ಸಾಮರಸ್ಯ ನಿರ್ಮಿಸಿದಲ್ಲಿ ಸ್ಮಾರ್ಟ್ ಸಿಟಿ ಹೆಸರಿಗೆ ಅರ್ಥ

| Published : Dec 29 2023, 01:32 AM IST

ಸಾಮರಸ್ಯ ನಿರ್ಮಿಸಿದಲ್ಲಿ ಸ್ಮಾರ್ಟ್ ಸಿಟಿ ಹೆಸರಿಗೆ ಅರ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಸ್ವಚ್ಛತೆಗೆ ಎಲ್ಲರ ಸಹಭಾಗಿತ್ವ ಅನಿವಾರ್ಯ. ಸಜ್ಜನರ ನಾಡು ನಿರ್ಮಾಣಕ್ಕೆ ಆಡಳಿತ, ನಾಗರಿಕರ ಮಧ್ಯೆ ನಂಬಿಕೆ, ಭರವಸೆಗಳು ಬೇಕು ಎಂದು ಶಿವಮೊಗ್ಗದ ಪರೋಪಕಾರಂ ಕುಟುಂಬದ ಎನ್‌.ಎಂ. ಶ್ರೀಧರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಊರೊಂದು ಸುಶಿಕ್ಷಿತರ ಹಾಗೂ ಸಜ್ಜನರ ಬೀಡು ಆಗಬೇಕಾದರೆ ಅಲ್ಲಿ ಸಾರ್ವಜನಿಕ ಆಡಳಿತ ಹಾಗೂ ನಾಗರಿಕರ ಮಧ್ಯೆ ನಂಬಿಕೆ, ಭರವಸೆ ಜೊತೆಗೆ ಅತಿ ಮುಖ್ಯವಾಗಿ ಸಾಮರಸ್ಯ ಉಂಟಾಗುವಂತಹ ವಾತಾವರಣ ಸೃಷ್ಟಿಯಾಗಬೇಕು. ಆಗ ಮಾತ್ರ ಸ್ಮಾರ್ಟ್ ಸಿಟಿ ಎಂಬ ಹೆಸರಿಗೆ ಅರ್ಥ ಬರುತ್ತದೆ ಎಂದು ಪರೋಪಕಾರಂ ಕುಟುಂಬದ ಕಟ್ಟಾಳು ಎನ್.ಎಂ.ಶ್ರೀಧರ್ ಹೇಳಿದರು.

ಪರೋಪಕಾರಂ ಕುಟುಂಬವು 736ನೇ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್‍ ಆವರಣದಲ್ಲಿ ಬುಧವಾರ ಠಾಣೆ ಪೊಲೀಸರೊಂದಿಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸರ್ಕಾರಿ ಇಲಾಖೆಗಳು, ಅದರಲ್ಲೂ ಮುಖ್ಯವಾಗಿ ಜನರೊಂದಿಗೆ ಅತಿ ಹೆಚ್ಚು ಸಂಪರ್ಕ ಹೊಂದಿರುವಂತಹ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮಧ್ಯೆ ಒಂದು ಉತ್ತಮ ಬಾಂಧವ್ಯ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಪರೋಪಕಾರಂ ಕುಟುಂಬ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಪರೋಪಕಾರಂ ಕುಟುಂಬವು ಪ್ರತಿ ಭಾನುವಾರ ಮತ್ತು ಬುಧವಾರ ಶಿವಮೊಗ್ಗ ನಗರದ ವಿವಿಧ ಪಾರ್ಕ್‍ಗಳು, ಸರ್ಕಾರಿ ಶಾಲಾ- ಕಾಲೇಜುಗಳು, ಇಲಾಖೆಗಳು ಮತ್ತಿತರೆಡೆ ಪರಿಸರ ಸ್ವಚ್ಛತೆಯೊಂದಿಗೆ ದೇಶಭಕ್ತಿ, ಅಧ್ಯಾತ್ಮದ ಪ್ರಮುಖ ಧ್ಯೇಯದೊಂದಿಗೆ ಸೌಹಾರ್ದತೆ, ನಿಸ್ವಾರ್ಥತೆ, ವ್ಯಕ್ತಿಗಳಲ್ಲಿ ನೈತಿಕ ಮೌಲ್ಯವನ್ನು ಮೈಗೂಡಿಸುವಿಕೆಯನ್ನು ಧ್ಯೇಯವನ್ನಾಗಿಸಿಕೊಂಡಿದೆ ಎಂದು ತಿಳಿಸಿದರು.

ಕೋಟೆ ಪೊಲೀಸ್‌ ಠಾಣೆಯ ಎಸ್‌ಐ ಎನ್‌.ಕುಮಾರ್ ಮಾತನಾಡಿ, ಎನ್‍ಜಿಒ, ಟ್ರಸ್ಟ್ ಅಥವಾ ಸಂಘ- ಸಂಸ್ಥೆ ಅಲ್ಲದ ಪರೋಪಕಾರಂನ ಕಾರ್ಯಸೂಚಿ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಅದರಲ್ಲೂ ಮಹಿಳೆಯರು, ಮಕ್ಕಳು ಸಹ ಪರೋಪಕಾರಂನ ಕಾರ್ಯಗಳಲ್ಲಿ ಸಕ್ರಿಯವಾಗಿರುವುದು ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಹೆಡ್‍ಕಾನ್‌ಸ್ಟೇಬಲ್‌ ಹನುಮಂತಪ್ಪ, ಸಿಐ ಸಿ.ಆರ್.ಕೊಪ್ಪದ್, ಎಎಸ್‍ಐ ಶ್ರೀನಿವಾಸ್, ನಾಗೇಶ್, ಹೆಡ್‍ ಕಾನ್‌ಸ್ಟೇಬಲ್‍ಗಳಾದ ನಾಗರಾಜ್, ಹನುಮಂತಪ್ಪ, ಸಿಬ್ಬಂದಿ ರವಿ, ಚಂದ್ರು, ಮಲ್ಲೇಶ್, ಕೃಷ್ಣನಾಯ್ಕ್, ನಿತಿನ್, ಅಂಜಿನಪ್ಪ, ರಮೇಶ್, ಧನಂಜಯ ಕೈ ಜೋಡಿಸಿದರು.

ಪರೋಪಕಾರಂ ಕುಟುಂಬದ ಎನ್.ಎಂ.ಲೀಲಾಬಾಯಿ, ಅನಿಲ್ ಹೆಗಡೆ, ಕೆ.ಎಸ್‌.ವೆಂಕಟೇಶ್, ಎನ್.ಎಂ.ರಾಘವೇಂದ್ರ, ಕೆ.ಎಸ್.ಸುರೇಶ್, ಮಾಲಿನಿ ಕಾನಡೆ, ಮಾಲತಿ, ಆರ್.ಕಿರಣ್, ಬಿ.ಪಾಶ್ವನಾಥ್ , ಕಾರ್ಪೆಂಟರ್ ಕುಮಾರ್, ಓಂ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

- - - ಕೋಟ್‌ ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಋಣಾತ್ಮಕ ಗುಣಗಳ ಕಡೆ ಗಮನ ಕೊಡದೇ, ಧನಾತ್ಮಕ ಅಂಶಗಳನ್ನು ಬಿಂಬಿಸಬೇಕು. ಪರಸ್ಪರ ಸಹಕಾರ, ಸಹಬಾಳ್ವೆಯ ಸದೃಢ ಸಮಾಜ ನಿರ್ಮಾಣವಾಗಬೇಕು ಎಂದರು

- ಹರ್ಷ, ಎಎಸ್‍ಐ

- - - -27ಎಸ್‌ಎಂಜಿಕೆಪಿ01:

ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಪರೋಪಕಾರಂ ಕುಟುಂಬವು 736ನೇ ಕಾರ್ಯಕ್ರಮದ ಭಾಗವಾಗಿ ಠಾಣೆ ಪೊಲೀಸರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡಿತು.