ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಸ್‌ಐಆರ್ ಕುರಿತಂತೆ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್‍ಐಆರ್ ಸಂಬಂಧ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾರಾದರೂ ದುರುದ್ದೇಶ ಪೂರ್ವಕವಾಗಿ, ನಿರ್ಧಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಸುಳ್ಳು ಮಾಹಿತಿ ನೀಡಿ ‘ಫಾರಂ-7’ ಹೆಸರುಗಳನ್ನು ಕೈಬಿಡಲು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಅನಗತ್ಯವಾಗಿ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ, ತಿದ್ದುಪಡಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ. ಸಲ್ಲಿಕೆಯಾಗಿರುವ ಪ್ರತಿಯೊಂದು ಅರ್ಜಿದಾರರಿಗೂ ಮೊದಲಿಗೆ ನೋಟಿಸ್ ಜಾರಿ ಮಾಡಲಾಗುವುದು. ನಂತರ ದಾಖಲೆಗಳ ಸಮೇತ ವಿಚಾರಣೆಗೆ ಆಹ್ವಾನಿಸಿ, ಸೂಕ್ತ ಪರಿಶೀಲನೆ ನಡೆಸಲಾಗುತ್ತದೆ. ಸದ್ಯ ಸಲ್ಲಿಕೆಯಾಗಿರುವ ಸುಮಾರು 2,372 ಆಕ್ಷೇಪಣೆ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಲಿದ್ದಾರೆ. ದಾಖಲೆಗಳು ಸರಿಯಾಗಿದ್ದರೆ ಮಾತ್ರ ಅಂಗೀಕರಿಸಲಾಗುವುದು, ಇಲ್ಲವಾದಲ್ಲಿ ತಿರಸ್ಕರಿಸಲಾಗುವುದು. ಅಂತಿಮವಾಗಿ ಇಡೀ ಪ್ರಕ್ರಿಯೆಯ ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಗರದ ಕೆಲವು ವಾರ್ಡ್‍ಗಳಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ದುರುದ್ದೇಶದಿಂದ ಕೆಲವು ಸಾರ್ವಜನಿಕರು ಫಾರಂ-7 ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಅಲ್ಪಸಂಖ್ಯಾತರು ಹಾಗೂ ನಿರ್ದಿಷ್ಟ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಶಬ್ಬೀರ್ ಅವರು, ಇಂತಹ ಅರ್ಜಿಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ರಮ್ಯಾ, ಯಾವುದೇ ಅರ್ಹ ಮತದಾರರ ಹೆಸರನ್ನು ಅನಗತ್ಯವಾಗಿ ಪಟ್ಟಿಯಿಂದ ಕೈಬಿಡಲು ಅವಕಾಶ ನೀಡುವುದಿಲ್ಲ. ಪ್ರತಿಯೊಂದು ಅರ್ಜಿಯ ಮೂಲ ಹಾಗೂ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಖುದ್ದು ಪರಿಶೀಲಿಸಲಿದ್ದಾರೆ. ಸಾರ್ವಜನಿಕರು ಅಥವಾ ಯಾವುದೇ ವ್ಯಕ್ತಿಗಳು ಚುನಾವಣಾ ಸಿಬ್ಬಂದಿಗೆ ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟರೆ ಅವರ ಮೇಲೆ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮತದಾರರ ಪಟ್ಟಿಯ ಶುದ್ಧೀಕರಣ ಹಾಗೂ ಪರಿಶೀಲನೆ ಸಂದರ್ಭದಲ್ಲಿ ಅರ್ಹ ಮತದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಪ್ರತಿಯೊಂದು ಹಂತದಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಆಫ್‍ಲೈನ್ ಹಾಗೂ ಆನ್‍ಲೈನ್ ಮೂಲಕ ಸ್ವೀಕೃತವಾಗಿರುವ ಫಾರಂ-7ಹೆಸರು ತೆಗೆದುಹಾಕುವಿಕೆ ಅರ್ಜಿ ಅರ್ಜಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ತಹಶೀಲ್ದಾರ್, ಇಆರ್‍ಒ ಹಾಗೂ ಎಆರ್‍ಒ ಅಧಿಕಾರಿಗಳು ಪ್ರತಿಯೊಂದು ಅರ್ಜಿಯನ್ನೂ ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಅರ್ಜಿ ಸಲ್ಲಿಸಿದವರು ಹಾಗೂ ಯಾರ ಹೆಸರು ತೆಗೆಯಲು ಆಕ್ಷೇಪಣೆ ಸಲ್ಲಿಸಲಾಗಿದೆಯೋ ಅವರಿಬ್ಬರಿಗೂ ಕಡ್ಡಾಯವಾಗಿ ನೋಟಿಸ್ ಜಾರಿಗೊಳಿಸಿ, ಖುದ್ದು ವಿಚಾರಣೆ ನಡೆಸಲಾಗುವುದು. ಮತದಾರರು ಮೃತಪಟ್ಟಿದ್ದಾರೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳಿದ್ದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್, ಚುನಾವಣಾ ತಹಸೀಲ್ದಾರ್ ಬೀಬಿ ಫಾತಿಮಾ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜೆಡಿಎಸ್ ಮುಖಂಡ ಸೈಯದ್ ನಸುರುಲ್ಲಾ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ.ಯಶವಂತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶಬ್ಬೀರ್, ಡಿ.ಎನ್.ಮೈಲಾರಪ್ಪ, ಸಿಪಿಐ (ಎಂ) ಡಿಒಸಿ ಸಿ.ಕೆ.ಗೌಸ್‍ಪೀರ್ ಇದ್ದರು.