ನಾಯಕತ್ವ ವಿಚಾರದಲ್ಲಿ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು : ನಾಯಕತ್ವ ವಿಚಾರದಲ್ಲಿ ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರು ನಡೆಯುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ವರಿಷ್ಠರ ಸೂಚನೆಯಂತೆ ಶನಿವಾರ ಸಿಎಂರ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಸಿದ್ದರಾಮಯ್ಯ ಅವರೊಂದಿಗೆ ಉಪಹಾರ ಸೇವಿಸಿ ಒಂದು ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಚರ್ಚೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿ ಅವರ ಮಾತಿನ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ಸಿದ್ದರಾಮಯ್ಯ ಅವರ ಎಲ್ಲ ಹೇಳಿಕೆಗಳಿಗೂ ತಮ್ಮ ಸಹಮತ ವ್ಯಕ್ತಪಡಿಸಿದರು. ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು, ಹೈಕಮಾಂಡ್ ತೀರ್ಮಾನದಂತೆ ಕೆಲಸ ಮಾಡುತ್ತಿದ್ದೇವೆ. ನಾವು ಜನರಿಗೆ ಕೊಟ್ಟ ಮಾತಿನಂತೆ ನಡೆಯುತ್ತಿದ್ದೇವೆ. ಜನರ ನಿರೀಕ್ಷೆ, ಆಕಾಂಕ್ಷೆ, ಆಶೋತ್ತರ ಈಡೇರಿಸುವುದು ನಮ್ಮ ಕರ್ತವ್ಯ. ಇಷ್ಟು ದಿನ ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ, ಮುಂದೆಯೂ ಅದೇ ರೀತಿ ಕೆಲಸ ಮಾಡಲು ಅಚಲ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.

ಕಷ್ಟದ ಸಮಯದಲ್ಲಿದೆ:

ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪಕ್ಷ ಕಷ್ಟದ ಸಮಯದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಹತ್ತರ ಪಾತ್ರ ನಿರ್ವಹಿಸಲಿದೆ. ರಾಜ್ಯದಲ್ಲಿ 2028ಕ್ಕೂ ನಾನು ಮತ್ತು ಮುಖ್ಯಮಂತ್ರಿ ಇಬ್ಬರೂ ಒಟ್ಟಾಗಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು, ನಂತರ 2029 ಲೋಕಸಭೆ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಎದುರಿಸಿ ರಾಷ್ಟ್ರಮಟ್ಟದಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಹೇಳಿದರು.

ಇಡೀ ಕಾಂಗ್ರೆಸ್ ಒಂದೇ ಗುಂಪು:

ಬಣ ರಾಜಕೀಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ಎಸ್‌.ಎಂ.ಕೃಷ್ಣ ಅವರ ಕಾಲದಲ್ಲೂ ಗುಂಪುಗಾರಿಕೆ ಮಾಡಿಲ್ಲ. ಇವತ್ತಿಗೂ ಅವಕಾಶ ಕೊಟ್ಟಿಲ್ಲ. ನನಗೆ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೊದಲ ಆರು ತಿಂಗಳು ನನ್ನನ್ನು ಮಂತ್ರಿ ಮಾಡದೇ ಇದ್ದಾಗಲೂ ನಾನು ಒಂದೇ ಒಂದು ಮಾತನ್ನೂ ಆಡಿರಲಿಲ್ಲ ಎಂದರು.

ಒಟ್ಟಾಗಿ ಕೆಲಸ ಮಾಡುವ ನನ್ನ ನಿರ್ಧಾರ ಅಚಲ. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು, ಪ್ರತಿಯೊಬ್ಬ ಶಾಸಕರಿಗೆ ಶಕ್ತಿ ತುಂಬಿ, ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವುದು ನಮ್ಮಿಬ್ಬರ ಕರ್ತವ್ಯ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಅನೇಕ ಕಾರ್ಯಕ್ರಮ ರೂಪಿಸಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ನೀಡಿರುವ ಸಂದೇಶಕ್ಕೆ ನನ್ನ ಸಹಮತವಿದೆ ಎಂದರು.

ದೆಹಲಿಗೆ ಭೇಟಿ ನೀಡುತ್ತೀರಾ ಎಂದು ಕೇಳಿದಾಗ, ಪಕ್ಷದ ವರಿಷ್ಠರು ನಮ್ಮನ್ನು ಕರೆದರೆ, ನಾವು ಖಂಡಿತವಾಗಿಯೂ ಹೋಗುತ್ತೇವೆ. ಅದರ ಹೊರತಾಗಿ ಮೆಕ್ಕೆಜೋಳ, ಕಬ್ಬು ದರ ನಿಗದಿ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಸಂಸತ್ ಅಧಿವೇಶನದಲ್ಲಿ ಸಂಸದರು ಧ್ವನಿ ಎತ್ತಬೇಕಿದೆ. ಈ ವಿಚಾರವಾಗಿ ಸಂಸದರ ಜೊತೆ ನಾವು ಚರ್ಚೆ ಮಾಡಬೇಕಿದೆ ಎಂದರು.