ಸಾರಾಂಶ
ಆತಂಕದಲ್ಲಿ ಬಿಸರಳ್ಳಿ ಗ್ರಾಮದ ದಲಿತರು
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳತಾಲೂಕಿನ ಬಿಸರಳ್ಳಿ ಗ್ರಾಮದ ಮರಳು ಸಿದ್ಧೇಶ್ವರ ಮಠದ ಆಸ್ತಿ ಹಾಗೂ ದಲಿತರ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದ್ದು, ಆಸ್ತಿ ಮಾಲೀಕರು ಆತಂಕಗೊಂಡಿದ್ದಾರೆ. ನಾಲ್ಕಾರು ವರ್ಷಗಳ ಹಿಂದೆಯೇ ಈ ವಕ್ಫ್ ಹೆಸರು ಸೇರಿದ್ದು, ಅಂದಿನಿಂದ ಇವರ ಆಸ್ತಿಯ ಮೇಲೆ ಸಾಲವೂ ಸಿಗುತ್ತಿಲ್ಲ ಮತ್ತು ಆಸ್ತಿಯ ವರ್ಗಾವಣೆಯೂ ಆಗುತ್ತಿಲ್ಲ.
ಇದರಿಂದ ರೋಸಿ ಹೋಗಿರುವ ಬಿಸರಳ್ಳಿ ಗ್ರಾಮದ ಅನೇಕರು ಕಂದಾಯ ಇಲಾಖೆಗೂ ಸುತ್ತಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ವಕ್ಫ್ ಬೋರ್ಡ್ ಬಳಿಯೇ ಹೋಗಿ ಎಂದಿದ್ದರಿಂದ ಅಲ್ಲಿಗೆ ಹೋದರೂ ಪ್ರಯೋಜನವಾಗಿಲ್ಲ.ಅವರ ಬಳಿ ಇರುವ ದಾಖಲೆ ತೋರಿಸುತ್ತಿಲ್ಲ, ನಮ್ಮ ಬಳಿ ಇರುವ ದಾಖಲೆ ನೋಡುತ್ತಿಲ್ಲ. ವಕ್ಫ್ ಆಸ್ತಿ ಎಂದಷ್ಟೇ ಹೇಳುತ್ತಾರೆಯೇ ಹೊರತು ಬೇರೇನು ಹೇಳುತ್ತಿಲ್ಲ ಎಂದು ತಮ್ಮ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವ ಶಿವಯ್ಯ ಶಿವಲಿಂಗಯ್ಯ ಹೇಳುತ್ತಾರೆ.
ನಮಗೆ ಸಾಕು ಬೇಕಾಗಿ ಹೋಗಿದೆ. ನಾಲ್ಕಾರು ವರ್ಷಗಳಿಂದ ನಾವು ಇದನ್ನು ಪರಿಪಡಿಸಿಕೊಳ್ಳಲು ನಡೆಸಿದ ಪ್ರಯತ್ನ ಫಲ ನೀಡಿಲ್ಲ, ಯಾರೂ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ಶಾಸಕರನ್ನು ಭೇಟಿಯಾಗಿದ್ದೇವೆ, ಅಧಿಕಾರಿಗಳನ್ನು ಭೇಟಿಯಾಗಿದ್ದೇವೆ. ಆದರೂ ನಮಗೆ ಪರಿಹಾರ ದೊರೆಯುತ್ತಿಲ್ಲ ಎಂದು ಹೇಳುತ್ತಾರೆ.ಮರಳುಸಿದ್ಧೇಶ್ವರ ಮಠದ ಇನಾಮ್ ಭೂಮಿಯಲ್ಲೂ ವಕ್ಫ್ ಆಸ್ತಿ ಎಂದು ದಾಖಲಾಗಿದೆ. ಸರ್ವೆ ನಂ. 90ರಲ್ಲಿ ಬಂದಿದ್ದು, 91ರಲ್ಲಿ ಬಂದಿಲ್ಲ, 92ರಲ್ಲಿಯೂ ಅನೇಕ ಭೂಮಿಗಳಲ್ಲಿ ವಕ್ಫ್ ಹೆಸರು ಬಂದಿದೆ.
ನಮ್ಮ ಭೂಮಿ, ಕೇರಿಯವರ (ದಲಿತರ) ಭೂಮಿ ಸೇರಿದಂತೆ ಅನೇಕ ಭೂಮಿಯಲ್ಲಿ ವಕ್ಫ್ ಎಂದು ಬಂದಿದೆ. ಸರ್ವೆ ನಂ. 90ರಲ್ಲಿಯೇ 20ಕ್ಕೂ ಹೆಚ್ಚು ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ.ದಾಖಲೆ ಇವೆ:
ಮೈಸೂರು ಸಂಸ್ಥಾನ ಇರುವಾಗಿನಿಂದ ಇಲ್ಲಿಯವರೆಗೂ ದಾಖಲೆ ಇವೆ. ಮೈಸೂರು ಸಂಸ್ಥಾನದವರು ದಾನ ಕೊಟ್ಟಿರುವ ಭೂಮಿಯಲ್ಲಿಯೂ ವಕ್ಫ್ ಹೆಸರು ಸೇರಿಕೊಂಡಿದೆ. ಇನಾಮ್ ಭೂಮಿ ಹಂಚಿಕೆ ಮಾಡಿದಾಗಿನಿಂದ ನಮ್ಮ ಬಳಿ ದಾಖಲೆ ಇವೆ. ಎಲ್ಲಿಯೂ ವಕ್ಫ್ ಹೆಸರು ಇರಲಿಲ್ಲ. ಆದರೆ, 6 ವರ್ಷಗಳ ಹಿಂದೆ ಏಕಾಏಕಿ ನಮ್ಮ ಭೂಮಿಯ ಪಹಣಿಯಲ್ಲಿ ಹೆಸರು ಸೇರಿದೆ. ಭೂಮಿಯ ಪಹಣಿಯನ್ನು ಸರ್ಕಾರವೇ ಫಾರ್ಮ್ ನಂಬರ್ 10 ಮಾಡಿಕೊಡುವಾಗ ಈಗ ಗದ್ದಲ ಆಗಿವೆ. ನಮಗೂ ಸಾಲ ಪಡೆಯಲು ಹೋದಾಗಲೇ ನಮ್ಮ ಪಹಣಿಯಲ್ಲಿ ವಕ್ಫ್ ಹೆಸರು ಇದೆ ಎಂದು ಗೊತ್ತಾಗಿದೆ. ಈಗ ಮಾರಲು ಬರುತ್ತಿಲ್ಲ, ಆಸ್ತಿ ವರ್ಗಾವಣೆ ಮಾಡಲು ಆಗುತ್ತಿಲ್ಲ. ಅಷ್ಟೇ ಯಾಕೆ ಸಾಲವೂ ದೊರೆಯುತ್ತಿಲ್ಲ ಎಂದು ಶಿವಯ್ಯ ವಿವರಿಸುತ್ತಾರೆ.ಕುಕನೂರಿನಲ್ಲಿ ಟಿ. ರತ್ನಾಕರ ಅವರಿಗೆ ಸೇರಿದ 4 ಎಕರೆ ಭೂಮಿಯ ಪಹಣಿಯಲ್ಲಿಯೂ ವಕ್ಫ್ ಎಂದು ನಮೂದಿಸಲಾಗಿದೆ. ಇದನ್ನು ತೆಗೆಯಲು ನಡೆಸಿದ ಪ್ರಯತ್ನ ಕೈಗೂಡಿಲ್ಲ. ಅಷ್ಟೇ ಅಲ್ಲ, ನ್ಯಾಯಾಲಯದ ಮೆಟ್ಟಿಲು ಏರಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ.
ಹೀಗೆ, ಜಿಲ್ಲೆಯಲ್ಲಿ ದಲಿತರು, ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯದ ಆಸ್ತಿಗಳ ಪಹಣಿಯಲ್ಲಿಯೂ ವಕ್ಫ್ ಎಂದು ನಮೂದಿಸಲಾಗಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಮರಳುಸಿದ್ದೇಶ್ವರ ಮಠದ ಇನಾಮ್ ಭೂಮಿಯಲ್ಲಿಯೂ ವಕ್ಫ್ ಎಂದು ಇರುವುದು ಗೊತ್ತಾಗಿದೆ.