ದರೆ 1974ರಲ್ಲಿಯೇ ಸಿಎಂ ಆಗುತ್ತಿದ್ದರು ಎಂದರು. 

. ಅಂದು ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ಮಾಡಿರಲಿಲ್ಲ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿ ಎಂದು ಯಾವ ಸ್ವಾಮೀಜಿಯೂ ಹೇಳಿಕೆ ನೀಡಿರಲಿಲ್ಲ. ಡಿಕೆಶಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.