ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಗದ್ದುಗೆ ಗುದ್ದಾಟ ಸಾಮಾಜಿಕ ಜಾಲತಾಣದಲ್ಲೂ ಮುಂದುವರೆದಿದ್ದು, ಕೊಟ್ಟ ಮಾತಿನ ಹೆಸರಿನಲ್ಲಿ ಪರಸ್ಪರ ‘ವರ್ಡ್ ವಾರ್’(ಪದ ಸಮರ) ನಡೆಸಿದ್ದಾರೆ!
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಗದ್ದುಗೆ ಗುದ್ದಾಟ ಸಾಮಾಜಿಕ ಜಾಲತಾಣದಲ್ಲೂ ಮುಂದುವರೆದಿದ್ದು, ಕೊಟ್ಟ ಮಾತಿನ ಹೆಸರಿನಲ್ಲಿ ಪರಸ್ಪರ ‘ವರ್ಡ್ ವಾರ್’(ಪದ ಸಮರ) ನಡೆಸಿದ್ದಾರೆ!
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕೃತ ಎಕ್ಸ್ ಖಾತೆಯಲ್ಲಿ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ’ (ವರ್ಡ್ ಪವರ್ ಈಸ್ ವರ್ಲ್ಡ್ ಪವರ್) ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಜನರಿಗಾಗಿ ಜಗತ್ತನ್ನು ಉತ್ತಮಗೊಳಿಸದೆ ಹೋದರೆ ಕೊಟ್ಟ ಮಾತು (ವರ್ಡ್ ಪವರ್) ಶಕ್ತಿ ಆಗುವುದಿಲ್ಲ. ನಮ್ಮ ಮಾತು ಕೇವಲ ಹೇಳಿಕೆಯಲ್ಲ ಅದೇ ನಮಗೆ ಜಗತ್ತು’ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿ ನ್ಯಾಯಮೂರ್ತಿಗಳಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲಿ ಅಥವಾ ಬೇರೆ ಯಾರೇ ಆಗಲಿ ನುಡಿದಂತೆ ನಡೆಯಬೇಕು. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ಅತಿ ದೊಡ್ಡ ಶಕ್ತಿ ಎಂದು ಹೇಳಿದ್ದರು.
ಇದರಲ್ಲಿ ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ಅತಿ ದೊಡ್ಡ ಶಕ್ತಿ’ ಎಂಬ ಸಾಲನ್ನು ಮಾತ್ರ ಶಿವಕುಮಾರ್ ಅವರು ಗುರುವಾರ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದು ಅಧಿಕಾರ ಹಸ್ತಾಂತರ ಕುರಿತು ಹೇಳಿರುವ ಮಾತು ಎಂದು ಚರ್ಚೆಯಾಗಿತ್ತು.
ಸಿಎಂ ಸಿದ್ದರಾಮಯ್ಯ ತಿರುಗೇಟು:
ಇದಕ್ಕೆ ತಿರುಗೇಟು ನೀಡಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಜನರಿಗಾಗಿ ಜಗತ್ತನ್ನು ಉತ್ತಮಗೊಳಿಸದೇ ಹೋದರೆ ಕೊಟ್ಟ ಮಾತು ಶಕ್ತಿ ಆಗುವುದಿಲ್ಲ. ನಮ್ಮ ಮಾತು ಕೇವಲ ಹೇಳಿಕೆಯಲ್ಲ ಅದೇ ನಮಗೆ ಜಗತ್ತು’ ಎಂದು ಪಂಚ ಗ್ಯಾರಂಟಿಗಳ ಸಾಧನೆಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ್ದಾರೆ.
ನಾನು ಯಾವುದೇ ಪೋಸ್ಟ್ ಮಾಡಿಲ್ಲ, ಅದು ಫೇಕ್: ಡಿಕೆಶಿ
ತಮ್ಮ ಎಕ್ಸ್ ಖಾತೆಯ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಾನು ಯಾವುದೇ ಪೋಸ್ಟ್ ಮಾಡಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ ಎಂದು ನಾನು ಪೋಸ್ಟ್ ಮಾಡಿಲ್ಲ. ಅದು ಫೇಕ್’ ಎಂದರು.
ಈ ವೇಳೆ ಶಿವಕುಮಾರ್ ಅವರ ಅಧಿಕಾರಿಗಳು, ‘ನಿನ್ನೆಯ ಕಾರ್ಯಕ್ರಮದಲ್ಲಿ ನೀವು ನೀಡಿದ್ದ ಹೇಳಿಕೆ ಪೋಸ್ಟ್ ಮಾಡಲಾಗಿದೆ’ ಎಂದು ಸ್ಪಷ್ಟನೆ ನೀಡಿದರೂ ಶಿವಕುಮಾರ್ ಅವರು ಅದನ್ನು ನಿರಾಕರಿಸಿದರು.
- ಕೊಟ್ಟು ಮಾತು ಉಳಿಸಿಕೊಳ್ಳುವುದೇ ವಿಶ್ವದ ಅತಿದೊಡ್ಡ ಶಕ್ತಿ: ಡಿಸಿಎಂ
- ಜಗತ್ತನ್ನು ಉತ್ತಮಗೊಳಿಸದೆ ಹೋದರೆ ಮಾತು ಶಕ್ತಿಯೇ ಅಲ್ಲ: ಸಿಎಂ
ಡಿಕೆ ಪೋಸ್ಟ್
ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ಅತಿ ದೊಡ್ಡ ಶಕ್ತಿ).
ಸಿದ್ದು ತಿರುಗೇಟು
ಜನರಿಗಾಗಿ ಜಗತ್ತನ್ನು ಉತ್ತಮಗೊಳಿಸದೆ ಹೋದರೆ ವರ್ಡ್ ಎಂಬುದು ಪವರ್ ಆಗುವುದಿಲ್ಲ.
ಡಿಕೆ ಸ್ಪಷ್ಟನೆ
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದ ದೊಡ್ಡ ಶಕ್ತಿ ಎಂದು ನಾನು ಪೋಸ್ಟ್ ಮಾಡಿಲ್ಲ. ಅದು ಫೇಕ್