ರಾಷ್ಟ್ರಕ್ಕೆ ಒಳ್ಳೆಯ ಪರಿಸರ ನಿರ್ಮಾಣ ಅಗತ್ಯ: ಕೃಷಿ ಸಚಿವ ಚಲುವರಾಯಸ್ವಾಮಿ

| Published : Oct 29 2025, 01:00 AM IST

ರಾಷ್ಟ್ರಕ್ಕೆ ಒಳ್ಳೆಯ ಪರಿಸರ ನಿರ್ಮಾಣ ಅಗತ್ಯ: ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯರಿಗೆ ಪರಿಸರ ಮಾಲಿನ್ಯದ ಅರಿವು ಮೂಡಿಸುವುದಕ್ಕಿಂತಲೂ ವಿದ್ಯಾರ್ಥಿಗಳಿಗೆ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮ, ಅನಾನುಕೂಲದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಗಿಡ-ಮರಗಳನ್ನು ಬೆಳೆಸುವುದು, ಅರಣ್ಯ ಸಂರಕ್ಷಣೆ, ನದಿಗಳ ಸ್ವಚ್ಛತೆ ಕಾಪಾಡುವುದನ್ನು ಚಿಕ್ಕ ವಯಸ್ಸಿನಿಂದ ಅವರ ಮನಸ್ಸಿಗೆ ತುಂಬಿದರೆ ಪರಿಸರ ಸಂರಕ್ಷಕರಾಗಿ ಹೊರಹೊಮ್ಮುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರಕ್ಕಾಗಿ ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಪರಿಸರವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ. ಪರಿಸರದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಗಳವಾರ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ದೆಹಲಿ, ಮುಂಬೈ ಸೇರಿ ಹಲವಾರು ಕಡೆಗಳಲ್ಲಿ ಮಾಲಿನ್ಯ ಸಮಸ್ಯೆ ಎದುರಾಗಿದೆ. ಬೆಂಗಳೂರಲ್ಲೂ ಸಹ ಪರಿಸರ ಮಲಿನಗೊಳ್ಳುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಮಾಲಿನ್ಯ ಮಾಡದ ಉಳಿಸುವುದು ಎಲ್ಲರ ಕರ್ತವ್ಯವಾಗಿದೆ.

ಹಿರಿಯರಿಗೆ ಪರಿಸರ ಮಾಲಿನ್ಯದ ಅರಿವು ಮೂಡಿಸುವುದಕ್ಕಿಂತಲೂ ವಿದ್ಯಾರ್ಥಿಗಳಿಗೆ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮ, ಅನಾನುಕೂಲದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಗಿಡ-ಮರಗಳನ್ನು ಬೆಳೆಸುವುದು, ಅರಣ್ಯ ಸಂರಕ್ಷಣೆ, ನದಿಗಳ ಸ್ವಚ್ಛತೆ ಕಾಪಾಡುವುದನ್ನು ಚಿಕ್ಕ ವಯಸ್ಸಿನಿಂದ ಅವರ ಮನಸ್ಸಿಗೆ ತುಂಬಿದರೆ ಪರಿಸರ ಸಂರಕ್ಷಕರಾಗಿ ಹೊರಹೊಮ್ಮುವರು ಎಂದರು.

ಮಹಿಳೆಯರ ಆರೋಗ್ಯದ ಹಿತದೃಷ್ಟಿ ಮತ್ತು ಪರಿಸರದ ಹಿತದೃಷ್ಟಿಯಿಂದ ಜಿಲ್ಲೆಯನ್ನು ಪ್ಯಾಡ್‌ಮುಕ್ತ ಜಿಲ್ಲೆಯನ್ನಾಗಿಸಲು ಮಹಿಳೆಯರಿಗೆ ಉಚಿತ ಮುಟ್ಟಿನ ಕಪ್ ವಿತರಣೆ ಮಾಡಲಾಗುತ್ತಿದೆ. ನಮ್ಮ ಮಹಿಳೆಯರು ಜಾಗೃತರಾಗಬೇಕು. ಮುಟ್ಟಿನ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳಿಂದ ಉತ್ತಮ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು. ಎಲ್ಲರೂ ಸಹ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ನರೇಂದ್ರಸ್ವಾಮಿ ಅವರು ಸಂಪುಟದಲ್ಲಿಲ್ಲ ಎನ್ನುವುದನ್ನು ಬಿಟ್ಟರೆ ಅವರಿಗೆ ಒಳ್ಳೆಯ ಒಳ್ಳೆಯ ಹುದ್ದೆ ದೊರಕಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೆಲಸ ಮಾಡಲು ಸರ್ಕಾರ ಸೂಕ್ತ ವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಶಂಸಿಸಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಕಾವೇರಿ ನದಿ ನೀರು ಕಲುಷಿತವಾಗುತ್ತಿದೆ. ಕೈಗಾರಿಕೆಗಳು, ರೆಸಾರ್ಟ್, ಹೋಟೆಲ್‌ಗಳ ತ್ಯಾಜ್ಯ ನೀರು, ವಸತಿಗೃಹಗಳ ಒಳಚರಂಡಿ ನೀರೆಲ್ಲವೂ ಕಾವೇರಿ ನದಿಯನ್ನು ಸೇರುತ್ತಿದೆ. ನದಿಯ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಾರ್ಯಕ್ರಮ ಮಾಡಿ ಭಾಷಣ ಮಾಡಿದರೆ ಉಪಯೋಗ ಇಲ್ಲ. ನದಿಯ ನೀರನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಟ್ಟಿನ ಕಪ್ ಲೋಗೋ ಬಿಡುಗಡೆ ಮಾಡಲಾಯಿತು. ಕೃಷಿ ಸಖಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕಿಯರಿಗೆ ಸಾಂಕೇತಿಕವಾಗಿ ಮುಟ್ಟಿನಕಪ್ ವಿತರಿಸಲಾಯಿತು. ಜಿಲ್ಲೆಯಲ್ಲಿ ಪರಿಸರಕ್ಕೆ ಕೊಡುಗೆ ನೀಡಿರುವ ಎಂ.ಯೋಗೇಶ್, ಗೊರವಾಲೆ ಜಯಶಂಕರ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ನಹೀಂ ಇತರರಿದ್ದರು.ಮೈಷುಗರ್ ಅಧ್ಯಕ್ಷರಿಗೆ ವೇದಿಕೆಯಲ್ಲೇ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯಿಂದ ಮೊಲಾಸಸ್ ನೀರನ್ನು ಹೊರಬಿಟ್ಟಿದ್ದರಿಂದ ಜಲಚರಗಳ ಸಾವಿಗೆ ಕಾರಣವಾಗಿರುವ ಬಗ್ಗೆ ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರಿಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ವೇದಿಕೆಯಲ್ಲೇ ಎಚ್ಚರಿಕೆ ನೀಡಿದರು.

ಮಂಗಳವಾರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಮಾತನಾಡುವ ವೇಳೆ ಮೈಷುಗರ್ ಕಾರ್ಖಾನೆ ವಿರುದ್ಧವೂ ಮಂಡಳಿಗೆ ದೂರು ಬಂದಿದೆ. ಕಾರ್ಖಾನೆಯಿಂದ ಹೊರಬಿಟ್ಟ ಮೊಲಾಸಸ್ ಕಾಲುವೆ ಮೂಲಕ ನೀರು ಸೇರಿ ಕಲುಷಿತಗೊಂಡಿದೆ. ಅದೇ ನೀರು ಕೆರೆಗೆ ಹರಿದು ಜಲಚರಗಳ ಸಾವಿಗೂ ಕಾರಣವಾಗಿದೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವೇದಿಕೆಯಿಂದಲೇ ಎಚ್ಚರಿಸಿದರು.